Thursday, March 23, 2023

Latest Posts

ಶತ್ರುವನ್ನು ಮಟ್ಟಹಾಕುತ್ತಲೇ ಆತ್ಮಾಹುತಿಗೈದ ಪರಮವೀರನ ಶೌರ್ಯದ ಕತೆ

– ಗಣೇಶ ಭಟ್‌, ಗೋಪಿನಮರಿ

ವೀರನೊಬ್ಬನ ಬಗ್ಗೆ ಹೇಳೋಕೆ ಆತನ ಇಡೀ ಜೀವಮಾನವನ್ನೇ ಬಿಚ್ಚಿಡಬೇಕೆಂದೇನೂ ಇಲ್ಲ. ರಣರಂಗದಲ್ಲಿ ಶತ್ರುವಿನ ರುಂಡ ಚೆಂಡಾಡುತ್ತ ಆತ ವೀರಾವೇಶದಲ್ಲಿ ಉದ್ಗರಿಸಿದ ಪದಗಳೇ ಸಾಕು ಆತನ ಛಾತಿಯನ್ನು ವಿವರಿಸೋಕೆ. “ಇಲ್ಲ ನಾನು ವಾಪಸ್ಸು ಬರುವ ಮಾತೇ ಇಲ್ಲ. ನನ್ನ ಗನ್‌ ಇನ್ನೂ ಕೆಲಸ ಮಾಡುತ್ತಿದೆ. ಆ ದುಷ್ಟ ಶತ್ರುಗಳು ಕಣ್ಣೆದುರಲ್ಲೇ ಇದ್ದಾರೆ. ನನ್ನ ಗನ್‌ ವ್ಯಾಪ್ತಿಯಲ್ಲೇ ಇದ್ದಾರೆ…” ಇದು ಅಂಥಹ ವೀರನೊಬ್ಬ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಆಡಿದ ಕೊನೆಯ ಮಾತುಗಳು. ಆಡಿದ ಮಾತಿನಂತೆಯೇ ಆತ ಹಿಂತಿರುಗಲೇ ಇಲ್ಲ. ಕೊನೆಯ ಉಸಿರಿನವರೆಗೂ ಶತ್ರು ಟ್ಯಾಂಕರ್‌ ಗಳ ಮೇಲೆ ಗುಂಡಿನ ಉಲ್ಕಾಪಾತವನ್ನೇ ನಡೆಸಿದ್ದ. ಆದರೆ ಸಂಖ್ಯಾಬಲದಲ್ಲಿ ಜಾಸ್ತಿಯಿದ್ದ ಶತ್ರುಗಳ ಭೀಕರ ದಾಳಿಗೆ ತುತ್ತಾದ ವೀರ ಹೋರಾಡುತ್ತಲೇ ಆತ್ಮಾಹುತಿಗೈದ. ತಾಯಿ ಭಾರತಿಯ ರಕ್ಷಣೆಯ ಹೊಣೆಹೊತ್ತಿದ್ದ ಆತ ಬಾನಂಗಣದ ಮಿನುಗುವ ತಾರೆಯಾಗಿ ಹೋದ. 21ನೇ ವಯಸ್ಸಿನಲ್ಲಿ ಪ್ರಾಣಾರ್ಪಣೆ ಮಾಡಿದ ಆತನ ಹೆಸರೇ ʼಸೆಕೆಂಡ್‌ಲೆಫ್ಟಿನೆಂಟ್‌ ಅರುಣ್‌ ಖೇತರ್ಪಾಲ್‌ʼ.

ಯುದ್ಧ ಶುರುವಾಗಿದೆಯೆಂದು ಆತ ಹೊರಟು ನಿಂತಾಗ ಆತನ ತಾಯಿ ಹೇಳಿದ್ದೇನು ಗೊತ್ತೇ ? “ನಿನ್ನ ಮುತ್ತಾತ, ತಾತ ಇಬ್ಬರೂ ವೀರರು. ನಿಮ್ಮಪ್ಪನೂ ಸಹ, ನೀನೂ ಅವರಂತೆ ಸಿಂಹದ ಹಾಗೆ ಹೋರಾಡು” ಎಂದು… ಎಳೆವಯಸ್ಸಿನ ಮಗನೊಬ್ಬ ಶತ್ರುಗಳೊಂದಿಗೆ ಹೋರಾಡಲು ಹೋಗುತ್ತಿದ್ದಾನೆ; ಅದೂ ರಣಭೂಮಿಗೆ ಯುದ್ಧಕ್ಕೆಂದು ಹೊರಟಿದ್ದಾನೆ ಎಂದು ತಿಳಿದ ತಾಯಿಯೊಬ್ಬಳು ಹೀಗೆ ಹರಸುತ್ತಾಳೆಂದರೆ ಆತ ಬಹುಜನ್ಮಗಳ ಪುಣ್ಯವನ್ನೇ ಮಾಡಿರಬಹುದು. ಹೀಗೆ ಹೆತ್ತ ತಾಯಿಯನ್ನು ಬಿಟ್ಟು ಗಡಿಗೆ ಬಂದವ ಹೊತ್ತ ತಾಯಿಯ ರಕ್ಷಣೆಗೆ ನಿಂತಿದ್ದ. ಅಕ್ಷರಶಃ ಸಿಂಹದಂತೆಯೇ ಹೋರಾಡಿ, ರಣಾಂಗಣದಲ್ಲೇ ವೀರಮರಣವನ್ನಪ್ಪಿದನೇ ಹೊರತು ಬೆನ್ನು ತೋರಿಸಿ ಓಡಿ ಬರಲಿಲ್ಲ.

1971ರ ಭಾರತ ಪಾಕಿಸ್ತಾನ ಯುದ್ಧವದು ಪಾಕಿಸ್ತಾನಿ ಸೈನಿಕರಿಗೂ ಭಾರತೀಯ ಸೈನಿಕರಿಗೂ ಭೀಕರ ಕಾಳಗವೇ ಏರ್ಪಟ್ಟಿತ್ತು. 17ನೇ ಪೂನಾ ಹಾರ್ಸ್‌ ರೆಜಿಮೆಂಟು ಕಾಶ್ಮೀರದ ಕಾಶ್ಮೀರದ ಶಕರ್‌ಗಢ ಸೆಕ್ಟರಿನಲ್ಲಿ ನಿಯೋಜಿಸಲ್ಪಟ್ಟಿತ್ತು. ಬ್ರಿಗೇಡ್ ಬಸಂತರ್ ನದಿಗೆ ಅಡ್ಡಲಾಗಿ ಸೇತುವೆಯನ್ನು ಸ್ಥಾಪಿಸಬೇಕಾಗಿತ್ತು. ಆದರೆ ಆ ಪ್ರದೇಶ ಪೂರ್ತಿಯಾಗಿ ಶತ್ರು ಮೈನ್‌ ಗಳಿಂದ ಕೂಡಿತ್ತು. ಇಂಜಿನಿಯರ್‌ ಗಳು ಅರ್ಧದಷ್ಟು ದಾರಿಯಲ್ಲಿ ಮೈನ್‌ ಅನ್ನು ನಿಷ್ಕ್ರಿಯಗೊಳಿಸಿದ್ದರು. ಆದರೆ ಅಷ್ಟರಲ್ಲಿ ಶತ್ರುವು ವಾಯುಬೆಂಬಲಕ್ಕಾಗಿ ಮೊರೆಯಿಡುತ್ತಿರುವುದು ತಿಳಿದುಬರುತ್ತದೆ. ಆಗ ಶತ್ರುವಿನ ದಮನಕ್ಕೆ 17ನೇ ಪೂನಾ ಹಾರ್ಸ್‌ ಮೈನ್‌ ಫೀಲ್ಡ್ ನಲ್ಲಿಯೇ ಮುಂದುವರೆಯುತ್ತದೆ. ನಮ್ಮ ಸೈನ್ಯವನ್ನು ಎ & ಬಿ ಎಂಬ ಎರಡು ಸ್ಕ್ವಾಡ್ರನ್‌ ಗಳಾಗಿ ವಿಂಗಡಿಸಿ ಈ ಪ್ರದೇಶದಲ್ಲಿ ಯುದ್ಧ ತಂತ್ರ ರಚಿಸಲಾಗಿತ್ತು.

ಡಿಸೆಂಬರ್‌ 16 ರಂದು ಶತ್ರು ಪಡೆಗಳು ಬಿ ಸ್ಕ್ವಾಡ್ರನ್‌ ಅನ್ನು ಗುರಿಯಾಗಿಸಿ ದಾಳಿ ಪ್ರಾರಂಭಿಸಿತು. ಸ್ಕ್ವಾಡ್ರನ್ನ ಕಮಾಂಡರ್ ತುರ್ತಾಗಿ ಸಹಾಯಕ್ಕಾಗಿ ಮೊರೆಯಿಟ್ಟರು. ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್‌ಪಾಲ್ ಹತ್ತಿರದಲ್ಲೇ ಇದ್ದ ‘ಎ’ ಸ್ಕ್ವಾಡ್ರನ್‌ ನಲ್ಲಿದ್ದರು. ಕೂಡಲೇ ಸ್ವಯಂ ಪ್ರೇರಿತವಾಗಿ ನೆರವಿಗೆ ಧಾವಿಸಿದರು. ಅವರೊಟ್ಟಿಗೆ ಕ್ಯಾಪ್ಟನ್ ವಿ ಮಲ್ಹೋತ್ರಾ [ಮಲ್ಲು], ಲೆಫ್ಟಿನೆಂಟ್ ಅವತಾರ್ ಅಹ್ಲಾವತ್ ಕೂಡ ಧಾವಿಸಿದ್ದರು. ಮೂವರೂ ಶತ್ರು ಟ್ಯಾಂಕರ್‌ ಗಳೊಂದಿಗೆ ವೀರಾವೇಶದಿಂದ ಹೋರಾಟ ನಡೆಸಿದರು. ಆದರೆ ಅವತಾರ್‌ ಅವರ ಟ್ಯಾಂಕ್‌ ಜಖಂ ಆಗಿ ಆವರು ವಾಪಸ್ಸಾಗಬೇಕಾಯಿತು. ಮಲ್ಲು ಅವರ ಟ್ಯಾಂಕ್‌ ನ ಗನ್‌ ಕೂಡ ಸ್ಥಗಿತವಾಗಿತ್ತು. ಆಗ ಶತ್ರುಗಳೆದುರು ನಿಂತಿದ್ದು ಖೇತರ್‌ ಪಾಲ್‌ ಒಬ್ಬರೇ..

