ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಗಿ ಇದ್ದ ಆಂಬುಲೆನ್ಸ್‌ಗೆ ಜಾಗ ಬಿಡದೆ ದರ್ಪ ತೋರಿದ ಕಾರ್ ಚಾಲಕನಿಗೆ ಬರೋಬ್ಬರಿ 2.5 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಲೈಸೆನ್ಸ್ ಕೂಡ ರದ್ದು ಮಾಡಲಾಗಿದೆ.
ಕೇರಳದ ತಿರುವನಂತಪುರದಲ್ಲಿ ಈ ಘಟನೆ ವರದಿಯಾಗಿದ್ದು, ಆರೋಗ್ಯಸ್ಥಿತಿ ಗಂಭೀರವಾಗಿ ರೋಗಿಯನ್ನು ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಚಾಲಕ ಹಾರ್ನ್ ಮಾಡಿದ್ದಾರೆ.
ಈ ವೇಳೆ ಮುಂದೆ ಸಾಗುತ್ತಿದ್ದ ಕಾರು ಚಾಲಕ ಬೇಕೆಂದೇ ಆ್ಯಂಬುಲೆನ್ಸ್ ಗೆ ದಾರಿ ಮಾಡಿಕೊಡದೇ ಉದ್ಧಟನ ಪ್ರದರ್ಶನ ಮಾಡಿದ್ದಾನೆ. ಪದೇ ಪದೇ ಆ್ಯಂಬುಲೆನ್ಸ್ ಗೆ ಅಡ್ಡ ಬಂದು ರೋಗಿಯ ಜೀವವನ್ನು ಅಪಾಯಕ್ಕೆ ತಳ್ಳಿದ್ದಾನೆ.
ಇದರಿಂದ ಆಕ್ರೋಶಗೊಂಡ ಆ್ಯಂಬುಲೆನ್ಸ್ ಚಾಲಕ ಕಾರು ಮಾಲೀಕನ ದುರ್ವರ್ತನೆಯನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಚಾಲಕ ಎಷ್ಟೇ ಹಾರ್ಸ್ ಮಾಡಿದರೂ ದಾರಿ ಬಿಟ್ಟು ಕೊಡದ ಕಾರು ಮಾಲೀಕ ರಸ್ತೆಯಲ್ಲಿ ಬೇಕೆಂದೇ ಅಡ್ಡ ಬಂದಿದ್ದಾನೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವಿಚಾರ ತಿಳಿಯುತ್ತವೇ ಕೇರಳ ಟ್ರಾಫಿಕ್ ಪೊಲೀಸರು ವಿಡಿಯೋ ಮೂಲಕ ಕಾರಿನ ನಂಬರ್ ಮತ್ತು ಅದರ ಮಾಲೀಕನನ್ನು ಪತ್ತೆ ಮಾಡಿದ್ದಾರೆ.