ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಸ್ಕ್ರಿಪ್ಟ್ ಶೀಘ್ರದಲ್ಲೇ ಆಸ್ಕರ್ ಲೈಬ್ರೆರಿಯ ಸಂಗ್ರಹ ಸೇರಲಿದೆ.
ದೇಶದ ಮೊದಲ ಬಯೋ ಸೈನ್ಸ್ ಸಿನಿಮಾ ಎನಿಸಿಕೊಂಡಿರುವ ‘ದಿ ವ್ಯಾಕ್ಸಿನ್ ವಾರ್’ ಕಳೆದ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಿದೆ. ಕೊರೋನಾ ವೈರಸ್ ರಹಸ್ಯ, ತಕ್ಷಣ ಲಾಕ್‌ಡೌನ್ ಘೋಷಣೆ ಮಾಡಿದ್ದು, ಆಕ್ಸಿಜನ್ ಇಲ್ಲದೆ ರೋಗಿಗಳು ಸತ್ತಿದ್ದು, ಇದರ ಬಗ್ಗೆ ಸರ್ಕಾರದ ನಡೆ ಕುರಿತ ಅಂಶವಿರುವ ಸಿನಿಮಾ ಇದಾಗಿದೆ.
ಈಗ ಈ ಸಿನಿಮಾಗೆ ‘ಆಸ್ಕರ್’ (Oscar) ಕಡೆಯಿಂದ ವಿಶೇಷ ಮನ್ನಣೆ ಸಿಕ್ಕಿದೆ.
ಆ ಸುದ್ದಿಯನ್ನು ಸ್ವತಃ ವಿವೇಕ್ ಅಗ್ನಿಹೋತ್ರಿ ಅವರು ಹಂಚಿಕೊಂಡಿದ್ದಾರೆ. ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ಸ್ಕ್ರಿಪ್ಟ್ ಕಳಿಸಿಕೊಡುವಂತೆ ಅಕಾಡೆಮಿ ಕಡೆಯಿಂದ ಸಂದೇಶ ಬಂದಿದೆ ಎಂದು ಅವರು ಹೇಳಿದ್ದಾರೆ. ಈ ಗೌರವದಿಂದ ನನಗೆ ತುಂಬಾ ಖುಷಿಯಾಗಿದೆ. ನೂರಾರು ವರ್ಷಗಳ ಕಾಲ ಹೆಚ್ಚು ಹೆಚ್ಚು ಗಂಭೀರ ಜನರು ಭಾರತೀಯ ಮಹಾವೀರರ ಈ ಮಹಾನ್ ಕಥೆಯನ್ನು ಓದುತ್ತಾರೆ ಎಂದು ನನಗೆ ಸಂತೋಷವಾಗಿದೆ ಎಂದಿದ್ದಾರೆ .
‘ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆ್ಯಂಡ್ ಸೈನ್ಸ್’ ಸಂಸ್ಥೆಯು ಗಮನಾರ್ಹ ಸಿನಿಮಾಗಳ ಸ್ಕ್ರಿಪ್ಟ್ಗಳನ್ನು ಸಂಗ್ರಹಿಸಿ, ಲೈಬ್ರರಿಯಲ್ಲಿ ಇಡುತ್ತದೆ. ಅಂಥ ಚಿತ್ರಗಳ ಸಾಲಿಗೆ ‘ದಿ ವ್ಯಾಕ್ಸಿನ್ ವಾರ್’ ಕೂಡ ಸೇರಿರುವುದು ವಿಶೇಷ. ಆದರೆ ನಿರೀಕ್ಷಿತ ಮಟ್ಟದಲ್ಲಿ ಈ ಚಿತ್ರಕ್ಕೆ ಕಲೆಕ್ಷನ್ ಆಗಲಿಲ್ಲ. ಇದರ ಹೊರತಾಗಿಯೂ ಆಸ್ಕರ್ ಕಡೆಯಿಂದ ಮನ್ನಣೆ ಸಿಕ್ಕಿರುವುದಕ್ಕೆ ತಂಡ ಸಂತಸ ವ್ಯಕ್ತಪಡಿಸುತ್ತಿದೆ.
ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ಸಾಧನೆ ಬಗ್ಗೆ ಕೂಡ ಸಿನಿಮಾ ಬೆಳಕು ಚೆಲ್ಲುತ್ತದೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಡೈರೆಕ್ಟರ್ ಮ್ಯಾನೇಜರ್ ಆಗಿರುವ ಬಲರಾಂ ಭಾರ್ಗವ ಅವರ ‘ದಿ ಮ್ಯಾನ್ ಆಟ್ ದಿ ಸೆಂಟರ್ ಆಫ್ ದಿ ಕೋವಿಡ್ ಸೈಂಟಿಫಿಕ್ ರೋಲರ್‌ಕೋಸ್ಟಾರ್’ ಪುಸ್ತಕ ಆಧರಿಸಿ ಸಿನಿಮಾ ಮಾಡಲಾಗಿದೆ. ಮಹಿಳಾ ವಿಜ್ಞಾನಿಗಳು ಕೋವ್ಯಾಕ್ಸಿನ್‌ಗೋಸ್ಕರ ಹೇಗೆಲ್ಲ ಶ್ರಮಿಸುತ್ತಾರೆ ಎಂಬ ಬಗ್ಗೆ ಸಿನಿಮಾವಿದೆ. ಕೊರೋನಾದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟವರ ಕುರಿತು ಈ ಸಿನಿಮಾವಿದೆ.
ಚಿತ್ರದ ಕುರಿತು ಮಾತನಾಡಿರುವ ವಿವೇಕ್ ಅಗ್ನಿಹೋತ್ರಿಯವರು, ಭಾರತವು ಲಸಿಕೆಗಳ ಮೇಲೆ ಹೇಗೆ ಸ್ವಾವಲಂಬಿಯಾಯಿತು ಮತ್ತು ‘ವಿಶ್ವದ ಔಷಧಾಲಯ’ವಾಯಿತು ಎಂಬುದನ್ನು ಅವರ ಚಿತ್ರದಲ್ಲಿ ವಿವರಿಸಲಾಗಿದೆ. ಭಾರತದ ಗೆಲುವು, ಭಾರತ ಹೇಗೆ ಶ್ರೇಷ್ಠ ರಾಷ್ಟ್ರವಾಗುತ್ತಿದೆ, ಭಾರತ ಹೇಗೆ ಸ್ವಾವಲಂಬಿಯಾಗಿದೆ ಮತ್ತು ಭಾರತದ ವಿಜ್ಞಾನವು ಜಗತ್ತಿಗೆ ದಿಕ್ಕು ತೋರಿಸಲು ಹೇಗೆ ಸಿದ್ಧವಾಗಿದೆ ಎಂಬುದರ ಮೇಲೆ ನಾನು ಹೆಚ್ಚಾಗಿ ಗಮನಹರಿಸಿದ್ದೇನೆ. ಅದಕ್ಕಿಂತ ಹೆಚ್ಚಾಗಿ, ನಿಮ್ಮ ಶತ್ರುಗಳು ಯಾರು ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಭಾರತದ ಶತ್ರುಗಳು ಯಾರು, ಭಾರತವನ್ನು ಮಾರಲು ಪ್ರಯತ್ನಿಸುತ್ತಿರುವವರು ಯಾರು ಎಂದು ತಿಳಿಯಲು ನೀವು ಬಯಸಿದರೆ, ಈಗ ನಿಮಗೆ ಲಸಿಕೆ ಯುದ್ಧದಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.
ಪಲ್ಲವಿ ಜೋಶಿ, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್, ಅನುಪಮ್ ಖೇರ್, ಗಿರಿಜಾ ಓಕ್ ಮುಂತಾದ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.