POSITIVE | ಸಮಾಜ ಸೇವೆಗೆಂದೇ ತಮ್ಮ ಜೀವನ ಮುಡಿಪಿಟ್ಟ ಹೆಂಗಳೆಯರ ಸ್ಪೂರ್ತಿಕತೆ!

– ರಾಚಪ್ಪಾ ಜಂಬಗಿ

ಕಲಬುರಗಿ: ಭವಿಷ್ಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಉದ್ಯೋಗ, ಆದಾಯ ಉತ್ತಮ ಜೀವನ ಪ್ರತಿಯೊಬ್ಬರ ಕನಸು. ಆದರೆ ಜಿಲ್ಲೆಯ ಇಬ್ಬರು ಯುವತಿಯರು ಸಮಾಜ ಸೇವೆಯೆ ಧ್ಯೇಯವೆಂದು ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

ನಗರದಲ್ಲಿ ಮಾಲಾ ಕಣ್ಣಿ ಹಾಗೂ ಮಾಲಾ ದಣ್ಣೂರ ಇದರ ರೂವಾರಿಗಳು. ಈ ಯುವತಿಯರು 2019ರಲ್ಲಿ ನಾಲ್ಕು ಚಕ್ರ ಎಂಬ ತಂಡ ಸ್ಥಾಪಿಸಿ, ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯ ಮಾಡುತ್ತ, ನಿರಂತರವಾಗಿ ಪ್ರೇರಣಾದಾಯಿ ಕೆಲಸಕ್ಕೆ ಇವರು ಸಾಕ್ಷಿಯಾಗಿದ್ದಾರೆ. ತಮ್ಮ ಇಡೀ ಜೀವನವನ್ನೆ ಸಮಾಜಮುಖಿ ಕೆಲಸಕ್ಕೆ ಮುಡಿಪಾಗಿಟ್ಟಿದ್ದಾರೆ.

ಸಾಮಾಜಿಕ ಜಾಗೃತಿ
ಸ್ವಚ್ಛತೆ, ಪರಿಸರ ಕಾಳಜಿಯೊಂದಿಗೆ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ, ತುರ್ತು ಪರಿಸ್ಥಿತಿಯಲ್ಲಿ ರಕ್ತ ಹೊಂದಿಸಿಕೊಡುವುದರೊಂದಿಗೆ ಕಲಬುರಗಿ ನಗರದಲ್ಲಿ ರಣಬೀಸಿಲು ಪ್ರಾರಂಭವಾಗುವ ಮುನ್ನವೇ ಬಟ್ಟೆ ಜೋಳಿಗೆ ಅಭಿಯಾನ, ಒಂದು ಜೊತೆ ಪಾದರಕ್ಷೆ ಅಭಿಯಾನ, ಮಣ್ಣಿನ ಮಡಿಕೆ ಅಭಿಯಾನ ಹೀಗೆ ವಿನೂತನ ಕಲ್ಪನೆ ಮೂಲಕ ನಾಲ್ಕು ಚಕ್ರ ತಂಡ ಕಳೆದ ಮೂರು ವರ್ಷಗಳಿಂದ ಪ್ರಾಣಿ-ಪಕ್ಷಿಗಳ ಮೂಕ ರೋಧನೆಗೆ ಆಸರೆಯಾಗುತ್ತಿದೆ.

ನಗರದ ವಿವಿಧೆಡೆ ಸಾವಿರ ಮಡಿಕೆ
ಬಿಸಿಲಿನ ನಾಡು ಎಂದೆ ಬಿರುದು ಪಡೆದಿರುವ ಕಲಬುರಗಿಯಲ್ಲಿ ಮುಂದಿನ ಮೂರು ತಿಂಗಳ ಕಾಲ ರಣ ಬೀಸಿಲಿನ ತಾಪ ಹೆಚ್ಚಾಗಲಿದ್ದು, ಪ್ರತಿ ದಿನ 40 ಡಿಗ್ರಿ ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪಮಾನ ಇರುವ ಸಂಭವವಿದ್ದು,ಈ ಬೀಸಿಲಿನ ಝಳ ಮನುಷ್ಯರಿಗೆ, ಪ್ರಾಣಿ-ಪಕ್ಷಿಗಳಿಗೆ ತಾಕಬಾರದೆಂಬ ಉದ್ದೇಶವನ್ನಿಟ್ಟುಕೊಂಡು ನಗರದಲ್ಲಿ 1000 ಮಣ್ಣಿನ ಮಡಿಕೆಗಳನ್ನು ಸಾರ್ವಜನಿಕ ಉದ್ಯಾನವನ, ಸರ್ಕಾರಿ ಇಲಾಖೆಗಳ ಆವರಣ, ಶಾಲಾ ಕಾಲೇಜುಗಳ ಆವರಣ, ವಿಶ್ವವಿದ್ಯಾಲಯದ ಆವರಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಇನ್ನುಳಿದ ಪ್ರದೇಶಗಳಲ್ಲಿ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ.

ಬಟ್ಟೆ ಜೋಳಿಗೆ ಅಭಿಯಾನ
ಅದೇ ರೀತಿ ಬಟ್ಟೆ ಜೋಳಿಗೆ ಎಂಬ ಅಭಿಯಾನ ಮೂಲಕ ಬಟ್ಟೆಗಳನ್ನು ದಾನಿಗಳಿಂದ ಸಂಗ್ರಹ ಮಾಡಿ, ಸಂಗ್ರಹಿಸಿದ ಬಟ್ಟೆಗಳನ್ನು ಅನಾಥಾಶ್ರಮ, ವೃದ್ದಾಶ್ರಮ ಮತ್ತು ಅಲೆಮಾರಿ ಜನಗಳಿರುವ ಪ್ರದೇಶಗಳಿಗೆ ತೆರಳಿ ಅವರಿಗೆ ಉಚಿತವಾಗಿ ವಿತರಿಸುವ ಯೋಜನೆ ಹೊಂದಿದ್ದಾರೆ. ಇದರ ಜೊತೆ ಜೊತೆಗೆ ಬೇಸಿಗೆ ಕಾಲದಲ್ಲಿ ಸುಡುವ ಬೀಸಿಲಿನಲ್ಲಿ ಪಾದರಕ್ಷೆಯಿಲ್ಲದೆ ಬರಿಗಾಲಲ್ಲಿ ಓಡಾಟ ಮಾಡುವ ನಿರ್ಗತಿಕರಿಗೆ, ಭಿಕ್ಷುಕರಿಗೆ, ಮಾನಸಿಕ ಅಸ್ವಸ್ಥರಿಗೆ ಪಾದರಕ್ಷೆ ನೀಡುವ ಮೂಲಕ ಮಾನವೀಯ ಕಾರ್ಯ ಮೆರಯಲು ಹೊರಟಿದೆ ನಾಲ್ಕು ಚಕ್ರ ತಂಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!