ಹಸಿಕಸದಿಂದ ಗೊಬ್ಬರ: ಶಾರ್ಕ್‌ಟ್ಯಾಂಕ್‌ನಲ್ಲಿ ಅನಾವರಣಗೊಂಡ ಬೆಂಗಳೂರಿನ ʼಡೇಲಿಡಂಪ್‌ʼ ನವೋದ್ದಿಮೆಯ ಸ್ಫೂರ್ತಿದಾಯಕ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶಾರ್ಕ್‌ ಟ್ಯಾಂಕ್‌ ಇಂಡಿಯಾ ಕಾರ್ಯಕ್ರಮದ ಎರಡನೇ ಸೀಸನ್‌ ಪ್ರಾರಂಭವಾಗಿದ್ದು ನವೋದ್ದಿಮೆಗಳಿಗೆ ಬೆಳೆಯಲು ಅವಕಾಶ ಕಲ್ಪಿಸುವದರ ಜೊತೆಗೆ ಭಾರತದಲ್ಲಿ ತೆರೆಮರೆಯ ಕಾಯಿಗಳಾಗಿ ಸಾಧನೆ ಮಾಡುತ್ತಿರುವವರನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವೂ ಈ ವೇದಿಕೆಯ ಮೂಲಕ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಈ ವೇದಿಕೆಯ ಮೇಲೆ ಬರುತ್ತಿರುವವರಲ್ಲಿ ಅದೆಷ್ಟೋ ಸಾಧಕರು ಪ್ರತಿಭೆಗಳ ಬಗ್ಗೆ ಬಹುತೇಕರಿಗೆ ಗೊತ್ತೇ ಇರಲಿಲ್ಲ. ಕೆಲವರ ಬಗ್ಗೆ ಗೊತ್ತಿದ್ದರೂ ಅವರು ಬೆಳೆದುಬಂದ ಸಾಹಸಗಾಥೆಯ ಪರಿಚಯವಿರಲಿಲ್ಲ. ಇವೆಲ್ಲಕ್ಕೂ ಶಾರ್ಕ್‌ ಟ್ಯಾಂಕ್‌ ಸಾಕ್ಷಿಯಾಗುತ್ತಿದೆ. ಇದೀಗ ಶಾರ್ಕ್‌ ಟ್ಯಾಂಕಿನ ವೇದಿಕೆಯಲ್ಲಿ ಪರಿಚಿತರಾದ ಇನ್ನೊಬ್ಬ ಸಾಧಕರೆಂದರೆ ಅದು ಬೆಂಗಳೂರು ಮೂಲದ ನವೋದ್ದಿಮೆಯ ಸಂಸ್ಥಾಪಕಿ ʼಪೂನಮ್‌ ಬಿರ್‌ ಕಸ್ತೂರಿʼ.

ಇಂದು ನಗರದ ಅನೇಕ ಮನೆಗಳಲ್ಲಿ ಉತ್ಪಾದನೆಯಾಗುವ ಹಸಿಕಸವನ್ನು ಅಥವಾ ಹಸಿ ತ್ಯಾಜ್ಯವನ್ನು ಬಳಸಿಕೊಂಡು ಅದರಿಂದ ಗೊಬ್ಬರ ತಯಾರಿಸುವ ಹೊಸ ಐಡಿಯಾದಿಂದ ನವೋದ್ದಿಮೆಯನ್ನು ಸ್ಥಾಪಿಸಿ, ನಗರದ ಮನೆಗಳಿಗೆ ವಿತರಿಸಿ ಅವುಗಳಿಂದ ಸಾವಿರಾರು ಟನ್‌ ಗೊಬ್ಬರ ಉತ್ಪಾದಿಸಿದ ಕಸದಿಂದ ರಸವೆಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿದವರು ಪೂನಮ್‌ ಕಸ್ತೂರಿ. ಕಾಂಪೋಸ್ಟ್‌ವಾಲಿʼ (ಗೊಬ್ಬರದವಳು) ಅಂತಲೇ ಇವರಿಗೆ ಉಪನಾಮವೂ ಇದೆ. ಬೆಂಗಳೂರಿನಲ್ಲಿ 2006ರಲ್ಲಿ ʼಡೇಲಿಡಂಪ್‌ʼ ಎಂಬ ಹೆಸರಿನ ನವೋದ್ದಿಮೆಯೊಂದನ್ನು ಸ್ಥಾಪಿಸಿದ ಇವರು ಹಸಿಕಸದಿಂದ ಗೊಬ್ಬರವನ್ನು ತಯಾರಿಸೋದು ಹೇಗೆ ಎಂಬುದರ ಬಗ್ಗೆ ಸಮಾಜದಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿದರು. ಇದಕ್ಕೆ ಪೂರಕವಾಗಿ ದಿನನಿತ್ಯದ ಮನೆ ಬಳಕೆಯ ಕಸವನ್ನು ಗೊಬ್ಬರವಾಗಿ ಪರಿವರ್ತಿಸಬಲ್ಲ ಸಣ್ಣ ಸಣ್ಣ ತೊಟ್ಟಿಗಳನ್ನು ಉತ್ಪಾದಿಸಿ, ಅದನ್ನು ಮಾರಾಟ ಮಾಡಲು ಪ್ರಾರಂಭಿಸಿದರು.

