Saturday, April 1, 2023

Latest Posts

ದೇಹ ಭೀಕರವಾಗಿ ಗಾಯಗೊಂಡಿದ್ದರೂ ಪಾಕಿಸ್ತಾನಿ ಪಡೆಗಳನ್ನು ಮಟ್ಟಹಾಕಿದ ʼಪರಮ ವೀರʼನ ಶೌರ್ಯದ ಕತೆ

– ಗಣೇಶ ಭಟ್‌, ಗೋಪಿನಮರಿ

1971ರ ಬಾಂಗ್ಲಾ ವಿಮೋಚನಾ ಯುದ್ಧವದು… ಪಾಕಿಸ್ತಾನದ ಸೈನ್ಯವು ಒಂದೇ ಸಮನೇ ಭಾರತೀಯ ಸೈನಿಕರ ಮೇಲೆ ಎಲ್‌ಎಂಜಿ, ಎಂಎಂಜಿ ಗನ್ನುಗಳಿಂದ ಗುಂಡಿನ ಮಳೆಗರೆಯುತ್ತಿತ್ತು. ಈ ಭಾರೀ ಗುಂಡಿನ ದಾಳಿಗೆ ಭಾರತೀಯ ಸೈನಿಕರಿಗೆ ಭಾರೀ ಆಘಾತವುಂಟಾಗುತ್ತಿತ್ತು. ಮುಂದುವರೆಯಲಾಗದೆ ಸೈನಿಕರು ಹೆಣಗುತ್ತಿದ್ದರು. ಇಲ್ಲಿ ಮುನ್ನಡೆ ಸಾಧಿಸಲೇಬೇಕೆಂದರೆ ಶತ್ರುವಿನ ಎಲ್‌ಎಂಜಿಗನ್ನುಗಳನ್ನು ಸದೆಬಡಿಯಬೇಕಿತ್ತು. ಆ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಶತ್ರುವು ಬಂಕರಿನೊಳಗೆ ಭದ್ರವಾಗಿ ಕೂತಿದ್ದ. ನಮ್ಮ ಸೈನಿಕರು ತುಸುವೇ ದೂರದಿಂದ ಪ್ರತಿದಾಳಿ ನಡೆಸುತ್ತಿದ್ದರೂ ಶತ್ರುವಿಗೆ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಮುನ್ನುಗ್ಗೋಣವೆಂದರೆ ಶತ್ರುವಿನ ಗುಂಡಿನ ಮಳೆಯೇ ಸುರಿಯುತ್ತಿದೆ… ಹೋದರೆ ಬಂಕರ್‌ ತಲುಪುವ ಮೊದಲೇ ಸಾವು ನಿಶ್ಚಿತ ಎನ್ನುವಂತಿತ್ತು ಆ ಸನ್ನಿವೇಶ. ಶತ್ರುವಿನ ದಾಳಿಗೆ ನಮ್ಮ ಸೈನಿಕರು ಹೈರಾಣಾಗಿದ್ದರು. ಆತನನ್ನು ಹಿಮ್ಮೆಟ್ಟಿಸುವುದು ಹೇಗೆಂದು ತಿಳಿಯದೇ ನಮ್ಮ ಸೈನಿಕರು ಒದ್ದಾಡಿತ್ತಿದ್ದರು. ಅಂತಹ ಸಂದರ್ಭದಲ್ಲಿ ಅವರಲ್ಲೊಬ್ಬ ಸೈನಿಕ ಎದ್ದು ನಿಂತ. ಶತ್ರುವಿನ ಭೀಕರ ಗುಂಡಿನ ದಾಳಿಗೆ ಎದೆಯೊಡ್ಡಿ ಮುನ್ನುಗ್ಗಿದ. ಬಂಕರ್‌ ಪ್ರವೇಶಿಸಿದವನೇ ಎಲ್‌ಎಂಜಿ ಗನ್‌ ಚಲಾಯಿಸುತ್ತಿದ್ದ ಶತ್ರುವಿನ ಮೇಲೆ ಮುಗಿಬಿದ್ದು ಆತನನ್ನು ನರಕಕ್ಕೆ ಅಟ್ಟಿದ. ಆದರೆ ದಾಳಿಯ ವೇಳೆ ಆತನಿಗೆ ಬಲವಾದ ಗಾಯಗಳಾಗಿದ್ದವು. ಎಲ್‌ಎಂಜಿ ಮಷೀನ್‌ ಗನ್‌ ಸದ್ದು ನಿಂತಿತ್ತು. ಈತನ ದಾಳಿಗೆ ಇಬ್ಬರು ಶತ್ರು ಸೈನಿಕರು ಹತರಾಗಿದ್ದರು. ಆದರ ಅಷ್ಟರಲ್ಲೇ ಮತ್ತೊಂದು ಎಂಎಂಜಿ ಗನ್ ದಾಳಿಯಿಡಲು ಆರಂಭಿಸಿತು. ಇತ್ತ ಭೀಕರವಾಗಿ ಗಾಯಗೊಂಡಿದ್ದ ಈ ಧೀರನಿಗೆ ತನಗಾಗಿದ್ದ ಗಾಯದ ನೋವೆಲ್ಲ ಮರೆತುಹೋಯಿತು. ತಾಯಿ ಭಾರತಿಯನ್ನು ನೆನೆದ ಆ ವೀರ ಗಾಯದಗೊಂಡಿದ್ದ ದೇಹದಲ್ಲೇ ಎದ್ದುನಿಂತ. ಕೈಯಲ್ಲಿ ಗ್ರೆನೇಡು ಹಿಡಿದು ಶತ್ರವಿನತ್ತ ಮುನ್ನುಗ್ಗಿದ. ಶತ್ರುವಿನ ಎಂಎಂಜಿ ಗನ್ನುಗಳು ನಾಶವಾಗಿತ್ತು. ಭಾರತೀಯ ಸೈನಿಕರಿಗೆ ಮುನ್ನಡೆಯಾಗಿತ್ತು. ತಾಯಿ ಭಾರತಿಯನ್ನು ರಕ್ಷಿಸುವ ಯಜ್ಞವೊಂದರಲ್ಲಿ ಪರಮವೀರನೊಬ್ಬನ ಆತ್ಮಾಹುತಿಯಾಗಿತ್ತು. ಆ ಮಹಾನ್‌ ಯೋಧನ ಹೆಸರೇ ಲ್ಯಾನ್ಸ್‌ ನಾಯಕ್‌ ಅಲ್ಬರ್ಟ್‌ ಎಕ್ಕಾ. 1971ರಲ್ಲಿ ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಕೆಚ್ಚೆದೆಯ ಗಂಡುಗಲಿಯೀತ.

