Sunday, December 3, 2023

Latest Posts

ಟೆಕ್ಸಾಸ್‌ ಶಾಲೆಯಲ್ಲಿ ಘೋರ ದುರಂತ: ಗುಂಡಿನ ದಾಳಿಯಲ್ಲಿ 18 ಮಕ್ಕಳು ಸೇರಿದಂತೆ 21ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕದಲ್ಲಿ ಟೆಕ್ಸಾಸ್‌ನ ಪ್ರಾಥಮಿಕ ಶಾಲೆಯೊಂದರಲ್ಲಿ 18 ವರ್ಷದ ಯುವಕನೋರ್ವ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ 18 ಶಾಲಾ ಮಕ್ಕಳು ಸೇರಿದಂತೆ ಮೂವರು ಶಾಲಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮೃತ ವಿದ್ಯಾರ್ಥಿಗಳು 4 ರಿಂದ 11 ವರ್ಷದೊಳಗಿನವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗುಂಡು ಹಾರಿಸಿದ ಯುವಕನನ್ನು ಪೊಲೀಸ್ ಅಧಿಕಾರಿಗಳು ಎನ್‌ಕೌಂಟರ್‌ ಮಾಡಿರುವುದಾಗಿ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬ್ಬೋಟ್ ಸ್ಪಷ್ಟಪಡಿಸಿದ್ದಾರೆ.

ತನ್ನ ಸ್ವಂತ ವಾಹನದಲ್ಲಿ ಆಗಮಿಸಿದ ಆಕ್ರಮಣಕಾರ ಗನ್‌ ಹಿಡಿದು ಶಾಲೆಗೆ ಪ್ರವೇಶಿಸಿದ್ದಾನೆ. ದಾಳಿಗೆ ರೈಫಲ್‌ ಬಳಸಿರುವುದಾಗಿ ಟೆಕ್ಸಾಸ್ ಗವರ್ನರ್ ಹೇಳಿದ್ದಾರೆ. ಗುಂಡಿನ ದಾಳಿ ನಡೆದ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು 500 ವಿದ್ಯಾರ್ಥಿಗಳಿದ್ದರು ಎನ್ನಲಾಗಿದೆ. ಗುಂಡಿನ ದಾಳಿ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕೂಡಲೇ ಎಚ್ಚೆತ್ತು ಶಾಲೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು, ಶ್ವೇತಭವನಕ್ಕೆ ವಿಚಾರ ಮುಟ್ಟಿಸಿದ್ದಾರೆ. ಶಾಲೆಯಲ್ಲಿ ಗುಂಡಿನ ದಾಳಿ ನಡೆಸುವ ಮೊದಲು ದುಷ್ಕರ್ಮಿ ತನ್ನ ಅಜ್ಜಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳ ತನಿಖೆಯಿಂದ ತಿಳಿದುಬಂದಿದೆ.

2018 ರಲ್ಲಿ ಫ್ಲೋರಿಡಾದ ಪಾರ್ಕ್‌ಲ್ಯಾಂಡ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 14 ಹೈಸ್ಕೂಲ್ ವಿದ್ಯಾರ್ಥಿಗಳು ಮತ್ತು ಮೂವರು ಶಿಕ್ಷಕರು ಸಾವನ್ನಪ್ಪಿದ್ದರು. ಘಟನೆಯ ನಂತರ ಇದು ಅತ್ಯಂತ ಕೆಟ್ಟ ಘಟನೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಟೆಕ್ಸಾಸ್‌ನ ಬಫಲೋ ಸೂಪರ್‌ಮಾರ್ಕೆಟ್‌ನಲ್ಲಿ ಇತ್ತೀಚೆಗಷ್ಟೇ ಗುಂಡಿನ ದಾಳಿ ನಡೆದಿದೆ. ಘಟನೆ ನಡೆದು ಹತ್ತು ದಿನಗಳ ಬಳಿಕ ಮತತೊಂದು ಘೋರವಾದ ದುರಂತ ಇದಾಗಿದ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದರು. ಟೆಕ್ಸಾಸ್‌ ಶಾಲೆಯ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥವಾಗಿ ಶ್ವೇತಭವನ ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಶನಿವಾರದವರೆಗೆ ಧ್ವಜಗಳನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!