May 29, 2026
Friday, May 29, 2026
spot_img

ಭಾರತದ ಅಭಿವೃದ್ಧಿಗೆ ಯುವ ಪ್ರತಿಭೆಗಳ ಕೊಡುಗೆ ಅಪಾರ: ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್

ಹೊಸ ದಿಗಂತ ವರದಿ, ದಾವಣಗೆರೆ:

ಭಾರತವನ್ನು ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಜ್ಞಾನದ ನಾಯಕತ್ವದತ್ತ ಮುನ್ನಡೆಸುವ ಯುವ ಪ್ರತಿಭೆಗಳನ್ನು ರೂಪಿಸುವಲ್ಲಿ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಹೇಳಿದರು.

ನಗರದ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಶುಕ್ರವಾರ ಕಾಲೇಜಿನ ಅಮೃತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಆತ್ಮನಿರ್ಭರ ಭಾರತದಿಂದ ಅಭೂತಪೂರ್ವ ಅವಕಾಶ

ಭಾರತವು ತಂತ್ರಜ್ಞಾನ, ನಾವೀನ್ಯತೆ ಮತ್ತು ತನ್ನ ಯುವಶಕ್ತಿಯ ಅಪಾರ ಬಲದಿಂದ ಪ್ರೇರಿತವಾದ ಪರಿವರ್ತನಾ ಯುಗಕ್ಕೆ ಸಾಕ್ಷಿಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ, ಸೆಮಿಕಂಡಕ್ಟರ್ ತಯಾರಿಕೆ, ಹಸಿರು ಇಂಧನ ಮತ್ತು ಆತ್ಮನಿರ್ಭರ ಭಾರತದಂತಹ ಉಪಕ್ರಮಗಳು ಯುವ ಇಂಜಿನಿಯರ್, ಸಂಶೋಧಕರು ಮತ್ತು ಉದ್ಯಮಿಗಳಿಗೆ ಅಭೂತಪೂರ್ವ ಅವಕಾಶ ಸೃಷ್ಟಿಸುತ್ತಿವೆ. 2047ರೊಳಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಆಶಯವು ಬಹುಮಟ್ಟಿಗೆ ಎಂಜಿನಿಯರ್, ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳ ಮೇಲೆ ಅವಲಂಬಿತವಾಗಿದೆ ಎಂದರು.

ಸಮಾಜಸೇವೆಯ ಪ್ರತಿಬಿಂಬ

ಯುಬಿಡಿಟಿ ಕಾಲೇಜಿನ 75 ವರ್ಷಗಳ ಪಯಣವು ದೃಷ್ಟಿಕೋನ, ಪರಿಶ್ರಮ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಮಾಜಸೇವೆಯ ಪ್ರತಿಬಿಂಬವಾಗಿದೆ. ದೂರದೃಷ್ಟಿಯ ಸಂಸ್ಥಾಪಕರು, ಬದ್ಧತೆಯುಳ್ಳ ಶಿಕ್ಷಕರು, ಸಮರ್ಪಿತ ಆಡಳಿತಗಾರರು, ಪರಿಶ್ರಮಿ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳ ಕೊಡುಗೆಗಳಿಂದ ಶ್ರೇಷ್ಠ ಸಂಸ್ಥೆಗಳು ತಲೆಮಾರುಗಳ ಅವಧಿಯಲ್ಲಿ ನಿರ್ಮಾಣವಾಗುತ್ತವೆ. ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ್ ರವರ ದೂರದೃಷ್ಟಿಯ ದಾನಶೀಲತೆ ಮತ್ತು ಸಂಸ್ಥೆಯ ಸ್ಥಾಪನೆಗೆ ಆಶೀರ್ವಾದ ನೀಡಿದ ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರ ಕೊಡುಗೆ ಸ್ಮರಣೀಯ. ಇಂತಹ ಸಂಸ್ಥೆಗಳು ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದತ್ತ ತಮ್ಮ ಶಾಶ್ವತ ಬದ್ಧತೆಯ ಮೂಲಕ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತವೆ ಎಂದು ಅವರು ಪ್ರಶಂಶಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾಂದನಾಥ ಮಹಾಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮಾಜಿ ಸಚಿವರಾದ ಎಂ.ಸಿ.ಸುಧಾಕರ್, ಎಸ್.ಎಸ್.ಮಲ್ಲಿಕಾರ್ಜುನ್, ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಹಾಗೂ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್(ಎಐಸಿಟಿಇ) ಮಾಜಿ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್, ಬೆಳಗಾವಿ ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಕುಲಸಚಿವ(ಆಡಳಿತ) ಡಾ.ಪ್ರಸಾದ್ ಬಿ.ರಾಂಪುರೆ, ಕುಲಸಚಿವ(ಮೌಲ್ಯಮಾಪನ) ಪ್ರೊ.ಯು.ಜೆ.ಉಜ್ವಲ್, ಯುಬಿಡಿಟಿ ಕಾಲೇಜಿನ ಪ್ರಾಂಶುಪಾಲ ಡಾ.ಡಿ.ಪಿ.ನಾಗರಾಜಪ್ಪ, ಅಮೃತ ಮಹೊತ್ಸವದ ಸಂಚಾಲಕ ಡಾ.ಎಂ.ಹೆಚ್.ದಿವಾಕರ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಇದೇ ವೇಳೆ ಕಾಲೇಜಿನ 75ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಅಮೃತ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !