ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೆಬನಾನ್ ಬೈರುತ್ ಮೇಲೆ ಹೆಜ್ಬುಲ್ಲಾ ಉಗ್ರ ಸಂಘಟನೆಯನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ ಉಗ್ರಗಾಮಿ ಗುಂಪಿನ ಉನ್ನತ ಕಮಾಂಡರ್ ಸೇರಿದಂತೆ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, 50 ಜನರು ಗಾಯಗೊಂಡಿದ್ದಾರೆ ಎಂದು ಉಗ್ರಗಾಮಿ ಗುಂಪು ಮತ್ತು ಲೆಬನಾನ್ ಆರೋಗ್ಯ ಸಚಿವಾಲಯಕ್ಕೆ ಹತ್ತಿರವಿರುವ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕಳೆದ ಜುಲೈನಲ್ಲಿ ಇಸ್ರೇಲ್ ವಾಯು ದಾಳಿಯಲ್ಲಿ ಹೆಜ್ಬುಲ್ಲಾ ಕಮಾಂಡರ್ ಫುವಾದ್ ಶುಕ್ರ್ ಮೃತಪಟ್ಟ ನಂತರ ಇದೀಗ ಎರಡನೇ ಅಧಿಕಾರಿ ಸಾವನ್ನಪ್ಪಿದ್ದು, ರಾಡ್ವಾನ್ ಫೋರ್ಸ್ ಕಮಾಂಡರ್ ಇಬ್ರಾಹಿಂ ಅಕಿಲ್ ಮೃತಪಟ್ಟ ಹೆಜ್ಬುಲ್ಲಾ ನಾಯಕ.
ಬೈರುತ್‌ನಲ್ಲಿ ಉದ್ದೇಶಿತ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. ನಗರದ ದಕ್ಷಿಣದಲ್ಲಿರುವ ಹಿಜ್ಬುಲ್ಲಾದ ಭದ್ರಕೋಟೆಯ ಮೇಲೆ ವಾಯು ದಾಳಿ ನಡೆಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಐಡಿಎಫ್ (ಇಸ್ರೇಲಿ ಮಿಲಿಟರಿ) ಬೈರುತ್‌ನಲ್ಲಿ ಹೆಜ್ಬುಲ್ಲಾ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ದಕ್ಷಿಣ ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಹಿಜ್ಬುಲ್ಲಾ ಉತ್ತರ ಇಸ್ರೇಲ್ ಮೇಲೆ 150 ರಾಕೆಟ್‌ಗಳ ದಾಳಿ ನಡೆಸಿದೆ. ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲ್ ರಾತ್ರಿಯಿಡೀ ಬಾಂಬ್ ದಾಳಿ ನಡೆಸಿತ್ತು. ಹೀಗಾಗಿ ಕನಿಷ್ಠ ಆರು ಇಸ್ರೇಲಿ ಮಿಲಿಟರಿ ನೆಲೆಗಳನ್ನು ರಾಕೆಟ್‌ಗಳ ಮೂಲಕ ಗುರಿಯಾಗಿಸಿಕೊಂಡಿರುವುದಾಗಿ ಹಿಜ್ಬುಲ್ಲಾ ಹೇಳಿದೆ.