Friday, July 1, 2022

Latest Posts

ಗಲಭೆಗಳಿಗೆ ಹಿಂದಿನ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳೇ ಕಾರಣ: ನಳೀನ್ ಕಟೀಲ್ ಆರೋಪ

ಹೊಸ ದಿಗಂತ ವರದಿ, ಹುಬ್ಬಳ್ಳಿ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗಲಭೆಕೊರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದರೆ ಈಗ ರಾಜ್ಯದಲ್ಲಿ ಇಂತಹ ದುಷ್ಕೃತ್ಯಗಳು ಸಂಭವಿಸುತ್ತಿರಲಿಲ್ಲ. ರಾಜ್ಯದಲ್ಲಿ ಪ್ರಸ್ತುತ ಸಂಭವಿಸುತ್ತಿರುವ ಗಲಭೆಗಳಿಗೆ  ಹಿಂದಿನ ಸರ್ಕಾರದ ವೈಫಲ್ಯವೇ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಮಂಗಳವಾರ ಹಳೆ ಹಬ್ಬಳ್ಳಿಯ ಗಲಭೆ ನಡೆದ ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯರಂತಹ ಮುಖ್ಯಮಂತ್ರಿಯನ್ನು ರಾಜ್ಯ ಹಿಂದೆಂದೂ ಕಂಡಿಲ್ಲ. ಅವರ ಆಡಳಿತದ ಅವಧಿಯಲ್ಲಿ 23 ಹಿಂದೂ ಕಾರ್ಯಕರ್ತರ ಹತ್ಯೆ ನಡೆಯಿತು. ಸಿದ್ದರಾಮಯ್ಯರ ಐದು ವರ್ಷದ ಆಡಳಿತವು ಸಂಪೂರ್ಣ ವಿಫಲವಾಗಿದ್ದು, ಗಲಭೆಗೆ ಕಾರಣರಾದ ಒಬ್ಬೇ ಒಬ್ಬರನ್ನು ಬಂಧಿಸಲು ಸಹ ಅವರಿಂದ ಸಾಧ್ಯವಾಗಿಲ್ಲ ಎಂದರು.
ಟಿಪ್ಪು ಜಯಂತಿ ಹೆಸರಲ್ಲಿ ರಾಜ್ಯದಾದ್ಯಂತ ಗಲಭೆಗಳು ನಡೆದವು. ಮೈಸೂರು ಹಾಗೂ ಮಂಗಳೂರು ಕಾರಾಗೃಹದಲ್ಲಿ ಕೈದಿಗಳ ಹತ್ಯೆಯಾಯಿತು. ಅವುಗಳ ಹಿಂದಿರುವ ಶಕ್ತಿಗಳನ್ನು ಸಹ ಗುರುತಿಸುವ ಕೆಲಸ ಆಗಲಿಲ್ಲ. ಆಗಲೇ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರೆ ಈಗ ಇಂತಹ ಗಲಭೆಗಳು ನಡೆಯುತ್ತಿರಲಿಲ್ಲ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss