ಇವಿಎಂ ಬಳಕೆ ತಡೆಗೆ ಸುಪ್ರೀಂ ನಕಾರ: ಅರ್ಜಿ ವಜಾಗೊಳಿಸಿದ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚುನಾವಣೆಗಳಲ್ಲಿನ ಮತದಾನದ ವೇಳೆ ಬಳಸಲು ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಜಾರಿಗೊಳಿಸಲು ರೂಪಿಸಲಾದ ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರ ಪೀಠವು, ಚುನಾವಣೆಗಳಲ್ಲಿ ಮತಯಂತ್ರಗಳನ್ನು ಬಳಸುವುದಕ್ಕೆ ಸಂಬಂಧಿಸಿದ 1951 ರ ಕಾಯ್ದೆಯ ಸೆಕ್ಷನ್ 61 ಎ ಅನ್ನು ಪ್ರಶ್ನಿಸುವ ಮನವಿಯನ್ನು ನಿರಾಕರಿಸಿದೆ .

ಅರ್ಜಿದಾರ ಹಾಗೂ ವಕೀಲ ಎಂ.ಎಲ್. ಶರ್ಮಾ ವಾದಿಸಿ, ಸಂವಿಧಾನದ 100 ನೇ ವಿಧಿಯನ್ನು ಉಲ್ಲೇಖಿಸಿ ಇದು ಕಡ್ಡಾಯ ನಿಬಂಧನೆಯಾಗಿದೆ ಎಂದರು.

ಸಂವಿಧಾನದ 100ನೇ ವಿಧಿಯು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿನ ಮತದಾನ, ಖಾಲಿ ಹುದ್ದೆಗಳು ಮತ್ತು ಕೋರಮ್‌ಗಳ ಹೊರತಾಗಿಯೂ ಕಾರ್ಯನಿರ್ವಹಿಸುವ ಸದನಗಳ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 61ಎ ಇದು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಮತದಾನದ ಮೂಲಕ ಅಂಗೀಕಾರವಾಗಿಲ್ಲ ಎಂದು ಶರ್ಮಾ ಹೇಳಿದರು.

ಈ ವೇಳೆ ಕೋರ್ಟ್ ಸದನದಲ್ಲಿ ಏನು ನಡೆದಿದೆ ಅದನ್ನು ಪ್ರಶ್ನಿಸುತ್ತಿರುವಿರಾ? ಸಾಮಾನ್ಯ ಮತದಾನವನ್ನು ನೀವು ಪ್ರಶ್ನಿಸುತ್ತಿರುವಿರಾ? ಏನನ್ನು ನೀವು ಪ್ರಶ್ನಿಸುತ್ತಿರುವಿರಿ ಎಂದು ಕೋರ್ಟ್ ಕೇಳಿತು. ನಮಗೆ ಇದರಲ್ಲಿ ಯಾವುದೇ ಮೆರಿಟ್ ಕಾಣಿಸುತ್ತಿಲ್ಲ, ಡಿಸ್ಮಿಸ್ಡ್​ ಎಂದು ನ್ಯಾಯಾಲಯ ಮೌಖಿಕವಾಗಿ ಆದೇಶಿಸಿ ಅರ್ಜಿಯನ್ನು ವಜಾ ಮಾಡಿತು.

ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಮಾಡಿದ್ದ ಅರ್ಜಿದಾರರು, ಇವಿಎಂ ಬಳಕೆಯ ಕಾಯ್ದೆಯನ್ನು ಅನೂರ್ಜಿತ, ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!