ತುಂಬು ಜೀವನ ಕಂಡ ಶತಾಯುಷಿ ‘ಸೂಲಗಿತ್ತಿ ಅಜ್ಜಿ’ ಮಾಡಿಸಿದ್ದು ಬರೋಬ್ಬರಿ 14 ಸಾವಿರ ಹೆರಿಗೆ!

-ಮಂಜುನಾಥ ಹೂಡೇಂ

ಕಾನ ಹೊಸಹಳ್ಳಿ: ಆಕೆ ತುಂಬು ಜೀವನ ಕಂಡ ಶತಾಯುಷಿ. ತನ್ನ 30ನೇ ವಯಸ್ಸಿನಲ್ಲಿ ಶ್ರೇಷ್ಠ ಕಾಯಕವೊಂದನ್ನು ಆರಂಭಿಸಿ ಅನೇಕ ಮಹಿಳೆಯರ ಬಾಳಿಗೆ ಬೆಳಕಾದವಳು. ಈವರೆಗೆ 14 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿ ಎಲೆ ಮರೆಯ ಕಾಯಿಯಂತೆ ಜೀವಿಸುತ್ತಿರುವ ಸೂಲಗಿತ್ತಿ ಈರಮ್ಮ ನಮ್ಮ ನಡುವಿನ ಆದರ್ಶ.

ತಾಲೂಕಿನ ಗುಂಡುಮುಣುಗು ಗ್ರಾಪಂ ವ್ಯಾಪ್ತಿಯ ಓಬಳಶೆಟ್ಟಿಹಳ್ಳಿ ಗ್ರಾಮದ ಈರಮ್ಮಅನಕ್ಷರಸ್ಥೆ. ಕಳೆದ 6 ದಶಕಗಳಿಂದ ಸೂಲಗಿತ್ತಿಯಾಗಿ ಗ್ರಾಮೀಣ ಭಾಗದಲ್ಲಿ ಎದುರಾಗುವ ವೈದ್ಯರ ಕೊರತೆ ನಿಭಾಯಿಸಿದ್ದಾರೆ.

65 ವರ್ಷದ ಹಿಂದೆ ಹಳ್ಳಿಗಳಲ್ಲಿ ಇವರೇ ಡಾಕ್ಟರ್ ಅಂತ ಹೆಸರು ಪಡೆದಿದ್ದರು. ಯಾವುದೇ ತರಬೇತಿ ಪಡೆಯದೆ ಈರಮ್ಮ ಕೈಯ್ಯಲ್ಲಿ ಒಂದೇ ಒಂದು ಮಗು ಅಥವಾ ತಾಯಿಯ ಪ್ರಾಣಕ್ಕೆ ಹಾನಿಯಾಗದೇ ಹೆರಿಗೆ ಮಾಡಿಸಿದ್ದು, ಇವರ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿ.

ಇದಲ್ಲದೆ, ಕಣ್ಣುಗಳಲ್ಲಿ ಬಿದ್ದ ಕಸ, ಧೂಳು ಮತ್ತು ಸಣ್ಣ ಹರಳು ಕೊಳವೆಯ ಮೂಲಕ ತೆಗೆಯುವುದು, ಬುಟ್ಟಿ ನೇಯುವುದು ಇವರ ನಿತ್ಯದ ಕಾಯಕ. ಈರಮ್ಮ ಅವರಿಗೆ ಸದ್ಯ 101 ಪ್ರಾಯ. ವಯಸ್ಸಾದ ಕಾರಣ ಕಳೆದ 3 ವರ್ಷದಿಂದ ಸೂಲಗಿತ್ತಿ ಕಾಯಕ ನಿಲ್ಲಿಸಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.

ಸೇವೆ ಮಾಡಿದ ತೃಪ್ತಿ ನನಗೆ ಸದಾ ಸಂತೋಷ ಕೊಡುತ್ತದೆ. ಹೆರಿಗೆ ಮಾಡಿಸಿ ಮಗು ಹುಟ್ಟಿದರೆ ಒಂದು ಮರ ರಾಗಿ ಕೊಡುತ್ತಿದ್ದರು. ಎಂದಿಗೂ ಈ ಕಾಯಕಕ್ಕೆ ಹಣ ಪಡೆದಿಲ್ಲ ಎಂದು ಈರಮ್ಮ ತಮ್ಮ ಮಾತು ಹಂಚಿಕೊಂಡರು.

ಬೆಳಕಿಗೆ ಬಾರದ ಇಂತಹ ಎಷ್ಟೋ ಪ್ರೇರಣಾ ಜೀವಿಗಳನ್ನು ಸಮಾಜ ಹಾಗೂ ಸರ್ಕಾರದಿಂದ ಗುರುತಿಸಿ ಗೌರವಿಸುವ ಕೆಲಸವಾಗಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!