Monday, August 8, 2022

Latest Posts

ಮೊದಲ ದೇಶೀಯ ಲಸಿಕೆಗಳ ಸಂಶೋಧನೆ ಆಗಿದ್ದೇ ಕೋವಿಡ್‌ಗಾಗಿ; ಅಲ್ಲಿವರೆಗೆ ಇರಲಿಲ್ಲ ಭಾರತೀಯ ವ್ಯಾಕ್ಸಿನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಭಾರತದಲ್ಲಿ ಇಲ್ಲಿಯವರೆಗೆ ನೀಡಿದ ಎಲ್ಲ ಲಸಿಕೆಗಳು ವಿದೇಶದಿಂದ ಬಂದಿರುವವು. ಮೊದಲ ಬಾರಿಗೆ ದೇಶೀಯ ಲಸಿಕೆ ಕೋವಿಡ್ ಸಾಂಕ್ರಾಮಿಕಕ್ಕೆ ದೇಶದಲ್ಲೇ ಸಂಶೋಧನೆಗೊಂಡಿದೆ. ದೇಶದಲ್ಲಿ 160 ಕೋಟಿ ಡೋಸ್ ಲಸಿಕೆಯನ್ನು ನೀಡಲಾಗಿದೆ.

ವಿಧಾನಸಭಾ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಸಲ್ಲಿಸುವ ಸಂದರ್ಭದಲ್ಲಿ ಶಾಸಕ ರಾಜೀವ್ ಅವರು ಈ ಬಗ್ಗೆ ಮಾತನಾಡಿದ್ದಾರೆ.

ಭಾರತದಲ್ಲಿ 160 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿದ್ದು, ಕರ್ನಾಟಕದಲ್ಲಿ 9.33 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಮೊದಲ ಡೋಸ್ ಶೇ. 100 ಮತ್ತು ಎರಡನೇ ಡೋಸ್ ಶೇ. 85ರಷ್ಟು ಸಾಧನೆಯಾಗಿದೆ. ಭಾರತದ ವೈದ್ಯಕೀಯ ಸಂಸ್ಥೆ ಸಂಶೋಧನೆ ಮಾಡಿ ಕೋವಿಡ್‌ಗೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡು ಲಸಿಕೆಗಳನ್ನು ಕಂಡುಹಿಡಿದಿದ್ದು, ಭಾರತೀಯ ವಿಜ್ಞಾನಿಗಳು ಅಭಿನಂದನಾರ್ಹರು. ಪೋಲಿಯೋ ಬಂದಾಗ, ಅದರ ಲಸಿಕೆ ಭಾರತಕ್ಕೆ ಬರಲು 10 ವರ್ಷ ಹಿಡಿಯಿತು. ವಿದೇಶಿಗರು ನೀಡುವ ಲಸಿಕೆಗೆ ದಶಕಗಳ ಕಾಲ ಕಾದೆವು. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಭಾರತದ ಹೆಮ್ಮೆ ಎಂದರು ರಾಜೀವ್.

ಕಾಂಗ್ರೆಸ್ ಮುಖಂಡರಿಂದ ವಿಷಾದ ವ್ಯಕ್ತವಾಗಬೇಕಿತ್ತು:
ಒಮ್ಮೊಮ್ಮೆ ರಾಜಕೀಯ ಕಾರಣಕ್ಕಾಗಿ ಬೇಸರವಾಗುತ್ತದೆ. ಈ ಲಸಿಕೆಯನ್ನು ಬಿಜೆಪಿ ವ್ಯಾಕ್ಸಿನ್, ನರೇಂದ್ರ ಮೋದಿ ವ್ಯಾಕ್ಸಿನ್ ಎಂದು ಅಪಪ್ರಚಾರ ಮಾಡಲಾಯಿತು. ಜನನಾಯಕರಾಗಿ ಜನರ ಮುಂದೆ ನಿಂತು, ಜನರಿಗೆ ಮಾರ್ಗದರ್ಶನ ಮಾಡಿ, ಶಕ್ತಿ ತುಂಬ ಬೇಕಾದವರೇ ಈ ಲಸಿಕೆಯ ಮೇಲೆ ನಂಬಿಕೆಯಿಲ್ಲ, ವ್ಯಾಕ್ಸಿನ್ ಹಾಕುವುದಿಲ್ಲ ಎಂದರು. ಲಸಿಕೆ ಪಡೆಯುವುದಿಲ್ಲವೆಂದು ಆರೋಗ್ಯ ಕಾರ್ಯಕರ್ತರು, ಆಶಾಕಾರ್ಯಕರ್ತರ ಮೇಲೆ ಹಲ್ಲೆಗಳಾದವು. ಕಾಂಗ್ರೆಸ್ ಪಕ್ಷದ ಮುಖಂಡರು ಯಾರಾದರೂ ತಾವು ನೀಡಿದ ಈ ಹೇಳಿಕೆಗಳನ್ನು ವಾಪಸು ತೆಗೆದುಕೊಳ್ಳುತ್ತೇವೆ, ಆ ರೀತಿಯ ಹೇಳಿಕೆಗಳನ್ನು ನಾವು ಹೇಳಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಬೇಕಿತ್ತು ಎಂದು ಶಾಸಕ ರಾಜೀವ್ ಹೇಳಿದರು.

