ಪಿಎಂ ಕಿಸಾನ್ ವಾರ್ಷಿಕ ಮೊತ್ತ ಹೆಚ್ಚಾಗುತ್ತಾ?: ಲೋಕಸಭೆಯಲ್ಲಿ ಸರಕಾರ ನೀಡಿದೆ ಮಹತ್ವದ ಮಾಹಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಕುರಿತು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಈ ಬಾರಿಯ ಮಧ್ಯಂತರ ಬಜೆಟ್ ನಲ್ಲಿ ಸಹಾಯಧನದ ಮೊತ್ತವನ್ನು 6 ಸಾವಿರ ರೂ.ನಿಂದ 8 ಸಾವಿರ ಅಥವಾ 12 ಸಾವಿರ ರೂ.ಗೆ ಏರಿಕೆ ಮಾಡಬಹುದೆಂಬ ನಿರೀಕ್ಷೆ ಕೂಡ ಇತ್ತು. ಹೀಗಾಗಿ ಈ ಕುರಿತು ಸರಕಾರ ಸ್ಪಷ್ಟನೆ ನೀಡಿದ್ದು, ಪಿಎಂ ಕಿಸಾನ್ ಯೋಜನೆಯಲ್ಲಿ ರೈತರಿಗೆ ನೀಡುವ ಸಹಾಯಧನವನ್ನು ವಾರ್ಷಿಕ 8,000ರೂ.ನಿಂದ 12,000ರೂ.ಗೆ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಕೃಷಿ ಸಚಿವ ಅರ್ಜುನ್ ಮುಂಡ ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

ಜೊತೆಗೆ ಈ ಯೋಜನೆಯಲ್ಲಿ ಮಹಿಳಾ ರೈತರಿಗೆ ಕೂಡ ಸಹಾಯಧನ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವನೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2019ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು (ಪಿಎಂ-ಕಿಸಾನ್) ಪ್ರಾರಂಭಿಸಲಾಗಿತ್ತು. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅರ್ಹ ರೈತರಿಗೆ 2 ಸಾವಿರ ರೂಪಾಯಿಯಂತೆ, ವಾರ್ಷಿಕವಾಗಿ 6 ಸಾವಿರ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡುತ್ತದೆ. ಈ ಹಣವನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ. ಕೇಂದ್ರ ಸರ್ಕಾರವು ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿದಂತೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತಂದಿತ್ತು.

ಇದೀಗ ಪಿಎಂ ಕಿಸಾನ್ ಯೋಜನೆ ಸಹಾಯಧನವನ್ನು ವಾರ್ಷಿಕ 8,000 ರೂ.ನಿಂದ 12,000ರೂ.ಗೆ ಏರಿಕೆ ಮಾಡಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ. ಇನ್ನು ಈ ಯೋಜನೆ ಪ್ರಗತಿಯ ಬಗ್ಗೆ ಮಾಹಿತಿ ನೀಡಿದ ಸಚಿವರು, ಸರ್ಕಾರ ಈ ತನಕ 2.81 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು 11 ಕೋಟಿಗಿಂತಲೂ ಅಧಿಕ ರೈತರಿಗೆ 15 ಕಂತುಗಳಲ್ಲಿ ವಿತರಿಸಿದೆ ಎಂದು ಹೇಳಿದ್ದಾರೆ. ಭೂಮಿ ಹೊಂದಿರುವ ರೈತರಿಗೆ ಕೃಷಿ ಚುಟವಟಿಕೆಗಳಿಗೆ ಆರ್ಥಿಕ ನೆರವು ಒದಗಿಸೋದು ಈ ಯೋಜನೆ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

ಇನ್ನು ಪಿಎಂ ಕಿಸಾನ್ ಯೋಜನೆ ವಿಶ್ವದ ಅತ್ಯಂತ ದೊಡ್ಡ ನೇರ ಪ್ರಯೋಜನ ವರ್ಗಾವಣೆ (DBT) ಯೋಜನೆಯಾಗಿದೆ. ಯಾವುದೇ ಮಧ್ಯಸ್ಥಗಾರನ ನೆರವಿಲ್ಲದೆ ಈ ಯೋಜನೆಯ ಪ್ರಯೋಜನ ದೇಶಾದ್ಯಂತ ನೇರವಾಗಿ ಎಲ್ಲ ರೈತರಿಗೂ ಸಿಗುವಂತೆ ರೈತ ಕೇಂದ್ರೀಕೃತ ಡಿಜಿಟಲ್ ಮೂಲಸೌಕರ್ಯ ರೂಪಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!