ಹುಟ್ಟಿದ್ದು 27 ಡಿಸೆಂಬರ್‌ 1942ರಂದು ಬಿಹಾರದ (ಈಗ ಜಾರ್ಖಂಡ್) ಗುಮ್ಲಾ ಜಿಲ್ಲೆಯ ಝರಿ ಗ್ರಾಮದಲ್ಲಿ. ಬಾಲ್ಯದಿಂದಲೇ ಭಾರತೀಯ ಸೇನೆಯನ್ನು ಸೇರಬೇಕೆಂಬ ಹುಚ್ಚು ಬೆಳೆದಿತ್ತು. ಆತನ ಈ ಕನಸು 1962ರಲ್ಲಿ ನನಸಾಗಿತ್ತು. ಅಲ್ಬರ್ಟ್‌ ಎಕ್ಕಾ ಭಾರತೀಯ ಸೇನೆಯಲ್ಲಿ ನಿರ್ಭೀತ ಹೋರಾಟಕ್ಕೆ ಹೆಸರುವಾಸಿಯಾಗಿದ್ದ ಯಾಂತ್ರೀಕೃತ ರೆಜಿಮೆಂಟ್‌ 14 ನೇ ಬ್ರಿಗೇಡ್ ಆಫ್ ದಿ ಗಾರ್ಡ್ಸ್‌ನಲ್ಲಿ  ನೇಮಕಗೊಂಡಿದ್ದ. ಆಗಿನ್ನೂ ಆತ 20ರ ಬಿಸಿರಕ್ತದ ತರುಣ. ನಂತರದಲ್ಲಿ ಸುಮಾರು 9 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ, ಈಶಾನ್ಯ ಭಾರತದ ಹಲವಾರು ಪ್ರದೇಶದಲ್ಲಿ ದಂಗೆಗಳನ್ನು ಹತ್ತಿಕ್ಕುವ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಪಾರ ಅನುಭವಗಳಿಸಿದ್ದ.

