ಮುಷ್ಕರಕ್ಕಿಳಿದಿರುವ ಟ್ರಕ್ ಚಾಲಕರಿಗೆ ಈ ಕಾಯ್ದೆಯ ಬಗ್ಗೆ ಆಕ್ಷೇಪ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇತ್ತೀಚೆಗೆ ಪರಿಷ್ಕೃತಗೊಂಡು ಬಂದಿರುವ ಭಾರತೀಯ ನ್ಯಾಯ ಸಂಹಿತೆಯ ಕಾಯ್ದೆಯೊಂದರ ವಿರುದ್ಧ ಟ್ರಕ್ ಚಾಲಕರು ದೇಶದ ಹಲವೆಡೆ ಮುಷ್ಕರನಿರತರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಟ್ರಕ್ ಚಾಲಕರ ಮುಷ್ಕರದ ಕಾರಣದಿಂದ ಮುಂಬೈ ನಗರಕ್ಕೆ ಹಾಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಗುದ್ದೋಡು ಪ್ರಕರಣ ಅರ್ಥಾತ್ ಹಿಟ್ ಆ್ಯಂಡ್ ರನ್ ಕುರಿತು ಇತ್ತೀಚಿನ ಸಂಸತ್ ಅಧಿವೇಶನದಲ್ಲಿ ಪರಿಷ್ಕೃತಗೊಂಡಿರುವ ಕಾಯ್ದೆಯೇ ಟ್ರಕ್ ಚಾಲಕರ ಆತಂಕಕ್ಕೆ ಕಾರಣವಾಗಿದೆ.

ಈ ಕಾಯ್ದೆಯನ್ನು ಮಸೂದೆ ರೂಪದಲ್ಲಿ ಮಂಡಿಸುವಾಗ ಗೃಹ ಸಚಿವ ಅಮಿತ್ ಶಾ ಅವರು ಹೇಳಿದಂತೆ, ಗುದ್ದೋಡು ಪ್ರಕರಣಗಳ ವಿಚಾರದಲ್ಲಿ ಶಿಕ್ಷೆ ನೀಡುವ ನಿಟ್ಟಿನಲ್ಲಿ ಪ್ರಮುಖ ತಿದ್ದುಪಡಿ ಮಾಡಲಾಗಿದೆ. ಆ ಪ್ರಕಾರ, ಅಪಘಾತಕ್ಕೆ ಕಾರಣವಾದ ಚಾಲಕನು ಸಂತ್ರಸ್ತರನ್ನು ಸಾಯಲುಬಿಟ್ಟು, ಆಸ್ಪತ್ರೆ ಇಲ್ಲವೇ ಪೊಲೀಸರಿಗೆ ಘಟನೆಯ ವರದಿ ಮಾಡದೇ ಓಡಿಹೋಗಿ ನಂತರ ಕಾನೂನಿನ ಕೈಗೆ ಸಿಕ್ಕರೆ ಆ ವ್ಯಕ್ತಿಗೆ 10 ವರ್ಷಗಳವರೆಗೆ ಜೈಲುಶಿಕ್ಷೆ ನೀಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದೀಗ ಮುಷ್ಕರನಿರತ ಟ್ರಕ್ ಚಾಲಕರು ಹೇಳುತ್ತಿರುವುದು- ಅಕಸ್ಮಾತ್ ಅಫಘಾತ ಸಂಭವಿಸಿದಾಗ ಘಟನಾ ಸ್ಥಳದಲ್ಲೇ ಇದ್ದರೆ ಆಕ್ರೋಶಿತ ಜನರೇ ತಮ್ಮನ್ನು ಕೊಲ್ಲುವ ಅಪಾಯವಿದೆ. ಈ ಆತಂಕದಿಂದ ಅಲ್ಲಿಂದ ತಪ್ಪಿಸಿಕೊಂಡರೆ ನಂತರ 10 ವರ್ಷಗಳವರೆಗೆ ಶಿಕ್ಷೆ ಹಾಗೂ 10 ಲಕ್ಷ ರುಪಾಯಿಗಳವರೆಗೆ ದಂಡ ವಿಧಿಸುವ ಅವಕಾಶವನ್ನು ನೀಡಿರುವುದು ನಮ್ಮ ಬದುಕನ್ನೇ ಕಸಿಯುತ್ತದೆ ಎಂದು.

ಇದೊಂದು ಕರಾಳ ಕಾನೂನಾಗಿದ್ದು ಕೇಂದ್ರವು ಇದನ್ನು ಹಿಂಪಡೆಯಬೇಕು ಎಂಬುದು ಟ್ರಕ್ ಚಾಲಕರ ಒತ್ತಾಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!