ಬ್ರಿಟೀಷರಿಗೆ ಕನಸಿನಲ್ಲೂ ಕಾಡುತ್ತಿದ್ದ ವೀರ ಪರಾಕ್ರಮಿ ಠಾಕೂರ್ ಕಿಶೋರ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಠಾಕೂರ್ ಕಿಶೋರ್ ಸಿಂಗ್ ಅವರು 1857 ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ ಧೀರ ಯೋಧ.
ಅವರು ಮಧ್ಯ ಪ್ರದೇಶದ ದಾಮೋಹ್ ಜಿಲ್ಲೆಯ ಹಿಂದೋರಿಯಾದಲ್ಲಿ ಜನಿಸಿದರು. ಈ ಅಮರ ಹೋರಾಟಗಾರ 1857 ರ ದಂಗೆಯಲ್ಲಿ ದಾಮೋಹ್ ಜಿಲ್ಲೆಯಿಂದ ಹೆಚ್ಚಿನ ಕೊಡುಗೆ ನೀಡಿದ್ದ. ಲೋಧಿ ಕ್ಷತ್ರಿಯ ಸಮಾಜದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದ ಠಾಕೂರ್ ಕಿಶೋರ್ ಸಿಂಗ್ ಅವರು ತಮ್ಮ ಪತ್ನಿಯ ಸ್ಫೂರ್ತಿಯೊಂದಿಗೆ ಕ್ರಾಂತಿಯ ಹೋರಾಟಕ್ಕೆ ಧುಮುಕಿದರು. 1857ರಲ್ಲಿ ಠಾಕೂರ್ ಕಿಶೋರ್ ಸಿಂಗ್ ನೇತೃತ್ವದಲ್ಲಿ ದಾಮೋಹ್‌ನಲ್ಲಿ ದಂಗೆ ಪ್ರಾರಂಭವಾಯಿತು. ಆ ಸಮಯದಲ್ಲಿ ಸಿಂಗ್‌ ಒಡೆತನದಲ್ಲಿದ್ದ ಹಿಂದೂರಿಯಾ ಜಾಗೀರ್ ಸಾಗರ ಕಮಿಷನರೇಟ್ ಅಡಿಯಲ್ಲಿ ಬರುತ್ತಿತ್ತು. ದಂಗೆಯನ್ನು ನಿಲ್ಲಿಸಿ ಶರಣಾಗುವಂತೆ ಬ್ರಿಟಿಷರ ಪ್ರಸ್ತಾಪವನ್ನು ಕಿಶೋರ್ ಸಿಂಗ್ ತಿರಸ್ಕರಿಸಿದರು. ಆಗ ಬ್ರಿಟಿಷರು ಸಂಪೂರ್ಣ ಜಾಗೀರ್ ಅನ್ನು ಹಿಂದಿರುಗಿಸುವಂತೆ ಕಿಶೋರ್‌ ಸಿಂಗ್‌ ಗೆ ಎಚ್ಚರಿಕೆ ನೀಡಿದರು.
ಆದರೆ ಇದಕ್ಕೆ ಉತ್ತರವಾಗಿ ಕಿಶೋರ್‌ ಸಿಂಗ್‌ ಬ್ರಿಟೀಷರ ವಿರುದ್ಧ ದೊಡ್ಡ ಆಕ್ರಮಣವನ್ನು ಆರಂಭಿಸಿದ. ದಾಮೋಹ್‌ನ ಕೋಟೆಯಿಂದ ಒಂದೂವರೆ ಲಕ್ಷ ರೂಪಾಯಿಗಳ ಖಜಾನೆಯನ್ನು ದೋಚಲು ಪ್ರಯತ್ನಿಸಿದರು. ಆದರೆ ಈ ಕಾರ್ಯದಲ್ಲಿ ವಿಫಲನಾದನು, ಶಹಘರ್‌ನ ಬಖ್ತಾಬಲಿ ಮತ್ತು ಬಾನ್‌ಪುರದ ಮರ್ದನ್ ಸಿಂಗ್ ಅವರು ಠಾಕೂರ್‌ ಸಿಂಗ್‌ ನೆರವಾಗಲು ಮಿಲಿಟರಿ ಸಹಾಯವನ್ನು ಕಳುಹಿಸಿದರು. ಪರಿಣಾಮವಾಗಿ, ಎಲ್ಲಾ ಲೋಧಿ ಸಮುದಾಯಗಳು ಒಗ್ಗೂಡಿದವು. ಅವರೆಲ್ಲಾ ಒಗ್ಗೂಡಿ ಕ್ರಾಂತಿಕಾರಿಗಳ ಸೈನ್ಯವನ್ನು ಸಿದ್ಧಪಡಿಸಲು ಪ್ರಾರಂಭಿಸಿದರು. ಅಂತಿಮವಾಗಿ, 1857ರ ಜುಲೈ 10 ರಂದು ಠಾಕೂರ್ ಕಿಶೋರ್ ಸಿಂಗ್ ತನ್ನ ದೊಡ್ಡ ಸೈನ್ಯದೊಂದಿಗೆ ದಾಮೋಹ್‌ನಲ್ಲಿರುವ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡರು ಮತ್ತು ಸರ್ಕಾರಿ ದಾಖಲೆಗಳನ್ನು ನಾಶಪಡಿಸಿದರು. ಠಾಕೂರ್‌ ಸಿಂಗ್‌ ಪರಾಕ್ರಮಕ್ಕೆ ಬೆಚ್ಚಿದ ಇಂಗ್ಲೀಷರು ಅಲ್ಲಿಂದ ಓಡಿಹೋದರು.
ಪ್ರತೀಕಾರ ತೀರಿಸಿಕೊಳ್ಳಲು ಬ್ರಿಟೀಷರು ಕ್ಯಾಪ್ಟನ್ ಪಿಂಕಿ ನೇತೃತ್ವದಲ್ಲಿ 42ನೇ ಸ್ಥಳೀಯ ಪದಾತಿ ದಳವನ್ನು ಹಿಂದೋರಿಯಾಕ್ಕೆ ಕಳುಹಿಸಿದರು. ಆ ವೇಳೆಗಾಗಲೇ ಕಿಶೋರ್ ಸಿಂಗ್ ತನ್ನ ಸೇನೆಯ ಬಲದಿಂದ ಹತ್ತಿರದ ಹಳ್ಳಿಗಳು ಮತ್ತು ಪೊಲೀಸ್ ಠಾಣೆಗಳನ್ನು ವಶಪಡಿಸಿಕೊಂಡಿದ್ದನು. ಇದರಿಂದಾಗಿ ಫಿರಂಗಿಗಳ ಸೈನ್ಯವನ್ನು ಎದುರಿಸಲು ಗ್ರಾಮಸ್ಥರು ಕಿಂಚಿತ್ತೂ ಹೆದರಲಿಲ್ಲ ಮತ್ತು  ಭಾರತೀಯರೆಲ್ಲರೂ ಒಗ್ಗೂಡಿ ಹೋರಾಟ ಮಾಡಿದ್ದರಿಂದ ಅಂತಿಮವಾಗಿ ಬ್ರಿಟೀಷರ ಸೈನ್ಯವು ಹಿಮ್ಮೆಟ್ಟಬೇಕಾಯಿತು.
ಹತಾಶರಾದ ಇಂಗ್ಲೀಷರು ಠಾಕೂರ್ ಕಿಶೋರ್ ಸಿಂಗ್‌ನನ್ನು ಹಿಡಿದವರಿಗೆ 1000 ರೂಪಾಯಿ ಬಹುಮಾನ ಘೋಷಿಸಿದರು. ಅಂತಿಮವಾಗಿ ಬ್ರಿಟಿಷರು ಜಬಲ್ಪುರ್ ಮತ್ತು ನಾಗ್ಪುರದಿಂದ ದೊಡ್ಡ ಪ್ರಮಾಣದ ಮಿಲಿಟರಿ ಪಡೆಯನ್ನು ಕರೆಸಿಕೊಂಡು ಹಿಂದೋರಿಯಾ ಕೋಟೆಯ ಮೇಲೆ ದಾಳಿ ಮಾಡಿದರು. ಈ ವೇಳೆ ಅನೇಕ ಕ್ರಾಂತಿಕಾರಿಗಳನ್ನು ಸೆರೆಹಿಡಿಯಲಾಯಿತು. ಆದರೆ ಕಿಶೋರ್ ಸಿಂಗ್ ಕೆಲವು ಸಹಚರರೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಸಿಯಾಮಲ್ ಜು ನೇತೃತ್ವದಲ್ಲಿ ಠಾಕೂರ್‌ ಸಿಂಗ್‌ ರನ್ನು ಮಣಿಸಲು ಸೈನ್ಯವನ್ನು ಕಳುಹಿಸಲಾಯಿತು. ಬ್ರಿಟೀಷ್‌ ಸೈನ್ಯವು ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಯಿತು. ಠಾಕೂರ್ ಕಿಶೋರ್ ಸಿಂಗ್ ಸೈನ್ಯಕ್ಕೆ ಸೋಲುಂಟಾಯಿತು. ಆದರೆ ಅದೇ ಸಂದರ್ಭದಲ್ಲಿ ರಾವ್ ಸಾಹೇಬ್ ಸರೂಪ್ ಸಿಂಗ್ ಅವರ ನೇತೃತ್ವದಲ್ಲಿ ದಾಮೋಹ್‌ನಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಎದ್ದಿತು. ಇದರಿಂದಾಗಿ ಯುದ್ಧವು ಮತ್ತೆ ಮುಂದುವರೆಯಿತು. ಅಂತಿಮವಾಗಿ ಬ್ರಿಟೀಷರು ಬಹಳವೇ ಕಷ್ಟಪಟ್ಟು ಈ ಚಳುವಳಿಯನ್ನು ನಿಗ್ರಹಿಸಿದರು. ಠಾಕೂರ್ ಕಿಶೋರ್ ಸಿಂಗ್ ಸಾವಿನ ಕುರಿತಾದ ಎಲ್ಲಾ ಮಾಹಿತಿಗಳನ್ನು ಬ್ರಿಟೀಷರು ಮುಚ್ಚಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!