ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ, ಮಂಗಳೂರು
ಸಾವಿಗೀಡಾಗಿರುವ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದ ತನಿಖೆ ಕಾನೂನು ಪ್ರಕಾರವೇ ಆಗಲಿದೆ. ಸರಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಸಮಗ್ರವಾಗಿ ತನಿಖೆ ನಡೆಸಲಿದ್ದಾರೆ. ಡೆತ್ ನೋಟ್ ವಿಚಾರದ ತನಿಖೆಯೂ ಆಗಲಿದೆ ಎಂದವರು ಹೇಳಿದರು.
ಸಂತೋಷ್ ಪಾಟೀಲ್ ಸಾವಿನ ಪ್ರಕರಣ ಸಂಬಂಧ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಎಫ್‌ಐ ಆರ್ ದಾಖಲಾಗಿರುವ ಹಿನ್ನಲೆಯಲ್ಲಿ ಖುದ್ದು ಅವರೊಂದಿಗೆ ಮಾತುಕತೆ ನಡೆಸಿ ಘಟನೆಯ ಬಗ್ಗೆ ಎಲ್ಲಾ ಮಾಹಿತಿ ಪಡೆಯುತ್ತೇನೆ. ಈಗಾಗಲೇ ಈಶ್ವರಪ್ಪ ಅವರಲ್ಲಿ ದೂರವಾಣಿ ಮೂಲಕ ಮಾತನಾಡಿದ್ದೇನೆ. ಘಟನೆಯ ಬಗ್ಗೆ ಸಮಗ್ರವಾಗಿ ಬೆಂಗಳೂರಿನಲ್ಲಿ ಅವರೊಂದಿಗೆ ಚರ್ಚಿಸುವುದಾಗಿ ಸಿಎಂ ಹೇಳಿದರು.
ಮುಖ್ಯಮಂತ್ರಿಯವರು ಹೇಳಿದರೆ ರಾಜೀನಾಮೆ ನೀಡುವೆ ಎಂಬ ಈಶ್ವರಪ್ಪನವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ನನಗೆ ತಿಳಿದಿಲ್ಲ. ಅವರನ್ನು ಬೇಂಗಳೂರಿನಲ್ಲಿ ಭೇಟಿಯಾಗಿ ಮಾತನಾಡುತ್ತೇನೆ. ಕಾಂಗ್ರೆಸ್ ಇದರಲ್ಲಿ ತಪ್ಪು ಕಂಡುಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ ತನಿಖೆಯಲ್ಲಿ ಸತ್ಯಾಂಶ ಗೊತ್ತಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!