Friday, February 23, 2024

ಪಾಕಿಸ್ತಾನಿಗಳೆದುರು ಪರಾಕ್ರಮ ಮೆರೆದ ʼಪರಮ ವೀರʼನ ಕತೆ

– ಗಣೇಶ ಭಟ್‌, ಗೋಪಿನಮರಿ

“ಯುದ್ಧವನ್ನು ತ್ಯಾಗದಿಂದ ಮಾತ್ರವೇ ಗೆಲ್ಲಲು ಸಾಧ್ಯ… ಉತ್ತಮ ತಂಡದಿಂದ ಮಾತ್ರ ಗೆಲ್ಲಲು ಸಾಧ್ಯ” ಪರಮವೀರ ಚಕ್ರ ವಿಜೇತ ರೈಫಲ್ ಮ್ಯಾನ್ ಸಂಜಯ್ ಕುಮಾರ್ ಅವರ ಮಾತುಗಳಿವು. 1999 ರ ಕಾರ್ಗಿಲ್ ಯುದ್ಧದಲ್ಲಿ ಶತ್ರುಗಳ ಗುಂಡು ದೇಹ ಹೊಕ್ಕರೂ ಜೀವದ ಹಂಗು ತೊರೆದು ಹೋರಾಡಿ ಭಾರತದ ವಿಜಯಕ್ಕೆ ಕಾರಣವಾದ ಇವರ ಅಪ್ರತಿಮ ಹೋರಾಟ ಎಂಥವರಿಗಾದರೂ ಸ್ಫೂರ್ತಿ ನೀಡುತ್ತದೆ.

ಸುಬೇದಾರ್ ಸಂಜಯ್ ಕುಮಾರ್ ಮೂಲತಃ ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯ ಹಳ್ಳಿಯೊಂದರವರು. ಅವರ ಕುಟುಂಬವು ಸೇನಾ ಹಿನ್ನೆಲೆಯನ್ನು ಹೊಂದಿತ್ತು. ಅವರ ಚಿಕ್ಕಪ್ಪ 1965ರ ಇಂಡೋ-ಪಾಕ್‌ ಯುದ್ಧದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಹೀಗಾಗಿ ಸೈನಿಕನಿಗೆ ಇರಬೇಕಾದ ಗುಣಗಳು ಅವರಿಗೆ ಬಾಲ್ಯದಲ್ಲಿಯೇ ರೂಢಿಯಾಗಿತ್ತು. ಕೌಟುಂಬಿಕ ಬಡತನದಿಂದಾಗಿ ಸಂಜಯ್ ಕುಮಾರ್ ಅವರಿಗೆ ಉನ್ನತ ಶಿಕ್ಷಣ ಕನಸಾಗೇ ಉಳಿಯಿತು. ಮಾಧ್ಯಮಿಕ‌ ಶಿಕ್ಷಣ ಮುಗಿಸಿದ ನಂತರ ಉದ್ಯೋಗ ಮಾಡಿ ಸಂಪಾದಿಸಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಹಾಗಾಗಿ ಸಂಜಯ್ ಕುಮಾರ್ ದೆಹಲಿಗೆ ಬಂದರು. ಆರಂಭದಲ್ಲಿ ಅಲ್ಲಿ ದಿನನಿತ್ಯ ಟ್ಯಾಕ್ಸಿ ಓಡಿಸಿ ಹಣ ಸಂಪಾದಿಸುತ್ತಿದ್ದರು. ಆದರೆ ಸೇನೆಗೆ ಸೇರಬೇಕೆಂಬ ಉತ್ಕಟ ಬಯಕೆ ಅವರಲ್ಲಿತ್ತು.

