ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಜನತೆಯ ತೀರ್ಪು ಹಿಂದು ವಿರೋಧಿ ನೀತಿಗಳಿಗೆ ಸ್ಪಷ್ಟ ಪ್ರತಿಕ್ರಿಯೆ ನೀಡಿದಂತಾಗಿದೆ. ಪ್ರಧಾನಿ ಮೋದಿ ಅವರ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆಯಿಂದ ಜನರು ನಿರ್ಣಾಯಕ ತೀರ್ಪು ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದ ಆರ್.ಎನ್.ಎಸ್ ವನ್ ವಸತಿ ಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸ್ಸಾಂ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬಂದಿರುವುದು ಆಡಳಿತದ ಜನಪರತೆ ಮತ್ತು ಅಭಿವೃದ್ಧಿ ಕಾರ್ಯಗಳ ಫಲವಾಗಿದೆ. ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದೊರೆತ ಯಶಸ್ಸು ಕಾರ್ಯಕರ್ತರ ಪರಿಶ್ರಮ ಮತ್ತು ಜನಬೆಂಬಲದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಆತ್ಮ ವಿಶ್ವಾಸ ಹೆಚ್ಚಿಸಿದೆ
ಪಂಚ ರಾಜ್ಯಗಳ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿರುವುದು ಪಕ್ಷದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿವಿಧ ರಾಜ್ಯಗಳಲ್ಲಿ ಬಿಜೆಪಿ ಸಾಧಿಸಿರುವ ಗೆಲುವುಗಳು ಸಂಘಟನೆಯ ಶಕ್ತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಮೇಲಿನ ಜನರ ವಿಶ್ವಾಸದ ಪ್ರತಿಫಲವಾಗಿವೆ ಎಂದರು.
ಮುಂದೆ ಜನತೆಯ ಆಶೀರ್ವಾದ
ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಬಿಜೆಪಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುವ ವಿಶ್ವಾಸವಿದೆ.ಜನತೆ ನಮಗೆ ಆಶೀರ್ವದಿಸಲಿದ್ದಾರೆ ಎಂದು ಅವರು ಹೇಳಿದರು.
ಕೇಂದ್ರ ಸರಕಾರದೊಂದಿಗೆ ಕೈಜೋಡಿಸಬೇಕು
ಪಶ್ಚಿಮ ಏಷ್ಯಾ ಯುದ್ಧ ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಿತವ್ಯಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಮೋದಿ ನೀಡಿರುವ ಸಲಹೆಯನ್ನು ಕಾಂಗ್ರೆಸ್ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಾದ ಕಾಂಗ್ರೆಸ್ ಅನಗತ್ಯ ರಾಜಕೀಯ ಟೀಕೆಗಳಲ್ಲಿ ತೊಡಗಿದೆ ಎಂದು ಆರೋಪಿಸಿದರು. ರಾಷ್ಟ್ರಹಿತದ ವಿಚಾರಗಳಲ್ಲಿ ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಉಪ ಚುನಾವಣೆ ಮಾನದಂಡವಲ್ಲ