ಪ್ರಶಸ್ತಿ ಕೊಡುವ ಬದಲು ದೇಶದಿಂದ ಓಡಿಸಿದಿರಿ:
ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಅವರು ಮಧ್ಯಪ್ರವೇಶಿಸಿ, ಬಿಜೆಪಿ ವ್ಯಾಕ್ಸಿನ್ ಮತ್ತು ಮೋದಿ ವ್ಯಾಕ್ಸಿನ್ ಎಂದು ಕಾಂಗ್ರೆಸ್‌ನವರು ಯಾರು ಅಪಪ್ರಚಾರ ಮಾಡಿದರೆಂದು ನಮಗೆ ಸ್ಪಷ್ಟವಿಲ್ಲ. ಆದರೆ ಬಿಜೆಪಿಯವರು ಇದನ್ನು ಪ್ರಚಾರ ಮಾಡಿಕೊಂಡು ಹೋದರು. ಈ ವ್ಯಾಕ್ಸಿನ್ ತಯಾರು ಮಾಡಿದ ಸಂಸ್ಥೆಯ ಮಾಲೀಕನಿಗೆ ನೋಬೆಲ್ ಪ್ರಶಸ್ತಿ ಅಥವಾ ಪದ್ಮ ಪ್ರಶಸ್ತಿ ಕೊಡುವ ಬದಲು ಅವರು ದೇಶ ಬಿಟ್ಟು ಇಂಗ್ಲೇಡ್ ಹೋಗಿ ಅಲ್ಲಿ ಫ್ಯಾಕ್ಟರಿ ಮಾಡುವಂತೆ ಮಾಡಿದ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ಸದನದಲ್ಲಿ ಒಂದಷ್ಟು ಗದ್ದಲ ಉಂಟಾಯಿತು.

37 ರಾಷ್ಟ್ರಗಳಲ್ಲಿ ಕೇವಲ 10% ಲಸಿಕೆ ನೀಡಲಾಗಿದೆ:
ಈ ವೇಳೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಶೇ. 100ರಷ್ಟು ಮೊದಲ ಡೋಸ್ ಮತ್ತು ಶೇ. 90ರಷ್ಟು ಎರಡನೇ ಡೋಸ್ ಕೊಟ್ಟಿದ್ದೇವೆ. ವಿಶ್ವವೇ ಬೆರಗಾಗುವ ರೀತಿ ಇಲ್ಲಿ ಕೆಲಸ ನಡೆದಿದೆ. ಆದರೆ ಪ್ರಾರಂಭದಲ್ಲಿ ಲಸಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದವರು ಯಾರು ಎಂಬುದು ಅವರಿಗೆ ಗೊತ್ತಿದೆ. ಇವತ್ತೂ ಮುಂದುವರಿದಿರುವ ದೇಶಗಳಲ್ಲಿ ಶೇ. 50ರಷ್ಟು, 37 ದೇಶಗಳಲ್ಲಿ ಮೊದಲ ಡೋಸ್ ಇವತ್ತಿಗೂ ಶೇ. 10ರಷ್ಟು ಮಾತ್ರ ಆಗಿದೆ. 135 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂದರು.

18ವರ್ಷದೊಳಗಿನ ವಯೋಮಾನದವರಿಗೆ ನೀಡುವ ಒಂದು ಡಜನ್ ಲಸಿಕೆ ಕೊಡುತ್ತೇವೆ. ಅದನ್ನು 4-5 ಕೋಟಿಯಷ್ಟು ಮಾತ್ರ ಕೊಡುತ್ತೇವೆ. ಯಾವತ್ತೂ 130 ಕೋಟಿ ಲಸಿಕೆ ಕೊಟ್ಟ ಇತಿಹಾಸವಿಲ್ಲ. ಪ್ರಧಾನಿಯವರ ನಾಯಕತ್ವ ಮತ್ತು ಅವರ ಶ್ರಮವನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ವೈಜ್ಞಾನಿಕ ನೆಲೆಗಟ್ಟಿನಲ್ಲಿಯೇ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಕೋವಿಡ್ ನಿಯಂತ್ರಣಕ್ಕೆ ಕೆಲಸ ಮಾಡಿವೆ ಎಂದು ಹೇಳಿದರು.

ಪ್ಲೇಗ್, ಹೆಪಟೈಟೀಸ್ ಬಿ ಸಹಿತ ಯಾವುದೇ ರೋಗಗಳಿಗೆ ದೇಶೀಯ ಲಸಿಕೆ ಬಂದೇ ಇರಲಿಲ್ಲ. ವಿಶ್ವಕ್ಕೆ ಸಿಕ್ಕಿದ 20-25 ವರ್ಷಗಳ ನಂತರ ನಮಗೆ ಲಸಿಕೆ ಸಿಗುತ್ತಿತ್ತು. ಲಸಿಕೆ ವಿಚಾರದಲ್ಲಿ ಯಾರೂ ಅನುಮಾನ ವ್ಯಕ್ತಪಡಿಸುವುದು ಬೇಡ. ನಿಮಗೆ ಅಭಿನಂದನೆ ಹೇಳುವುದಕ್ಕೆ ಸಾಧ್ಯವಾಗದಿದ್ದರೂ ಟೀಕೆ ಮಾಡುವುದು ಬೇಡ. ವಿಶ್ವವೇ ಒಪ್ಪಿಕೊಂಡಿದೆ. ಭಾರತದಂತಹ ಇಷ್ಟು ದೊಡ್ಡ ದೇಶದಲ್ಲಿ ಇಷ್ಟು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿದ್ದಾರೆ, ಇಷ್ಟು ದೊಡ್ಡ ಸಂಖ್ಯೆಗೆ ಲಸಿಕೆಯನ್ನು ನೀಡಿದ್ದಾರೆ ಎಂದು ವಿಶ್ವವೇ ಅಭಿನಂದಿಸುತ್ತಿದೆ ಎಂದು ಸಚಿವ ಡಾ. ಸುಧಾಕರ್ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss