ಮಗನ ಸ್ಮರಣಾರ್ಥ ಕಡು ಬಡವರಿಗೆ 40ಕ್ಕೂ ಅಧಿಕ ಸೈಟ್ ದಾನ ನೀಡಿದ ದಂಪತಿ

– ಶಿವಲಿಂಗಯ್ಯ ಹೊತಗಿಮಠ, ಲಕ್ಷ್ಮೇಶ್ವರ:
ತಾಲೂಕಿನ ಸೂರಣಗಿ ಗ್ರಾಮದ ದಂಪತಿ ದ್ಯಾಮಣ್ಣ ನೀರಲಗಿ ಹಾಗೂ ಅವರ ಪತ್ನಿ ಜ್ಯೋತಿ ಅವರು ತಮ್ಮ ಮಗನನ್ನು ಕಳೆದುಕೊಂಡು 3 ವರ್ಷಗಳು ಕಳೆದಿದ್ದು, ಮಗನ ಪುಣ್ಯತಿಥಿ ಹಿನ್ನೆಲೆಯಲ್ಲಿ ತಮ್ಮ ಎರಡು ಎಕರೆ ಜಮೀನಿನಲ್ಲಿ 40 ಕ್ಕೂ ಅಧಿಕ ನಿವೇಶನ ರೂಪಿಸಿ ಗ್ರಾಮದ ಕಡು ಬಡವರಿಗೆ ದಾನವಾಗಿ ನೀಡಲು ನಿರ್ಧರಿಸಿದ್ದಾರೆ.
ಸೂರಣಗಿ ಗ್ರಾಮದ ದ್ಯಾಮಣ್ಣ ಹಾಗೂ ಜ್ಯೋತಿ ಅವರ ಮುದ್ದಿನ ಮಗ ಜೀವನ್ ಬದುಕಿದ್ದು ಕೇವಲ ಆರೂವರೆ ವರ್ಷ ಮಾತ್ರ. ದತ್ತು ಮಗನನ್ನು ಪಡೆದರೆ ಕೇವಲ ಒಬ್ಬರಿಗೆ ಜೀವನ ಕೊಟ್ಟಂತಾಗುತ್ತದೆ. ಬಡವರಿಗೆ ನಿವೇಶನ ನೀಡುವುದು ಇದಕ್ಕಿಂತಲೂ ದೊಡ್ಡದು ಎಂದು ಯೋಚಿಸಿದ ದಂಪತಿ ಹಿರಿಯರ ಅಭಿಪ್ರಾಯ ಪಡೆದು ಬಡವರರಿಗೆ ಅಂಗವಿಕಲರಿಗೆ ಜಾಗವನ್ನು ದಾನ ರೂಪದಲ್ಲಿ ನೀಡಲು ಮುಂದಾಗಿದ್ದಾರೆ.
ದ್ಯಾಮಣ್ಣ ತನ್ನ ಹೆಸರಿನಲ್ಲಿ ಇದ್ದ 2 ಎಕರೆ ಜಾಗದಲ್ಲಿ ಪಟ್ಟಣದ 40 ಜನ ಕಡು ಬಡವರಿಗೆ, 3 ಅಂಗವಿಕಲರಿಗೆ, 1 ಮಹಿಳಾ ಸಂಘ, 1 ಯುವಕ ಮಂಡಳ, 1 ಗ್ರಾಮ ಪಂಚಾಯತಿ, 1 ಅಂಗನವಾಡಿ, ದೇವಸ್ಥಾನ ಹೀಗೆ ದಾನ ರೂಪವಾಗಿ ತಮ್ಮ ಮಗನ 3 ನೇ ವರ್ಷದ ಪುಣ್ಯ ತಿಥಿಗೆ ಕೊಡಲು ನಿರ್ಧಾರ ಮಾಡಿದ್ದಾರೆ.
6 ವರೆ ವರ್ಷ ಬದುಕಿದ್ದ ಮಗನ ಉಳಿಸಿಕೊಳ್ಳಲು ಹೋರಾಟ ಮಾಡಿದ್ದಾರೆ. ಹುಟ್ಟಿದ ಕೆಲವೇ ತಿಂಗಳು ಆರೋಗ್ಯವಾಗಿದ್ದ ಮಗ ಬೆಳೆಯುತ್ತಿದ್ದಂತೆಯೆ ಅನಾರೋಗ್ಯ ತೀವ್ರವಾಗಿ ಕಾಡಲಾರಂಭಿಸಿತು. ಹೊಟ್ಟೆಯಲ್ಲಿ ಗಂಟಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖನಾದ ಎನ್ನುವಷ್ಟರಲ್ಲೇ ಆಡುತ್ತಿದ್ದಾಗ ಬಿದ್ದು ಬ್ರೇನ್ ಡ್ಯಾಮೇಜ್ ಆಯ್ತು. ಇದರಿಂದ ವಿಚಲಿತಗೊಂಡ ದಂಪತಿ ಆತನ ಚಿಕಿತ್ಸೆಗಾಗಿ 3.5 ಎಕರೆ ಜಮೀನು ಮಾರಾಟ ಮಾಡಿ ಸುಮಾರು 15.20 ಲಕ್ಷ ವ್ಯಯಿಸಿದರೂ ಮೆದುಳು ಜ್ವರದಿಂದಾಗಿ 3 ವರ್ಷದ ಹಿಂದೆ ಮಗ ಪ್ರಾಣ ಬಿಟ್ಟಿದ್ದ.
ಜಾಗವನ್ನು ತಮ್ಮ ಸ್ವಂತ ನಿರ್ಧಾರದಿಂದ ಹಂಚದೇ ಊರಿನ ಪ್ರಮುಖರು ಸೇರಿ ಎಲ್ಲಾ ಜಾತಿ ಧರ್ಮಗಳ ಮನೆ ಇಲ್ಲದ ಕಡು ಬಡವರ ಆಯ್ಕೆ ಮಾಡಿಕೊಟ್ಟರೆ ಅವರಿಗೆ ಕೊಡುತ್ತೇವೆ ಅದು ನಮ್ಮದೆ ಗ್ರಾಮದ ಜನರಿಗೆ ಮಾತ್ರ ಎಂಬುದು ದ್ಯಾಮಣ್ಣ ನೀರಲಗಿ ಅವರ ಕುಟುಂಬದ ಭರವಸೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!