ಗೋವುಗಳ ಹತ್ಯೆ ಮಾಡಿ ಕಳೇಬರವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿದ ದುಷ್ಟರು

ಹೊಸದಿಗಂತ ವರದಿ,ಸುಂಟಿಕೊಪ್ಪ:

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗರಗಂದೂರು ‘ಬಿ’ ಸಮೀಪದ ಹಾರಂಗಿ ಜಲಾಶಯದ ಹಿನ್ನೀರಿನ ಬಳಿ ಎರಡು ಗೋವುಗಳನ್ನು ಹತ್ಯೆ ಮಾಡಿ ಕಳೇಬರವನ್ನು ಮಣ್ಣಿನಡಿ ಹೂತು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಹಾರಂಗಿ ಹಿನ್ನೀರು ಪ್ರದೇಶದ ಬಟಕಲನಹಳ್ಳಿಯ ಬಳಿಯ ಕರೀಂ ಎಂಬವರ ಮಗ ಲತೀಫ್ ಎಂಬಾತನ ಕಾಪಿ ತೋಟದಲ್ಲಿ ಎರಡು ದಿನಗಳ ಹಿಂದೆ ಗೋವುಗಳ ಹತ್ಯೆ ನಡೆಸಿ ಕಳೇಬರವನ್ನು ಮಣ್ಣಿನಡಿಯಲ್ಲಿ ಹೂತು ಹಾಕಿರುವುದಾಗಿ ಹೇಳಲಾಗಿದೆ.

ಭಾನುವಾರ ಬೆಳಗ್ಗೆ ಖಚಿತ ಮಾಹಿತಿ ಮೇರೆ ಹಿಂದೂ ಜಾಗರಣ ವೇದಿಕೆಯ ಹೊಸತೋಟ ಮತ್ತು ಮಾದಾಪುರ ಭಾಗದ ಕಾರ್ಯಕರ್ತರು ಘಟನೆ ಸ್ಥಳದಲ್ಲಿ ಜಮಾಯಿಸಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ.

ಗೋವಿನ ಚರ್ಮ ಹಾಗೂ ಕಳೇಬರವನ್ನು ಮಣ್ಣಿನಡಿ ಹೂತು ಹಾಕಿರುವುದು ಗೋಚರಿಸಿದೆ.

ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಸ್ವಾಮಿ, ಸಿಬ್ಬಂದಿಗಳಾದ ಮುಖ್ಯಪೇದೆ ಸತೀಶ್, ಪೇದೆಗಳಾದ ಜಗದೀಶ್, ಶ್ರೀಕಾಂತ್, ಬಿರದಾರ ಹಾಗೂ ಜೈಶಂಕರ್ ತೆರಳಿ ಪರಿಶೀಲನೆ ನಡೆಸಿದರಲ್ಲದೆ, ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ಮಹಜರು ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಲ್ಲೆ

ಜಿಲ್ಲೆಯಲ್ಲಿ ಗೋವುಗಳ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಖಂಡಿಸಿದ ಹಿಂದೂ ಜಾಗರಣ ವೇದಿಕೆಯ ಪ್ರಮುಖರು, ಪೋಲೀಸ್ ಇಲಾಖೆ ಅವುಗಳನ್ನು ಮಟ್ಟ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆಯೆಂದು ಆರೋಪಿಸಿದರು.

ವೇದಿಕೆಯ ಜಿಲ್ಲಾ ಸಮಿತಿಯ ಪ್ರಮುಖರಾದ ಸುನಿಲ್, ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ್ ಕುಕ್ಕೇರ ಅಜಿತ್ ಜಿಲ್ಲಾ ಪ್ರಮುಖರಾದ ಸುಭಾಸ್ ತಿಮ್ಮಯ್ಯ, ರಂಜನ್ ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯ ಸ್ಥಳಕ್ಕೆ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಮಿತಿಯ ಸುನಿಲ್ ಮಾದಾಪುರ, ಜಿಲ್ಲಾ ಸಂಚಾಲಕ ಅಜಿತ್ ಕುಕ್ಕೇರ ,ವಿನು ಕುಮಾರ್ , ಚಿದು, ಸುನಿಲ್, ರಾಜೇಶ್ ಸೇರಿದಂತೆ ಹೊಸತೋಟದ ಕಾರ್ಯಕರ್ತರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಪ್ರಕರಣದ ಸಮಗ್ರ ತನಿಖೆ ನಡೆಸಿ ಗೋಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ತಪ್ಪಿದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!