ಹಾಗೆಂದ ಮಾತ್ರಕ್ಕೆ ಇತರ ವಾಣಿಜ್ಯ ಕಂಪನಿಗಳಂತೆ ಇವರು ದೊಡ್ಡ ಮಟ್ಟದ ಪ್ರಚಾರ ಇತ್ಯಾದಿಗಳಲ್ಲಿ ತೊಡಗಲಿಲ್ಲ. ಬದಲಾಗಿ ಜನರಲ್ಲಿ ಭೂಮಿಯ ಆರೋಗ್ಯದ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಾಕಿದರು. ಈ ರೀತಿಯ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಕೆಲವರು, ಪರಿಸರದಬಗ್ಗೆ ಕಾಳಜಿಯಿರುವವರು ಅವರ ಈ ಪ್ರಯತ್ನವನ್ನು ಬೆಂಬಲಿಸಿದರು. ನಂತರದಲ್ಲಿ ಜನರ ಮನ್ನಣೆಗಳಿಸುತ್ತ ಕಂಪನಿಯು ನಿಧಾನವಾಗಿ ವಿಸ್ತರಿಸತೊಡಗಿತು. ಇಂದು ಕಂಪನಿಯು ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಗೊಬ್ಬರದ ತೊಟ್ಟಿಗಳನ್ನು ಮಾರಾಟ ಮಾಡುತ್ತಿದೆ. ಮನೆಯ ಉಪಯೋಗಕ್ಕೆ ಸಾಕಾಗುವ ಮಣ್ಣಿನ ತೊಟ್ಟಿಗಳು ಜನಪ್ರಿಯತೆಗಳಿಸಿದೆ. ಅಲ್ಲದೇ ದೊಡ್ಡ ದೊಡ್ಡ ಅಪಾರ್ಟಮೆಂಟ್ ಗಳಲ್ಲಿರುವ ಸಮುದಾಯದವರಿಗೆ ʼಸಾಮುದಾಯಿಕ ಗೊಬ್ಬರ ತೊಟ್ಟಿʼಗಳನ್ನೂ ಪೂರೈಕೆ ಮಾಡುತ್ತಿದ್ದಾರೆ. 2021-22ರಲ್ಲಿ 3.75 ಕೋಟಿ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದೆ ಕಂಪನಿ. ಅವರ ಈ ಪ್ರಯತ್ನಗಳಿಗೆ ಸಾಕಷ್ಟು ಪ್ರಶಸ್ತಿ-ಪುರಸ್ಕಾರಗಳೂ ಬಂದಿವೆ.

ಹೀಗೆ ಗೊಬ್ಬರದ ತೊಟ್ಟಿಯಿಂದ ಪರಿಸರ ಕಾಳಜಿ ಮೂಡಿಸುತ್ತಿರುವ ಪೂನಮ್‌ ಕಸ್ತೂರಿಯವರ ಪ್ರಯತ್ನ ಸ್ಫೂರ್ತಿದಾಯಕವಾದದ್ದು. ಎಲ್ಲರಿಗೂ ಇವರಂತೆಯೇ ಪರಿಸರ ಕಾಳಜಿ ಮೂಡುವಂತಾಗಲಿ ಎಂಬುದು ಎಂದಿನ ಆಶಯ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!