Sunday, June 4, 2023

Latest Posts

ದೇಶದ ಸೈನಿಕರ ಪರಾಕ್ರಮ-ಇತಿಹಾಸದ ಬಗ್ಗೆ ಬೆಳಕು ಚೆಲ್ಲಬೇಕು: ಅನಂತಕುಮಾರ್ ಹೆಗಡೆ

ಹೊಸದಿಗಂತ ವರದಿ,ಕುಶಾಲನಗರ:

ಭಾರತ ದೇಶದ ಸೈನಿಕರ ಪ್ರರಾಕ್ರಮ ಹಾಗೂ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಮೂಲಕ ಯುವ ಜನಾಂಗದಲ್ಲಿ ರಾಷ್ಟ್ರ ಪ್ರೇಮ ಹಾಗೂ ಭಕ್ತಿಯನ್ನು ಹುಟ್ಟು ಹಾಕಬೇಕಾಗಿದೆ ಎಂದು ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಹೇಳಿದರು.
ಹಿಂದೂ ಜಾಗರಣ ವೇದಿಕೆ ಮತ್ತು ಹಿಂದು ಯುವ ವಾಹಿನಿ ಕೊಡಗು ಜಿಲ್ಲೆ ವತಿಯಿಂದ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಯೋಧ ನಮನಂ ಶ್ರದ್ಧಾಂಜಲಿ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು‌ ಮಾತನಾಡಿದರು.
ವಿಶ್ವಕ್ಕೆ ಯುದ್ಧ ವಿದ್ಯೆಯನ್ನು ಕೊಟ್ಟ ಮೊದಲ ದೇಶ ಭಾರತ ಆಗಿದೆ. ಯುದ್ಧವೊಂದು ವಿದ್ಯೆ,ಕಲೆ,ಶಸ್ತ್ರ ಕಲೆ ಎಂಬುದು ತೋರಿಸಿಕೊಟ್ಟಿದೆ.ಆದರೆ ದೇಶದ ಸೈನಿಕರ ವೀರಪರಂಪರೆ ಹಾಗೂ ಇತಿಹಾಸದ ಬಗ್ಗೆ ನಮಗೆ ಹೇಳಿಲ್ಲ. ಇತ್ತೀಚೆಗೆ ಹುಟ್ಟಿದ ದೇಶಗಳಲ್ಲೂ ಅವರ ಸೈನಿಕರ,ಸೈನ್ಯದ ಇತಿಹಾಸದ ಬಗ್ಗೆ ಮಾಹಿತಿ ಇದ್ದು,ಆ ದೇಶದ ಜನರು ಅದನ್ನು ಓದಿ ಹೆಮ್ಮೆ ಪಡುತ್ತಾರೆ ಎಂದರು.
ದೇಶದ ಸೈನಿಕ ಇತಿಹಾಸ ಸ್ವಾತಂತ್ರ್ಯ ಬಂದ ನಂತರದಲ್ಲ. ಅದು ಸಹಸ್ರಮಾನಗಳ ಇತಿಹಾಸ ಹೊಂದಿದ್ದು, ಪ್ರಾಚೀನ ಯುದ್ಧ ಇತಿಹಾಸ ನಮಗಿದೆ ಎಂದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ, ಜನರಲ್ ತಿಮ್ಮಯ್ಯ ಹಾಗೂ ಬಿಪಿತ್ ರಾವತ್ ಸೇರಿದಂತೆ ಸಾವಿರಾರು ವೀರಯೋಧರು ಭಾರತಾಂಭೆಯ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಈ ಮಣ್ಣಿಗೆ ಅರ್ಪಿಸಿದ್ದಾರೆ ಎಂದು ಹೇಳಿದರು.
ಕೊಡಗಿನಲ್ಲಿ ಪ್ರತಿ ಮನೆಯಲ್ಲೂ ಒಬ್ಬ ಸೈನಿಕ ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಆ ಸಂಪ್ರದಾಯ ಸ್ವಲ್ಪ ಬದಲಾವಣೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವ ಜನಾಂಗ ಸ್ವ ಇಚ್ಛೆಯಿಂದ ದೇಶದ ಸೈನ್ಯವನ್ನು ಸೇರುವುದರೊಂದಿಗೆ ಭಾರತಾಂಭೆ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿಂದೂ ಯುವ ವಾಹಿನಿಯ ಸಂಯೋಜಕ ಚೇತನ್ ಮಾತನಾಡಿ, ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ದೇಶದ ಮಹಾದಂಡನಾಯಕ ಸೇರಿದಂತೆ ಸೇನಾಧಿಕಾರಿಗಳಿಗೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ ಯೋಧನಮನಂ ಶ್ರದ್ಧಾಂಜಲಿ ರಥಯಾತ್ರೆ ಆಯೋಜಿಸಲಾಗಿತ್ತು. ಈ ರಥಯಾತ್ರೆಯು 12 ದಿನಗಳ ಕಾಲ ಜಿಲ್ಲೆಯಾದ್ಯಂತ 900 ಕಿ.ಮೀ.ಸಂಚರಿಸಿದ್ದು, ಈ ಸಂದರ್ಭದಲ್ಲಿ ಮಾಜಿ ಸೈನಿಕರು,ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ದೇಶ ಪ್ರೇಮಿ ಸಾರ್ವಜನಿಕರು ಗೌರವ ನಮನ ಸಲ್ಲಿಸಿದ್ದಾರೆ ಎಂದರು.
ಹಗುರವಾಗಿ ಮಾತನಾಡಬೇಡಿ: ಅಖಿಲ ಕರ್ನಾಟಕ ಮಾಜಿ ಸೈನಿಕ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸೋಮಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ವೀರಸೈನಿಕರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬೇಡಿ.ಅವರನ್ನು ಯಾವುದೇ ಪಕ್ಷ, ಧರ್ಮ ಹಾಗೂ ಜಾತಿಗೆ ಸೇರಿಸಬೇಡಿ ಎಂದು ಮನವಿ ಮಾಡಿದರು.
ಆಧುನಿಕತೆಯ ಪ್ರಭಾವಕ್ಕೆ ಒಳಗಾಗುತ್ತಿರುವ ಯುವ ಜನಾಂಗದಲ್ಲಿ ಸೈನ್ಯಕ್ಕೆ ಸೇರುವ ಆಸಕ್ತಿ ಸ್ವಲ್ಪ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಕರು ಸ್ವಯಂ ಪ್ರೇರಣೆಯಿಂದ ಸೈನ್ಯ ಸೇರುವ ಮೂಲಕ ದೇಶ ಸೇವೆಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಹಿಂದೂ ಜಾಗರಣ ವೇದಿಕೆ ಪ್ರಾಂತ ಉಪಾಧ್ಯಕ್ಷ ಲಾಲ ಅಯ್ಯಣ್ಣ, ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ತಾಲೂಕು ಅಧ್ಯಕ್ಷ ಮಧು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಕ್ಕೇರ, ಸಂಘಟನಾ ಕಾರ್ಯದರ್ಶಿ ‌ಮಹೇಶ್, ಪ್ರಾಂತ ಸಂಘಟನಾ‌ ಕಾರ್ಯದರ್ಶಿ ಪ್ರಶಾಂತ್, ಮೈಸೂರು ವಿಭಾಗದ ಅಧ್ಯಕ್ಷ ಲೋಹಿತ್ ಆರ್.ಎಸ್.ಎಸ್ ಜಿಲ್ಲಾ ಕಾರ್ಯವಾಹಕ ಡಾಲಿ, ನಿಧಿ ಪ್ರಮುಖ ಮಂಜು, ಸಂಪರ್ಕ ಪ್ರಮುಖ ಲಕ್ಷ್ಮಿ ನಾರಾಯಣ, ಸಹ ಪ್ರಮುಖ ಉಮೇಶ್, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬೀನ್ ದೇವಯ್ಯ, ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!