October 17, 2026
Saturday, October 17, 2026
spot_img

ಉಳ್ಳಾಲದಿಂದ ವ್ಯಾಪಿಸಲಿದೆ ದೇಶದಾದ್ಯಂತ ಎಸ್‌ಐಆರ್ ವಿರುದ್ಧ ಪ್ರತಿಭಟನೆಯ ಕಿಚ್ಚು: ಸಚಿವ ಖಾದರ್

ಹೊಸದಿಗಂತ ವರದಿ ಉಳ್ಳಾಲ:

ಎಸ್ ಐಆರ್ ವಿರುದ್ಧ ದೇಶದಾದ್ಯಂತ ಪ್ರತಿಭಟನೆಯ ಕಿಚ್ಚು ಉಳ್ಳಾಲದಿಂದಲೇ ವ್ಯಾಪಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ. ಖಾದರ್ ಹೇಳಿದ್ದಾರೆ.

ಎಸ್ ಐಆರ್ ಹಿಂತೆಗೆಯಲು ಹಾಗೂ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಜನತಂತ್ರದ ರಕ್ಷಣೆಗಾಗಿ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ನಡೆದ ಅಹೋರಾತ್ರಿ ಧರಣಿಯ ಪ್ರಯುಕ್ತ ಶನಿವಾರ ಬೆಳಗ್ಗೆ ನಡೆದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಸ್ ಐಆರ್ ನ್ನು ಗುರಾಣಿಯಾಗಿ ಬಳಸಿ ಜನಸಾಮಾನ್ಯರು ಅದರಲ್ಲೂ ಕಾಂಗ್ರೆಸ್ ಮತದಾರರನ್ನು ಗುರುತಿಸಿ ಅವರ ಮತ ರದ್ದುಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಮಾರಕ ಹಾಗೂ ಸಂವಿಂಧಾನದ ಕಗ್ಗೊಲೆಯಾಗಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರ ವಿರುದ್ಧ ಆಯೋಗದ ಇತರ ಇಬ್ಬರು ಸದಸ್ಯರು ಅಪನಂಬಿಕೆ ವ್ಯಕ್ತಪಡಿಸಿದ್ದರೂ ಕೂಡಾ ಆಯೋಗದ ಮುಖ್ಯಸ್ಥರನ್ನು ಅದೇ ಸೀಟಲ್ಲಿ ಮುಂದುವರಿಸಲು ಕೇಂದ್ರ ಸರಕಾರ ಮತ್ತು ಬಿಜೆಪಿಗೆ ಯಾಕೆ ಅಷ್ಟು ಆಸಕ್ತಿ ಎಂದು ಖಾದರ್ ಪ್ರಶ್ನಿಸಿದರು.

ಕೇಂದ್ರ ಚುನಾವಣಾ ಆಯೋಗದ ಸದಸ್ಯರೇ ಚುನಾವಣಾ ಸಂದರ್ಭದಲ್ಲಿ‌ ಮತದಾರರ ಹೆಸರುಗಳನ್ನು ರದ್ದು ಪಡಿಸುವುದು ಸರಿಯಲ್ಲವೆಂದು
ಆಯೋಗದ ಮುಖ್ಯಸ್ಥ ಜ್ಞಾನೇಶ್ ಅವರಿಗೆ ಹನ್ನೆರಡು ಸಲ ಪತ್ರ ಬರೆಯುತ್ತಾರಲ್ಲದೆ ಅವರು ಬಹಿರಂಗವಾಗಿ ಪತ್ರಿಕಾಗೋಷ್ಟಿ ನಡೆಸಿದ ಪರಿಣಾಮ ಜನತೆ ಜ್ಞಾನೇಶ್ ಅವರ ರಾಜೀನಾಮೆ ಕೇಳುವುದರಲ್ಲಿ ತಪ್ಪೇನಿದೆ ಎಂದ ಅವರು, ಕಾಂಗ್ರೆಸ್ ಯಾವತ್ತೂ ಎಸ್‌ಐಆರ್ ವಿರುದ್ಧ ಹೋಗದೆ, ಎಸ್‌ಐಆರ್ ಪ್ರಕ್ರಿಯೆಗೆ ಬೆಂಬಲ ನೀಡಿದೆ. ಅರ್ಹ ಮತದಾರರಿಗೆ ಮತದಾನದ ಹಕ್ಕು ಸಿಗಬೇಕೆಂಬುವುದೇ ಕಾಂಗ್ರೆಸ್ ತತ್ವಾದರ್ಶವಾಗಿದೆ. ಆದರೆ ನಿಜವಾದ ಅರ್ಹ ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕವೂ ಆ ಪಟ್ಟಿಯಲ್ಲಿರುವ ಹೆಸರುಗಳನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸುವುದನ್ನು ಸಹಿಸಲು ಸಾಧ್ಯವಿಲ್ಲ‌ವೆಂದು ಹೇಳಿದರು.