1971 ರ ಸಮಯದಲ್ಲಿ ಪೂರ್ವಪಾಕಿಸ್ತಾನವೆಂದು ಕರೆಸಿಕೊಳ್ಳುತ್ತಿದ್ದ ಬಾಂಗ್ಲಾದೇಶವನ್ನು ಪಾಕಿಸ್ತಾನಿಗಳ ಕಪಿಮುಷ್ಟಿಯಿಂದ ಬಿಡಿಸಲು ಬಾಂಗ್ಲಾದೇಶದ ʼಮುಕ್ತಿವಾಹಿನಿʼಗೆ ಬೆಂಬಲ ನೀಡಿದ ಭಾರತವು ಪಾಕಿಸ್ತಾನಿ ಪಡೆಗಳ ಮೇಲೆ ಯುದ್ಧ ಘೋಷಿಸಿತು. ಆ ಸಮಯದಲ್ಲಿ ಆಲ್ಬರ್ಟ್‌ ಇದ್ದ 14ನೇ ಗಾರ್ಡ್‌ಗಳನ್ನು ಆಗಿನ ಪೂರ್ವ ಪಾಕಿಸ್ತಾನದ ಬ್ರಹ್ಮನ್‌ಬರ್ಹಿಯಾ ಜಿಲ್ಲೆಯ ಅಗರ್ತಲಾದಿಂದ ಪಶ್ಚಿಮಕ್ಕೆ 6 ಕಿಮೀ ದೂರದಲ್ಲಿರುವ ಗಂಗಾಸಾಗರ್‌ನಲ್ಲಿ ಪಾಕಿಸ್ತಾನಿ ಪಡೆಗಳನ್ನು ಮಟ್ಟಹಾಕಲು ಕಳುಹಿಸಲಾಗಿತ್ತು. ಬಾಂಗ್ಲಾದೇಶದ ರಾಜಧಾನಿ ಢಾಕಾಗೆ ಪ್ರಮುಖ ರೇಲ್ವೇ ಸಂಪರ್ಕವು ಗಂಗಾಸಾಗರ್‌ ಮೂಲಕವೇ ಹಾದುಹೋಗಿತ್ತು. ಅಲ್ಲದೇ ಯುದ್ಧದ ದೃಷ್ಟಿಯಿಂದ ಬಹಳ ಆಯಕಟ್ಟಿನ ಜಾಗವಾಗಿದ್ದು ಕೋಟೆಯಂತೆ ಭದ್ರವಾಗಿತ್ತು. ಢಾಕಾವನ್ನು ವಶಪಡಿಸಿಕೊಳ್ಳಲು ಭಾರತವು ಈ ಪ್ರದೇಶದ ಮೇಲೆ ಹಿಡಿತ ಸಾಧಿಸುವುದು ಬಹಳ ಮುಖ್ಯವಾಗಿತ್ತು. 14ನೇ ಬ್ರಿಗೇಡ್‌ ಆಫ್‌ ಗಾರ್ಡ್ಸ್‌ ಹೆಗಲಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಭಾರತೀಯ ಬೆಟಾಲಿಯನ್ ಪಾಕಿಸ್ತಾನವನ್ನು ಹತ್ತಿಕ್ಕಲು ಮುನ್ನುಗ್ಗಿತು. ಆದರೆ ಶತ್ರುಗಳಿಂದ ತೀವ್ರವಾದ ಶೆಲ್ ದಾಳಿ ಮತ್ತು ಗುಂಡಿನದಾಳಿ ಎದುರಾಯಿತು. ಶತ್ರುವಿನ ಬಂಕರ್‌ ನಿಂದ ಲಘು ಮೆಷಿನ್ ಗನ್ ಒಂದೇ ಸಮನೆ ಗುಂಡು ಹಾರಿಸುತ್ತಿತ್ತು. ಇದರಿಂದಾಗಿ ಭಾರೀ ಸಾವುನೋವುಗಳು ಸಂಭವಿಸಿದವು. ಇದನ್ನು ಗಮನಿಸಿದ ಲ್ಯಾನ್ಸ್‌ ನಾಯಕ್‌ ಅಲ್ಬರ್ಟ್‌ ಎಕ್ಕಾ ವೈಯಕ್ತಿಕ ಸುರಕ್ಷತೆಯನ್ನು ಲೆಕ್ಕಿಸದೆ ಬಂಕರ್‌ ನತ್ತ ಮುನ್ನುಗ್ಗಿದ್ದರು. “ಪಹ್ಲಾ ಹಮೇಶಾ ಪಹ್ಲಾ” ಅಂದರೆ “ಮೊದಲು ಯಾವಾಗಲೂ ಮೊದಲು” ಎಂಬ ಬ್ರಿಗೇಡ್ ಆಫ್ ದಿ ಗಾರ್ಡ್ಸ್ ನ ಧ್ಯೇಯವಾಕ್ಯದಂತೆ ಶತ್ರುವಿನ ಮೇಲೆ ಮುಗಿಬಿದ್ದರು. ಈ ಮುಖಾಮುಖಿಯಲ್ಲಿ ತೀವ್ರವಾಗಿ ಗಾಯಗೊಂಡರೂ ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾಶತ್ರುವನ್ನು ಸದೆಬಡಿದು ಪ್ರಾಣಾರ್ಪಣೆ ಮಾಡಿದರು. ಪರಿಣಾಮ ಗಂಗಾಸಾಗರ ಭಾರತೀಯ ಪಡೆಗಳ ಕೈವಶವಾಯಿತು. ಇದರ ಪರಿಣಾಮವಾಗಿ ಭಾರತೀಯ ಪಡೆಗಳು ಢಾಕಾ ಕಡೆಗೆ ತಮ್ಮ ವಿಜಯ ಮೆರವಣಿಗೆ ನಡೆಸಿದವು. 93 ಸಾವಿರ ಪಾಕಿಸ್ತಾನಿ ಸೈನಿಕರನ್ನು ಸೆರೆ ಹಿಡಿದ ಭಾರತವು ಯುದ್ಧದಲ್ಲಿ ಮಹೋನ್ನತ ವಿಜಯಸಾಧಿಸಿತು. ಆದರೆ ಎಕ್ಕಾ ಯುದ್ಧದಲ್ಲಿ ಪ್ರಾಣಾರ್ಪಣೆ ಮಾಡಿ ಸ್ವರ್ಗಸ್ಥರಾದರು.

ಗಂಗಾಸಾಗರ ಯುದ್ಧದಲ್ಲಿ ಅವರ ವೀರೋಚಿತ ಹೋರಾಟವು ಯುದ್ಧದ ದಿಕ್ಕನ್ನೇ ಬದಲಿಸಿತ್ತು. ಅವರ ಧೈರ್ಯ, ಮಣಿಯದ ಹೋರಾಟದ ಮನೋಭಾವ ಮತ್ತು ಅತ್ಯುನ್ನತ ತ್ಯಾಗಕ್ಕಾಗಿ ಅವರಿಗೆ ಮರಣೋತ್ತರವಾಗಿ ಸೇನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮವೀರ ಚಕ್ರʼವನ್ನು ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಅಂಡಮಾನಿನ ದ್ವೀಪವೊಂದಕ್ಕೆ ಅವರ ಹೆಸರನ್ನಿಟ್ಟು ಅವರನ್ನು ಅಮರರನ್ನಾಗಿಸಲಾಗಿದೆ. ಅವರ ಮಹಾನ್‌ ತ್ಯಾಗಕ್ಕಿದೋ ಸಾಸಿರ ಪ್ರಣಾಮ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!