ಟ್ಯಾಕ್ಸಿ ಓಡಿಸುತ್ತಲೇ ಎರಡ್ಮೂರು ಬಾರಿ ಸೇನೆಗೆ ಸೇರುವ ಪ್ರಯತ್ನ ಮಾಡಿದ್ದರು. ಆದರೆ ದುರದೃಷ್ಟವಶಾತ್ ಅವರು ಆಯ್ಕೆಯಾಗಿರಲಿಲ್ಲ. ಆದರೂ ಅವರು ತಮ್ಮ‌ಪ್ರಯತ್ನ ಬಿಡಲಿಲ್ಲ. ಅಂತಿಮವಾಗಿ ತಮ್ಮ‌‌ ನಾಲ್ಕನೇ ಪ್ರಯತ್ನದಲ್ಲಿ ಸೇನೆಗೆ ಸೇರುವ ಅವರ ಕನಸು ನನಸಾಗಿತ್ತು. 1996ರಲ್ಲಿ ಅವರು ಸೇನೆಗೆ ಸೇರಿದರು. ತರಬೇತಿಯ ನಂತರ ಅವರನ್ನು ಜಮ್ಮು ಕಾಶ್ಮೀರ ರೈಫಲ್ಸ್ ನ 13ನೇ ಬೆಟಾಲಿಯನ್ ಗೆ ನಿಯುಕ್ತಿಗೊಳಿಸಲಾಗಿತ್ತು. ಸೇನೆ ಸೇರಿದ ಮೂರು‌ ವರ್ಷಗಳಲ್ಲಿಯೇ ಅವರಿಗೆ ತಮ್ಮ‌ ಪರಾಕ್ರಮ ಮೆರೆಯುವ ಸಂದರ್ಭ ಒದಗಿತ್ತು. ಕಾರ್ಗಿಲ್‌ ಯುದ್ಧ ಆರಂಭವಾಗಿತ್ತು. ಎಲ್ ಒ ಸಿ ದಾಟಿ‌ ಬಂದ ಪಾಲಿಸ್ತಾನಿಗಳನ್ನು ಹಿಮ್ಮೆಟ್ಟಿಸೋಕೆ ಭಾರತೀಯ ಸೇನೆಯು ‘ಆಪರೇಷನ್ ವಿಜಯ್’ ಅನ್ನು ಪ್ರಾರಂಭಿಸಿತ್ತು.

ಆ ಸಂದರ್ಭದಲ್ಲಿ ಕಾಶ್ಮೀರ‌ದಲ್ಲಿನ ಕಾರ್ಗಿಲ್ ವಲಯದ ಬಳಿಯ ‌’ಏರಿಯಾ ಫ಼್ಲಾಟ್ ಟಾಪ್’ ಅನ್ನು ವಶಪಡಿಸಿಕೊಳ್ಳಲು ಸಂಜಯ್ ಕುಮಾರ್ ಅವರಿದ್ದ ತುಕಡಿಗೆ ಆದೇಶಿಸಲಾಗಿತ್ತು. ಸಂಜಯ್ ಕುಮಾರ್ ತಂಡವೊಂದರ ಸ್ಕೌಟ್ ಲೋಡರ್ ಆಗಿ ನೇಮಕಗೊಂಡರು. ತಮ್ಮ ಸಹ ಸೈನಿಕರೊಂದಿಗೆ ಮೇಲೆ ಹತ್ತಿ ಅಡಗಿ ಕುಳಿತಿದ್ದ‌ ಶತ್ರುಗಳನ್ನು ಮಟ್ಟ ಹಾಕುವ ಅತ್ಯಂತ ಕಠಿಣ ಕೆಲಸಕ್ಕೆ ಹೊರಟಿದ್ದರು ಸುಬೇದಾರ್ ಸಂಜಯ್ ಕುಮಾರ್.

ಜುಲೈ 4, 1999 ರ ಸಮಯವದು, ಫ್ಲ್ಯಾಟ್‌ ಟಾಪ್‌ ನಲ್ಲಿ ಶತ್ರು ಸೈನಿಕರು ಅಡಗಿ ಕುಳಿತಿದ್ದರು. ಕೊರೆವ ಚಳಿಯ ನಡುವೆ ದುರ್ಗಮ ಬೆಟ್ಟಗಳನ್ನು ಹತ್ತಿ ಹೋದ ನಮ್ಮ ಸೈನಿಕರಿಗೆ ಬಂಕರ್‌ ನಲ್ಲಿ ಅಡಗಿ ಕೂತಿದ್ದ ಶತ್ರುಗಳ ಗುಂಡಿನ ದಾಳಿ ಎದರುರಾಯಿತು. ಗ್ರೆನೇಡುಗಳನ್ನು ಎಸೆಯುತ್ತ ಶತ್ರುಗಳು ಬೆಂಕಿಯ ಮಳೆ ಸುರಿಸಿದರು. ಆದರೆ ಒಬ್ಬ ನಾಯಕನಾದವು ಎಂದಿಗೂ ಇಂಥಹ ಸನ್ನಿವೇಶಗಳಲ್ಲಿ ಹಿಂದೆ ಸರಿಯಲಾರ. ತನ್ನ ಪ್ರಾಣವನ್ನು ಪಣಕ್ಕಿಟ್ಟಾದರೂ ಹೋರಾಟ ನಡೆಸುತ್ತಾನೆ. ಸಂಜಯ್‌ ಕುಮಾರ್‌ ಅದನ್ನೇ ಮಾಡಿದರು. ನಿರಂತರ ಗುಂಡಿನ ದಾಳಿಯ ಹೊರತಾಗಿಯೂ, ಒಂದು ಬದಿಯಲ್ಲಿ ತಾನಾಗಿಯೇ ಮೇಲಕ್ಕೆ ಹೋಗಿ ಶತ್ರುಗಳ ಬಂಕರ್ ಕಡೆಗೆ ಓಡಿಹೋಗಿ ದಾಳಿ ನಡೆಸಿದರು. ಈ ಧೈರ್ಯದ ಪ್ರಯತ್ನದಲ್ಲಿ ಎರಡು ಗುಂಡುಗಳು ಅವರ ಎದೆ ಮತ್ತು ಮುಂಗೈಗೆ ತಗುಲಿ ಅವರು ತೀವ್ರವಾಗಿ ಗಾಯಗೊಂಡು ರಕ್ತಸ್ರಾವವಾಯಿತು.

ಅವರು ಗಾಯಗೊಂಡಿದ್ದರೂ ಸಹ, ಅವರು ತಮ್ಮ ಕಾರ್ಯಗಳಲ್ಲಿ ನಿರಂತರವಾಗಿ ಮತ್ತು ಶತ್ರುಗಳ ಬಂಕರ್ ಕಡೆಗೆ ಹೆಜ್ಜೆ ಹಾಕುವುದನ್ನು ಮುಂದುವರೆಸಿ ಮೂರುಜನ ಪಾಪಿಸ್ತಾನಿಗಳನ್ನು ಕೊಂದು ಹಾಕಿದರು. ಗುಂಡಿನ ಮಳೆಗರೆಯುತ್ತಿದ್ದ ಎದರುರಾಳಿ ಸೈನಿಕನ ಕೈಲಿದ್ದ ಯುನಿವರ್ಸಲ್ ಮೆಷಿನ್ ಗನ್ (UMG) ಅನ್ನು ಎತ್ತಿಕೊಂಡು ಮತ್ತೊಂದು ಶತ್ರು ಬಂಕರ್‌ಗೆ ತೆವಳಿ ದಾಳಿ ಮುಂದುವರೆಸಿದರು. ಅವರ ಮೈ ರಕ್ತದ ಮಡುವಿನಲ್ಲಿ ಒದ್ದೆಯಾಗಿತ್ತು. ಅವರ ಈ ಅಪ್ರತಿಮ ಶೌರ್ಯ ನಮ್ಮ ಸೈನಿಕರಿಗೆ ದೊಡ್ಡ ಸ್ಫೂರ್ತಿ ನೀಡಿತು. ವೀರಾವೇಶದಿಂದ ಹೋರಾಡಿ ಏರಿಯಾ ಫ್ಲಾಟ್‌ ಟಾಪ್ ವಶಪಡಿಸಿಕೊಳ್ಳುವಲ್ಲಿ ನಮ್ಮ ಸೈನಿಕರು ಯಶಸ್ವಿಯಾದರು. ಅವರ ಈ ಅಪ್ರತಿಮ ಹೋರಾಟಕ್ಕಾಗಿ ಅವರಿಗೆ ಅತ್ಯುನ್ನತ ಶೌರ್ಯ ಪ್ರಶಸ್ತಿ ʼಪರಮ ವೀರ ಚಕ್ರʼವನ್ನು ನೀಡಿ ಗೌರವಿಸಲಾಗಿದೆ.

ಪ್ರಸ್ತುತ, ಸುಬೇದಾರ್ ಸಂಜಯ್ ಕುಮಾರ್ ಅವರು ಭಾರತೀಯ ಸೇನೆಯಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿದ್ದಾರೆ. ಭಾರತದ ಅತ್ಯುನ್ನತ ಮಿಲಿಟರಿ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಪಡೆದ ಮೂವರು ಜೀವಂತ ಪುರಸ್ಕೃತರಲ್ಲಿ ಒಬ್ಬರು ಎನ್ನಿಸಿದ್ದಾರೆ. ಕಾರ್ಗಿಲ್‌ ಯುದ್ಧದಲ್ಲಿ ಪರಾಕ್ರಮ ಮೆರೆದ ಸಂಜಯ್‌ ಕುಮಾರ್ ಅವರ ಕಥೆಯನ್ನು ಎಲ್ಒಸಿ ಕಾರ್ಗಿಲ್ ಚಿತ್ರದಲ್ಲಿ ಚಿತ್ರಿಸಲಾಗಿದೆ, ಇದರಲ್ಲಿ ಅವರ ಪಾತ್ರವನ್ನು ಪ್ರಸಿದ್ಧ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಿರ್ವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!