ಒಬ್ಬೊಬ್ಬರು ಬಂದು ನೂರು ಅರ್ಜಿಗಳನ್ನು ನೀಡುತ್ತಾರೆ. ಅದರಲ್ಲಿ ರದ್ದುಗೊಳಿಸಬೇಕಾದ ಹೆಸರುಗಳ ಫೋನ್ ನಂಬರ್, ಎಪಿಕ್ ನಂಬರ್, ಫೋಟೊ, ಆಧಾರ್ ನಂಬರ್ ಗಳು ಕಂಪ್ಯೂಟರಲ್ಲಿ ಫ್ರಿಂಟ್ ಆಗಿ ಬರುತ್ತದೆ. ಬೇರೊಬ್ಬ ಮತದಾರರ ಡೇಟಾ, ದಾಖಲೆಗಳ ಮಾಹಿತಿಗಳನ್ನು ಯಾರು ಕೊಡುತ್ತಾರೆ. ಅದನ್ನು ಎಲ್ಲಿ ಫ್ರಿಂಟ್ ಮಾಡ್ತಾರೆ, ಯಾರು ಮಾಡುತ್ತಾರೆ ಎನ್ನುವುದನ್ನೇ ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಇದನ್ನು ಚುನಾವಣಾ ಆಯೋಗ ಯಾಕೆ ಇದುವರೆಗೆ ಬಹಿರಂಗ ಪಡಿಸಿಲ್ಲ? ಅದಕ್ಕಾಗಿಯೇ ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಸಂಶಯ ವ್ಯಕ್ತಪಡಿಸುತ್ತಿದೆ. ಅದನ್ನು ಪ್ರಶ್ನಿಸಿದವರ ಮೇಲೆಯೇ ಇಲ್ಲ ಸಲ್ಲದ ಕೇಸ್ ಹಾಕಿ ತನಿಖೆಗೊಳಪಡಿಸಲಾಗುತ್ತಿದೆ. ಜೀವಂತವಾಗಿರುವವರ ಮತ ರದ್ಧತಿಗೆ ನಿಮಗೆ ಹಕ್ಕು ಯಾರು ಕೊಟ್ಟಿದ್ದೆಂದು ಖಾದರ್ ಪ್ರಶ್ನಿಸಿದರು.

ಪ್ರತಿಭಟನೆ ಸಮಾರೋಪದ ಬಳಿಕ ಜ್ನಾನೇಶ್ ಕುಮಾರ್ ಪ್ರತಿಕೃತಿಯನ್ನು ದಹಿಸಲಾಯಿತು. ಯೂತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರಯ್ಯ ಅಂಜುಮ್, ಮಂಗಳೂರು ವಿದಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಾಝ್ ನರಿಂಗಾನ, ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ, ಎನ್ ಎಸ್ ಯುಐ ಅಧ್ಯಕ್ಷ ಶಾಹಿಲ್, ಪ್ರಮುಖರಾದ‌ ರಫೀಕ್ ಅಂಬ್ಲಮೊಗರು, ಮುಸ್ತಫಾ ಹರೇಕಳ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನ್ಸೂರ್ ಮಂಚಿಲ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Must Read