ಮೃತಪಟ್ಟಿದ್ದಾರೆ ಎಂದ ವೈದ್ಯರು: ಮರಣೋತ್ತರ ಪರೀಕ್ಷೆಗೆಂದು ಹೋಗುವಾಗ ಎದ್ದು ಕುಳಿತ ವ್ಯಕ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಮರಾಜನಗರದಲ್ಲಿ ಎದೆನೋವಿನಿಂದ ಕುಸಿದು ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕೊಂಡೊಯ್ದರೆ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಗೆಂದು ಹೊತ್ತೊಯ್ಯುವಾಗ ಆ ವ್ಯಕ್ತಿ ಕೈ ಕಾಲು ಆಡಿಸಿದ ಅನುಭವವಾಗಿದ್ದು, ಪರೀಕ್ಷಿಸಿದರೆ ಜೀವಂತ ಇರುವುದು ಗೊತ್ತಾಯಿತು.

ಇಲ್ಲಿನ ಹನೂರಿನ ವಿವೇಕಾನಂದ ಶಾಲೆಯಲ್ಲಿ ಚುನಾವಣೆ (Karnataka Elections) ತರಬೇತಿಯಲ್ಲಿದ್ದ ನೌಕರ ಜಗದೀಶ್‌ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದರು. ವಿಷಯ ತಿಳಿದು ಮೃತನ ಕುಟುಂಬಸ್ಥರ ಆಕ್ರಂದನವೂ ಮುಗಿಲು ಮುಟ್ಟಿತ್ತು. ಇನ್ನೇನು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ಅಂದುಕೊಂಡಿದ್ದಾಗ ವ್ಯಕ್ತಿಗೆ ಜೀವ ಇರುವುದು ಕಂಡು ಬಂದಿದೆ.

ಹನೂರಿನ ಖಜಾನೆ ಇಲಾಖೆಯಲ್ಲಿ ಜಗದೀಶ್ ಎಂಬುವವರು ಕೆಲಸ ನಿರ್ವಹಿಸುತ್ತಿದ್ದರು. ವಿಧಾನಸಭೆ ಚುನಾವಣೆ ನಿಮಿತ್ತ ಅವರನ್ನು ಚುನಾವಣಾ ಕರ್ತವ್ಯಕ್ಕೆ ತೊಡಗಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವೇಕಾನಂದ ಶಾಲೆಯಲ್ಲಿ ಚುನಾವಣಾ ತರಬೇತಿ ನಡೆಯುತ್ತಿತ್ತು.ಮಂಗಳವಾರ (ಏ.18) ಬೆಳಗ್ಗೆ ತರಬೇತಿಗಾಗಿ ಬಂದಿದ್ದ ಜಗದೀಶ್‌ ಎದೆನೋವಿನಿಂದ ಕುಸಿದು ಬಿದ್ದಿದ್ದರು. ಕೂಡಲೇ ಅಲ್ಲಿದ್ದವರು ಅವರನ್ನು ಕಾಮಗೆರೆ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆಯೇ ಜಗದೀಶ್‌ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾಗಿ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದರು.

ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲಾಗಿತ್ತು. ಇನ್ನೇನು ಮರಣೋತ್ತರ ಪರೀಕ್ಷೆಗಾಗಿ ಕೊಠಡಿಗೆ ತೆಗೆದುಕೊಂಡು ಹೋಗಬೇಕಿತ್ತು. ಆಗಲೇ ನೋಡಿ ಜಗದೀಶ್ ಕೈ-ಕಾಲು ಆಡಿಸಿದ್ದಾರೆ. ಇದನ್ನೂ ಸಾರ್ವಜನಿಕರು ಗಮನಿಸಿದ್ದು, ಕೂಡಲೇ ವೈದ್ಯರಿಗೆ ತಿಳಿಸಿದ್ದಾರೆ. ವೈದ್ಯರು ಪರೀಕ್ಷೆ ನಡೆಸಿದಾಗ ಜಗದೀಶ್‌ ಉಸಿರಾಡುತ್ತಿರುವುದನ್ನೂ ಗಮನಿಸಿದ್ದಾರೆ. ಹೃದಯದ ಬಡಿತ ನಿಂತೇ ಹೋಯಿತು ಎಂದುಕೊಂಡವರಿಗೆ ಅಚ್ಚರಿಯಾಗಿ ತಕ್ಷಣಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಗದೀಶ್‌ ಅವರನ್ನು ಮೈಸೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!