ಸಚಿವ ಈಶ್ವರಪ್ಪ ರಾಜೀನಾಮೆ ಪಡೆಯುವುದು, ಬಿಡುವುದು ಸಿಎಂಗೆ ಬಿಟ್ಟದ್ದು; ನಳಿನ್ ಕುಮಾರ್ ಕಟೀಲ್

ಹೊಸದಿಗಂತ ವರದಿ, ಮೈಸೂರು
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪರ ರಾಜೀನಾಮೆ ಪಡೆಯುವುದು, ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ. ತನಿಖೆ ನಡೆದು ವರದಿ ಬರಲಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಖವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ದಾಖಲಾದ ಬಳಿಕ ಹಲವು ದಿನಗಳ ನಂತರ ಸಚಿವ ಸ್ಥಾನಕ್ಕೆ ಜಾರ್ಜ್ ರಾಜೀನಾಮೆ ನೀಡಿದ್ದರು. ಆದರೆ ನಾವು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಲು ತಕ್ಷಣವೇ ಆದೇಶಿಸಿದ್ದೇವೆ. ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಸಚಿವ ಕೆ.ಎಸ್.ಈಶ್ವರಪ್ಪನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದರು.
ಮುಖ್ಯಮಂತ್ರಿಗಳು ಕೇಳಿದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆ.ಎಸ್.ಈಶ್ವರಪ್ಪ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ ರಾಜೀನಾಮೆ ಕೊಡುವುದು, ಪಡೆಯುವುದು, ಬಿಡುವುದು ಸಿಎಂ ಹಾಗೂ ಈಶ್ವರಪ್ಪರಿಗೆ ಸೇರಿದ್ದು, ಪಕ್ಷದ ರಾಜ್ಯಾಧ್ಯಕ್ಷನಾಗಿ ನಾನು ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಎಂದು ತಿಳಿಸಿದರು.
ಕೇಳಿದ ತಕ್ಷಣ ರಾಜೀನಾಮೆ ಕೊಡುವುದಕ್ಕೆ ಆಗಲ್ಲ:
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪನವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ಅವರು ಕೇಳಿದ ತಕ್ಷಣ ರಾಜೀನಾಮೆ ಕೊಡಲು ಆಗಲ್ಲ, ಕಾಂಗ್ರೆಸ್‌ನವರು ಮೊದಲಿನಿಂದಲೂ ಸಣ್ಣ ಪುಟ್ಟ ವಿಚಾರಕ್ಕೆಲ್ಲ ರಾಜೀನಾಮೆ ಕೇಳುತ್ತಲೇ ಬಂದಿದ್ದಾರೆ. ಅವರು ಕೇಳಿದ ತಕ್ಷಣವೆಲ್ಲಾ ರಾಜೀನಾಮೆ ಕೊಡುವುದಕ್ಕೆ ಆಗುವುದಿಲ್ಲ. ವಿಪಕ್ಷಗಳು ರಾಜ್ಯಪಾಲರನ್ನೇಕೆ, ಸಮಯ ಸಿಕ್ಕರೆ ರಾಷ್ಟ್ರಪತಿಗಳನ್ನು ಬೇಕಾದರೆ ಭೇಟಿ ಮಾಡಲಿ ಎಂದು ವ್ಯಂಗ್ಯವಾಗಿ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!