ಇತ್ತೀಚಿನ ಉಪಚುನಾವಣೆ ಫಲಿತಾಂಶಗಳ ಕುರಿತು ಮಾತನಾಡಿದ ಅವರು, ಹಿಂದೆ ಆಡಳಿತ ಪಕ್ಷಗಳು ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದರೂ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ಸರ್ಕಾರವೇ ಪತನವಾದ ಉದಾಹರಣೆಗಳಿವೆ ಎಂದು ಹೇಳಿದ ಅವರು ಈ ಫಲಿತಾಂಶವನ್ನು ಮುಂದಿನ ಚುನಾವಣೆಯ ಮಾನದಂಡವಾಗಿ ಪರಿಗಣಿಸಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅಭಿಮಾನೋತ್ಸವ ಐತಿಹಾಸಿಕ ಕ್ಷಣ
ಚಿತ್ರದುರ್ಗದ ಕೋಟೆನಗರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಜೀವನದ 50ನೇ ವರ್ಷದ ಅಂಗವಾಗಿ ನಡೆದ ‘ಅಭಿಮಾನೋತ್ಸವ’ ಕಾರ್ಯಕ್ರಮ ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ಕ್ಷಣವಾಗಿ ಗುರುತಿಸಿಕೊಂಡಿದೆ.ರಾಜ್ಯದ ಮೂಲೆಮೂಲೆಗಳಿಂದ ಲಕ್ಷಾಂತರ ಕಾರ್ಯಕರ್ತರು ಸ್ವಯಂಪ್ರೇರಿತವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವಿವಿಧ ಸಮಾಜಗಳ ಸಾವಿರಾರು ಮಠಾಧೀಶರೂ ಭಾಗವಹಿಸಿರುವುದು ಕಾರ್ಯಕ್ರಮದ ವೈಶಿಷ್ಟ್ಯವಾಗಿತ್ತು ಎಂದು ಬಿವೈವಿ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಯಡಿಯೂರಪ್ಪ ಅವರ ಹೋರಾಟದ ಬದುಕಿನ ವಿವಿಧ ಹಂತಗಳನ್ನು ಸ್ಮರಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದ ಎರಡು ಪುಟಗಳ ಸಂದೇಶವೂ ವಿಶೇಷ ಗಮನ ಸೆಳೆದಿದ್ದು, ಯಡಿಯೂರಪ್ಪ ಮತ್ತು ಮೋದಿ ಅವರ ನಡುವಿನ ಆತ್ಮೀಯ ಬಾಂಧವ್ಯವನ್ನು ಅದು ಪ್ರತಿಬಿಂಬಿಸಿತು ಎಂದು ಹೇಳಿದರು.
ರಾಜಕೀಯ ಅಧಿಕಾರ ಅಥವಾ ಹುದ್ದೆ ಇಲ್ಲದ ಸಂದರ್ಭದಲ್ಲಿಯೂ ಲಕ್ಷಾಂತರ ಜನರು ಒಂದೇ ವೇದಿಕೆಯಲ್ಲಿ ಸೇರಿರುವುದು ಯಡಿಯೂರಪ್ಪ ಅವರು ಕೇವಲ ನಾಯಕನಲ್ಲ, ಜನಶಕ್ತಿಯ ಪ್ರತೀಕ ಎಂಬುದನ್ನು ತೋರಿಸಿದೆ. ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲು ಕಾರ್ಯಕರ್ತರ ಸಮರ್ಪಿತ ಪರಿಶ್ರಮವೇ ಪ್ರಮುಖ ಕಾರಣ ಎಂದು ವಿಜಯೇಂದ್ರ ಹೇಳಿದರು.
ಆಶ್ಲೇಷ ಬಲಿ ಸೇವೆ
ಈ ಮೊದಲು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಆಶ್ಲೇಷ ಬಲಿ ಸೇವೆ ನೆರವೇರಿಸಿದರು. ಬಳಿಕ ಶ್ರೀ ದೇವರಿಗೆ ಮಹಾಪೂಜೆ ಸೇವೆ ಸಮರ್ಪಿಸಿ ಮದ್ಯಾಹ್ನದ ಮಹಾಪೂಜೆ ವೀಕ್ಷಿಸಿದರು. ನಂತರ ಅವರಿಗೆ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ಸ್ವೀಕರಿಸಿದರು. ನಂತರ ಶ್ರೀ ದೇವಳದಲ್ಲಿ ಬೋಜನ ಪ್ರಸಾದ ಸ್ವೀಕರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಸುಬ್ರಹ್ಮಣ್ಯ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ರಾಜೇಶ್ ಎನ್.ಎಸ್.ಪ್ರಮುಖರಾದ, ಪ್ರಸನ್ನ ದರ್ಬೆ ಮತ್ತಿತರರು ಉಪಸ್ಥಿತರಿದ್ದರು.