ಅರ್ಧಗಂಟೆಗಳ ಕಾಲ ಸೋಲು-ಗೆಲುವಿನ ನಡುವೆ ಶತ್ರುವನ್ನು ಸಮರ್ಥವಾಗಿ ಎದುರಿಸಿದ ಖೇತರ್‌ಪಾಲ್‌ ನಾಲ್ಕು ಪ್ಯಾಟನ್ ಟ್ಯಾಂಕ್‌ಗಳನ್ನು ಹೊಡೆದುರುಳಿಸಿದರು. ಯುದ್ಧದ ಸಮಯದಲ್ಲಿ ಸೆಕೆಂಡ್ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಟ್ಯಾಂಕ್ ಶತ್ರುಗಳ ಗುಂಡಿನ ದಾಳಿಗೆ ಹಾನಿಯಾಯಿತು. ಆದರೆ ಅವರು ಟ್ಯಾಂಕ್ ಅನ್ನು ತ್ಯಜಿಸಲಿಲ್ಲ, ಬದಲಿಗೆ ಹೋರಾಟ ಮುಂದುವರೆಸಿದರು. ಬೆಂಕಿಯಿಂದ ಅವರ ಟ್ಯಾಂಕ್‌ ಹೊತ್ತಿ ಉರಿಯುತ್ತಿತ್ತು. ಟ್ಯಾಂಕ್ ಅನ್ನು ತ್ಯಜಿಸಲು ಆದೇಶಿಸಿದ ಉನ್ನತ ಅಧಿಕಾರಿಗೆ ರೇಡಿಯೊದಲ್ಲಿ ಖೇತರ್ಪಾಲ್‌ ಹೇಳಿದ್ದೇನು ಗೊತ್ತೇ ? …“ಇಲ್ಲ ಸರ್, ನಾನು ನನ್ನ ಟ್ಯಾಂಕ್ ಅನ್ನು ತ್ಯಜಿಸುವುದಿಲ್ಲ. ನನ್ನ ಮೇನ್ ಗನ್ ಇನ್ನೂ ಕಾರ್ಯನಿರ್ವಹಿಸುತ್ತಿದೆ ಆ ದುಷ್ಟ ಶತ್ರುಗಳು ಕಣ್ಣೆದುರಲ್ಲೇ ಇದ್ದಾರೆ. ನನ್ನ ಗನ್‌ ವ್ಯಾಪ್ತಿಯಲ್ಲೇ ಇದ್ದಾರೆ…ಅವರನ್ನು ಮಟ್ಟಹಾಕಿಯೇ ತೀರುವೆ….” ಎಂದು. ಹೀಗೆ ಮತ್ತೊಮ್ಮೆ ಖೇತರ್‌ಪಾಲ್‌ ಟ್ಯಾಂಕಿನಿಂದ ಗುಂಡು ಹಾರಿತು. ಆದರೆ ಅದೇ ಸಮಯದಲ್ಲಿ ಶತ್ರುವಿನ ಶೆಲ್‌ ದಾಳಿಗೆ ಸಿಲುಕಿ ಅವರು ಹುತಾತ್ಮರಾಗಿ ಹೋದರು.

ಅವರು ತೋರಿದ ಅಪ್ರತಿಮ ಸಾಹಸಕ್ಕೆ ಅರುಣ್ ಖೇತರ್‌ಪಾಲ್ ಅವರಿಗೆ ರಾಷ್ಟ್ರದ ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ “ಪರಮ ವೀರ ಚಕ್ರ” ವನ್ನು ನೀಡಿ ಗೌರವಿಸಲಾಗಿದೆ. 21 ವರ್ಷ ವಯಸ್ಸಿನಲ್ಲೇ ದೇಶಕ್ಕಾಗಿ ಆತ್ಮಾಹುತಿ ನೀಡಿದ ಈ ಪರಮವೀರನ ನೆನಪಿಗಾಗಿ ಅಂಡಮಾನಿನ ದ್ವೀಪವೊಂದಕ್ಕೆ ಆತನ ಹೆಸರನ್ನಿಟ್ಟು ಅಮರನನ್ನಾಗಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!