ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಕೋವಿಡ್ ಬಗ್ಗೆ ಈಗಾಗಲೇ ಕೆಲವು ನಿರ್ಣಯಗಳನ್ನು ಮಾಡಿದ್ದೇವೆ, ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ. ರಾಜ್ಯದಲ್ಲಿ ಕೋವಿಡ್ ನಡವಳಿಕೆಯನ್ನು ಸಂಪೂರ್ಣವಾಗಿ ಅಭ್ಯಾಸಿಸಿದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಜೆಟ್ ಸಿದ್ಧತೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬಜೆಟ್ ಕುರಿತ ತಯಾರಿಗಳು ಆರಂಭವಾಗಿವೆ. ಡಿಸೆಂಬರ್ ತಿಂಗಳಲ್ಲಿಯೇ ಹಣಕಾಸು ಇಲಾಖೆ ಮತ್ತು ಆದಾಯ ಬರುವಂತಹ ಇಲಾಖೆಗಳ ಜೊತೆ ಆಂತರಿಕ ಸಭೆಗಳನ್ನು ಮಾಡಿದ್ದೇನೆ. ಡಿಸೆಂಬರ್ ಅಂತ್ಯದಿಂದ ಈಗ ಕೋವಿಡ್ ವ್ಯಾಪಕವಾದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆಯ ಮತ್ತೊಂದು ಸಭೆ ಜ. 25ರಂದು ಮಾಡಲಾಗುತ್ತದೆ. ಅದಾದ ನಂತರ, ಎಲ್ಲ ಇಲಾಖೆಗಳ ಹಾಗೂ ಸಂಸ್ಥೆಗಳ ಪ್ರಸ್ತಾವನೆ ಕುರಿತು ಸುದೀರ್ಘ ಚರ್ಚೆ ನಡೆಸಿ, ಬಜೆಟ್ ಅಂತಿಮಗೊಳಿಸಲಾಗುತ್ತದೆ ಎಂದರು.
ನಿಗಮ – ಮಂಡಳಿಗಳ ಅಧ್ಯಕ್ಷ ಸ್ಥಾನ ಕುರಿತು ಪಕ್ಷದಲ್ಲಿ ಚರ್ಚೆ ಆಗಬೇಕು. ಆ ನಂತರ ಅಥವಾ ಪಕ್ಷದಲ್ಲಿ ಯಾವಾಗ ಚರ್ಚೆ ಆಗುತ್ತದೋ ಅದನ್ನು ಅವಲಂಬಿಸಿದೆ. ಮುಖ್ಯಮಂತ್ರಿಗಳ ಮುಂದೆ ಯಾವುದೇ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಗಳ ಬಗ್ಗೆ ಪ್ರಸ್ತಾವನೆ ಇಲ್ಲ. ಪಕ್ಷದವರು ಅದನ್ನೆಲ್ಲ ನೋಡಿ, ಪರಾಮರ್ಶೆ ಮಾಡಿ ವರದಿ ಕೊಡುತ್ತಾರೆ. ಅದರ ಆಧಾರದಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ನಾಲ್ಕು ಸ್ಥಾನ ಖಾಲಿ ಇವೆ:
ಮೂರು ತಿಂಗಳೊಳಗೆ ಸಂಪುಟ ವಿಸ್ತರಣೆ ಮಾಡಲು ಆಕಾಂಕ್ಷಿಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾಲ್ಕು ಸಚಿವ ಸ್ಥಾನಗಳು ಖಾಲಿ ಇವೆ. ಆಕಾಂಕ್ಷಿಗಳು ಆಗಬೇಕು ಎನ್ನುವುದು ಸಹಜ. ಅದನ್ನು ಯಾವಾಗ ಮಾಡಬೇಕು, ಯಾವ ರೀತಿ ಮಾಡಬೇಕು ಎಂಬುದು ಪಕ್ಷದ ವರಿಷ್ಠರ ಗಮನದಲ್ಲಿದೆ. ನಾನು ಕೂಡ ಪಕ್ಷದ ವರಿಷ್ಠದ ಗಮನಕ್ಕೆ ತರುತ್ತಿದ್ದೇನೆ. ಅವರು ನಮ್ಮನ್ನು ಕರೆದು ಮಾತಾಡುವಾಗ, ಆ ಸಂದರ್ಭದಲ್ಲಿ ಎಲ್ಲ ವಿವರಗಳನ್ನು ನಾನು ಕೊಡುತ್ತೇನೆ ಎಂದು ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಬಿಬಿಎಂಪಿ ವಿಚಾರದಲ್ಲಿ ಸಭೆ ಕರೆಯಲಾಗಿದೆ. ಉಡುಪಿಯ ಸರಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಶಿಕ್ಷಣ ಸಚಿವರಿಗೆ ಪರಿಶೀಲಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.