ರೈಲಿನಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್‌ಗಳ ಕಳವು: ಆರೋಪಿ ಬಂಧನ

ಹೊಸದಿಗಂತ ವರದಿ, ಬೆಂಗಳೂರು:

ರೈಲುಗಳಲ್ಲಿ ಪ್ರಯಾಣಿಕರ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ನಗರದ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಮೂಲದ ಭೀಮಪ್ಪ (19) ಬಂಧಿತ. ಫೆ.1ರಂದು ಸ್ಮಿತ ಮಹಾದೇವ ಪಾಟೀಲ್‌ ಎಂಬುವರು ಘಟಪ್ರಭಾದಿಂದ ಬೆಂಗಳೂರಿಗೆ ಬರುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸಂಜೆ 7.30ರ ಸುಮಾರಿಗೆ ತಮ್ಮ ಲ್ಯಾಪ್‌ಟಾಪ್ ಬ್ಯಾಗನ್ನು ಪಕ್ಕದಲ್ಲಿಟ್ಟುಕೊಂಡು ಮಲಗಿದ್ದಾಗ ಅವರ ಲ್ಯಾಪ್‌ಟಾಪ್ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡಿರುವ ಕುರಿತು ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಪತ್ತೆ ಬಗ್ಗೆ ರೈಲ್ವೆ ಪೊಲೀಸ್ ಅಧೀಕ್ಷಕರ ಮಾರ್ಗ ದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಿ ತನಿಖೆ ಮುಂದುವರೆಸಿ, ರೈಲುಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಗ್ಗೆ ಕಾರ್ಯಾಚರಣೆ ಕೈಗೊಂಡಿದ್ದರು. ಫೆ. 6ರಂದು ಬೆಳಗಿನ ಜಾವ ಬೀರೂರು ರೈಲ್ವೆ ನಿಲ್ದಾಣದ ವೇಟಿಂಗ್ ಹಾಲ್‌ನಲ್ಲಿ ಕುಳಿತಿದ್ದ ಆರೋಪಿಯನ್ನು ಗಮನಿಸಿದ್ದರೈಲ್ವೆ ಪೊಲೀಸರು, ಅನುಮಾನಗೊಂಡು ವಶಕ್ಕೆ ಪಡೆದಿದ್ದರು. ಬಳಿಕ ಅವನ ಬಳಿಯಿದ್ದ ಒಂದು ಲ್ಯಾಪ್ಟಾಪ್ ಬಗ್ಗೆ ವಿಚಾರಣೆ ಮಾಡಿದಾಗ ಪ್ರಯಾಣಿಕರಿಂದ ಲ್ಯಾಪ್‌ಟಾಪ್‌ಗಳನ್ನು ಕಳ್ಳತನ ಮಾಡಿರುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯ ಬಂಧನದಿಂದ ಡೆಲ್ ಕಂಪನಿಯ 4, ಎಚ್‌ಪಿ ಕಂಪನಿಯ 3, ಲೆನೊವೋ ಕಂಪನಿಯ 2 ಲ್ಯಾಪ್‌ಟಾಪ್‌ಗಳು ಸೇರಿದಂತೆ ಹಲವು ಕಂಪನಿಯ: ಒಟ್ಟು 10 ಲ್ಯಾಪ್ಟಾಪ್‌ಗಳು ಸೇರಿದಂತೆ 6.56 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!