ಮತಾಂಧರನ್ನು ಪ್ರೋತ್ಸಾಹಿಸುವುದು ಬಿಡಿ, ಅಲ್ಪಸಂಖ್ಯಾತರಿಗೆ ರಕ್ಷಣೆ ಕೊಡಿ: ಪಾಕ್‌ ಗೆ ತಿರುಗೇಟು ನೀಡಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರವಾದಿ ಮೊಹಮ್ಮದ್ ಪೈಗಂಬರ್‌ರ ವಿರುದ್ಧ ಹೇಳಿಕೆ ನೀಡಿದ್ದ ವಕ್ತಾರೆ ನೂಪುರ್ ಶರ್ಮಾರನ್ನು ಬಿಜೆಪಿ ಅಮಾನತು ಮಾಡಿದೆ. ನೂಪುರ್ ವೈಯಕ್ತಿಕ ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರವು ಸ್ಪಷ್ಟಪಡಿಸಿದ್ದರೂ ಟೀಕಾಕಾರರು ಮಾತ್ರ ಬೆನ್ನುಬಿಡುತ್ತಿಲ್ಲ. ಈ ಹೇಳಿಕೆಯನ್ನು ಮುಂದಿಟ್ಟುಕೊಂಡು ಭಾರತದ ವಿರುದ್ಧ ದ್ವೇಷಕಾರಿದ್ದ ಇಸ್ಲಾಮಿಕ್‌ ರಾಷ್ಟ್ರಗಳ ಸಹಕಾರ ಒಕ್ಕೂಟಕ್ಕೆ ಭಾರತ ತಿರುಗೇಟು ನೀಡಿತ್ತು. ಈ ನಡುವೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ವಿವಾದವನ್ನು‌ ಮತ್ತಷ್ಟು ಕೆದಕುವ ಯತ್ನ ನಡೆಸಿದ್ದು ಭಾರತ ಕಟು ಶಬ್ಧಗಳ ಮೂಲಕ ತರಾಟೆಗೆ ತೆಗೆದುಕೊಂಡಿದೆ.
ನಮ್ಮ ಪೂಜ್ಯ ಪ್ರವಾದಿ ಕುರಿತಾಗಿ ಭಾರತದ ಬಿಜೆಪಿ ನಾಯಕರು ಮಾಡಿರುವ ಕಾಮೆಂಟ್‌ಗಳನ್ನು ಬಲವಾಗಿ ಖಂಡಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ‍್ಯವನ್ನು ಕಿತ್ತುಕೊಳ್ಳುತ್ತಿದೆ. ಅಲ್ಲಿ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆ. ಜಗತ್ತು ಈ ವಿಚಾರವನ್ನು ಗಮನಿಸಬೇಕು ಮತ್ತು ಭಾರತದ ನಡೆಯನ್ನು ಖಂಡಿಸಬೇಕು. ಜಗತ್ತಿನ ಎಲ್ಲಾ ಮುಸ್ಲಿಮರು ಪ್ರವಾದಿ ಮೇಲಿಟ್ಟಿರುವ ಪ್ರೀತಿ ಮತ್ತು ಗೌರವಕ್ಕಾಗಿ ತಮ್ಮ ಜೀವನವನ್ನು ಸಹ ತ್ಯಾಗ ಮಾಡಬಹುದು ಎಂದು ಷರೀಫ್ ಟ್ವೀಟ್ ಮಾಡಿದ್ದರು.
ಪಾಕ್ ಪ್ರಧಾನಿಯ ಟ್ವೀಟ್‌ಗೆ ಭಾರತ ತಿರುಗೇಟು ನೀಡಿದೆ. ತನ್ನ ದೇಶದ ಅಲ್ಪಸಂಖ್ಯಾತರ ಹಕ್ಕುಗಳಿಗೆ ಕಿಮ್ಮತ್ತು ಬೆಲೆ ನೀಡದ ಪಾಕಿಸ್ತಾನ ಮತ್ತೊಂದು ರಾಷ್ಟ್ರದಲ್ಲಿ ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ಕಾಮೆಂಟ್ ಮಾಡುವುದೇ ಅಸಂಬದ್ಧ ಎಂದು ಎಂದು ಭಾರತ ಟೀಕಿಸಿದೆ.
ಪಾಕಿಸ್ತಾನದಿಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಅಹ್ಮದೀಯರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಕಿರುಕುಳಕ್ಕೆ ಜಗತ್ತು ಸಾಕ್ಷಿಯಾಗಿದೆ. ಭಾರತದಲ್ಲಿ ಕೋಮುವಾದ ಹುಟ್ಟುಹಾಕಲು ಪ್ರಯತ್ನಿಸುವ ಬದಲು ಸ್ವ ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆ, ಭದ್ರತೆ ಮತ್ತು ಯೋಗಕ್ಷೇಮದ ಮೇಲೆ ಗಮನ ಕೇಂದ್ರೀಕರಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸಲಹೆ ನೀಡಿದೆ.
ಭಾರತ ಸರ್ಕಾರವು ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ. ಮತಾಂಧರನ್ನು ಶ್ಲಾಘಿಸುವ ಮತ್ತು ಅವರ ಗೌರವಾರ್ಥವಾಗಿ ಸ್ಮಾರಕಗಳನ್ನು ನಿರ್ಮಿಸುವ ಪಾಕಿಸ್ತಾನದಂತೆ ನಮ್ಮ ದೇಶವಿಲ್ಲ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣಲಾಗುತ್ತಿದೆ ಹಾಗೂ  ಗೌರವಿಸಲಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿರುಗೇಟು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!