February 8, 2026
Sunday, February 8, 2026
spot_img

ಅಗೆದಷ್ಟೂ ಹೊರಬರುತ್ತಿದೆ ಇತಿಹಾಸ: ಬಳ್ಳಾರಿಯಲ್ಲಿ ಸಿಕ್ಕಿತು 5.5 ಅಡಿ ಉದ್ದದ ಅಸ್ಥಿಪಂಜರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲ್ಲೂಕಿನ ಐತಿಹಾಸಿಕ ತಾಣವಾದ ತೆಕ್ಕಲಕೋಟೆಯ ಗೌಡ್ರ ಮೂಲೆ ಬೆಟ್ಟದಲ್ಲಿ ಪುರಾತತ್ವ ಉತ್ಖನನದ ವೇಳೆ ಸುಮಾರು 3,000 ದಿಂದ 5,000 ವರ್ಷಗಳಷ್ಟು ಹಳೆಯದಾದ ಮಾನವನ ಪಳೆಯುಳಿಕೆ ಪತ್ತೆಯಾಗಿದೆ.

ಅಮೆರಿಕದ ಹಾರ್ಟ್ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್. ಸುಗಂಧಿ ಅವರ ನೇತೃತ್ವದಲ್ಲಿ ಕಳೆದ ಕೆಲವು ದಿನಗಳಿಂದ ಇಲ್ಲಿ ಸಂಶೋಧನಾ ಕಾರ್ಯ ನಡೆಯುತ್ತಿದೆ. ವಾರದ ಹಿಂದೆ ಆರಂಭವಾದ ಈ ಉತ್ಖನನದಲ್ಲಿ ಮೊದಲು ಮಾನವನ ಮೂಳೆಯೊಂದು ಕಂಡುಬಂದಿತ್ತು. ಕುತೂಹಲಗೊಂಡು ಮಣ್ಣನ್ನು ಮತ್ತಷ್ಟು ಆಳವಾಗಿ ಅಗೆದಾಗ, ಸುಮಾರು 5.5 ಅಡಿ ಉದ್ದದ ಸಂಪೂರ್ಣ ಮಾನವ ಅಸ್ಥಿಪಂಜರ ಕಂಡುಬಂದು ಎಲ್ಲರನ್ನೂ ಬೆರಗುಗೊಳಿಸಿದೆ.

ಅಸ್ಥಿಪಂಜರ ಪತ್ತೆಯಾದ ಜಾಗದಲ್ಲಿ ಮಾನವನ ದೇಹದ ಮೇಲೆ ಕಲ್ಲುಗಳನ್ನು ಜೋಡಿಸಿ ಸಂಸ್ಕಾರ ಮಾಡಲಾಗಿದೆ. ಇದು ಅಂದಿನ ಕಾಲದ ಅಂತ್ಯಕ್ರಿಯೆಯ ಪದ್ಧತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಇದನ್ನೂ ಓದಿ:

ಅಸ್ಥಿಪಂಜರದ ಪಕ್ಕದಲ್ಲೇ ಪುರಾತನ ಕಾಲದ ಮಡಿಕೆ ಚೂರುಗಳು ಪತ್ತೆಯಾಗಿವೆ. ಈ ಪಳೆಯುಳಿಕೆಯು ನವಶಿಲಾಯುಗ ಅಥವಾ ಬೃಹತ್ ಶಿಲಾಯುಗದ ಕಾಲಕ್ಕೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ಐತಿಹಾಸಿಕವಾಗಿ ಶ್ರೀಮಂತವಾಗಿರುವ ತೆಕ್ಕಲಕೋಟೆ ಬೆಟ್ಟಗಳು ಸಂಶೋಧಕರಿಗೆ ನೆಚ್ಚಿನ ತಾಣವಾಗಿದ್ದು, ಈ ನೂತನ ಶೋಧನೆಯು ಬಳ್ಳಾರಿ ಜಿಲ್ಲೆಯ ಪ್ರಾಚೀನ ನಾಗರಿಕತೆಯ ಇತಿಹಾಸಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !