ಅಂತೂ ಬಚಾವಾದೆ…ಕಾರಿನ ಬಂಪರ್‌ನೊಳಗೆ ಸಿಲುಕಿದ್ದ ನಾಯಿ ಸೇಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಕಾರಿಗೆ ಡಿಕ್ಕಿಯಾದ ನಾಯಿ ಕಾರಿನ ಬಂಪರಿನೊಳಗೆ ಪ್ರತ್ಯಕ್ಷವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಎಂಬಲ್ಲಿ ನಡೆದಿದೆ.
ಬಂಪರಿನೊಳಗೆ ಸಿಲುಕಿಕೊಂಡಿದ್ದ ಈ ನಾಯಿ ಸುಮಾರು 70 ಕಿ.ಮೀ. ಸಾಗಿ ಯಾವುದೇ ಗಾಯಗಳಾಗದೆ ಆರಾಮವಾಗಿ ಬಂಪರ್ ಒಳಗಿನಿಂದ ಇಳಿದು ಹೋಗಿದೆ.

ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ದಂಪತಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಪುತ್ತೂರಿಗೆ ವಾಪಾಸಾಗುತ್ತಿದ್ದ ದಾರಿ ಮಧ್ಯೆ ಬಳ್ಪ ಎಂಬಲ್ಲಿ ನಾಯೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತಕ್ಷಣವೇ ಸುಬ್ರಹ್ಮಣ್ಯ ಅವರು ಕಾರನ್ನು ನಿಲ್ಲಿಸಿದ್ದು, ಕಾರಿನ ಸುತ್ತಮುತ್ತ ನಾಯಿಗಾಗಿ ಹುಡುಕಾಡಿದ್ದಾರೆ. ಆದರೆ, ನಾಯಿ ಅಲ್ಲಿಂದ ಎಲ್ಲಿ ಹೋಗಿದೆ ಎನ್ನುವುದನ್ನು ಊಹಿಸಲೂ ಸುಬ್ರಹ್ಮಣ್ಯ ಅವರಿಗೆ ಕಷ್ಟವಾಗಿತ್ತು.

ಅಲ್ಲಿಂದ ನೇರವಾಗಿ ಕಬಕದ ತನ್ನ ಮನೆಗೆ ಬಂದು ಕಾರನ್ನು ಪರಿಶೀಲಿಸಿದಾಗ ಬಂಪರ್‌ನ ಗ್ರಿಲ್ ತುಂಡಾಗಿರುವುದು ಗಮನಕ್ಕೆ ಬಂದಿತ್ತು. ತುಂಡಾದ ಗ್ರಿಲ್ ಮಧ್ಯೆ 70 ಕಿ.ಮೀ. ಹಿಂದೆ ತನಗೆ ಡಿಕ್ಕಿಯಾದ ನಾಯಿ ಪ್ರತ್ಯಕ್ಷವಾಗಿದೆ. ನಾಯಿಯನ್ನು ಬಂಪರ್ ಒಳಗಿಂದ ತೆಗೆಯಲಾಗದ ಸ್ಥಿತಿಯಲ್ಲಿದ್ದ ಕಾರಣ ಪಕ್ಕದ ಗ್ಯಾರೇಜ್‌ಗೆ ತೆರಳಿ ನಾಯಿಯನ್ನು ಹೊರ ತೆಗೆಯಲು ವಿನಂತಿಸಿದ್ದಾರೆ. ಗ್ಯಾರೇಜ್ ಮಂದಿ ಬಂಪರ್ ಬಿಚ್ಚಿ ನಾಯಿಯನ್ನು ಸುರಕ್ಷಿತವಾಗಿ ಕಾರಿಂದ ಹೊರತೆಗೆದಿದ್ದಾರೆ. ಸುಮಾರು 70 ಕಿ.ಮೀ.ವರೆಗೆ ಕಾರಿನ ಬಂಪರ್ ಒಳಗೇ ಇದ್ದ ನಾಯಿ ಆರಾಮವಾಗಿ ಹೊರಗೆ ಬಂದು ಅಪರಿಚಿತ ಸ್ಥಳವಾದ ಕಾರಣ ಕೊಂಚ ಗಲಿಬಿಲಿಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!