ಚೆನ್ನಿಪೊನ್ನಿ, ಚಂಪಾಕಲಿ, ಕುಂಜಕುಂಜ… ಈ ಅಬೂಬಕ್ಕರ್‌ರಲ್ಲಿದೆ 500 ತಳಿಯ ಭತ್ತದ ಬೀಜ!

-ಬಾಳೇಪುಣಿ

ಚೆನ್ನಿಪೊನ್ನಿ, ಕರಿಕಗ್ಗ, ಚಂಪಾಕಲಿ, ಜಾಬ ಕುಸುಮ, ಗಿಡ್ಡು ಹಳ್ಳಿಗ, ಚಿಂಗಾರಿ, ಕೈ ಸೆರೆ, ಕೆಂಪು ದೊಡ್ಡಿಗ, ಗೋಶಿಕ, ಕರಿಪೂರ್ಣ, ದುಗಿ, ಕಜೆ ಮಲ್ಲಿಗೆ, ರಂಗಾರಿ, ಕಾಗಿಸಾಲೆ, ಗುಜಗುಂಡ, ಗೌರಿ ಸಣ್ಣ, ಮಂಜುಪನಿ, ಮಾಪಿಳ್ಳೆ ಸಾಂಬ, ಸುಮತಿ, ಸಿದ್ದ ಸಣ್ಣ, ಮೈಸೂರು ಬೆಣ್ಣೆ, ಬಂಗಾರ ಕಡ್ಡಿ, ಭೀಮ ಸಾಲೆ, ಬಂಗಾರ ಸಣ್ಣ, ಬಂಗಾರ ಕೋಟಿ, ಮೊಗದ ಸುಗಂಧ, ಮಹಾಮಾಯ, ಜೇನುಗೂಡು, ದಪ್ಪ ಮಲ್ಲಿಗೆ, ಪದ್ಮರೇಖಾ, ಮುತ್ತಿನ ಸಣ್ಣ, ಸಣ್ಣ ಮಲ್ಲಿಗೆ, ಕುಷಿ ಆಶಾದಿನ್, ರಾಜಮಣಿ, ಐಶ್ವರ್ಯ, ಇಂದ್ರಾಣಿ, ಕುಂಜಕುಂಜ, ಲಾಲ್ ರೆಡ್, ಒರು ಕಯಮೆ, ಮೈಸೂರು ಮಲ್ಲಿಗೆ, ನಾಗ ಸಂಪಿಗೆ….

ಹೀಗೆ, ಹೇಳುತ್ತಾ ಹೋದರೆ ಹೆಸರುಗಳು 500 ದಾಟುತ್ತವೆ. ಇದ್ಯಾವುದರ ಹೆಸರುಗಳು? ಎಂದು ಗೊಂದಲಕ್ಕೊಳಗಾಗಬೇಡಿ… ಎಲ್ಲವೂ ನಮ್ಮ ನಡುವೆ ಇದ್ದು, ವಿನಾಶದ ದಾರಿಯಲ್ಲಿರುವ ಭತ್ತದ ತಳಿಗಳಿವು. ಒಂದು ಕಾಲದಲ್ಲಿ ನಮ್ಮ ಹಿರಿಯರು ಈ ತಳಿಗಳನ್ನು ಬೆಳೆದು ಕುಟುಂಬ ಮತ್ತು ಸಮಾಜಕ್ಕೆ ಅಕ್ಕಿಯನ್ನು ಒದಗಿಸುತ್ತಿದ್ದರು. ಈಗ ರೈತರು ಭತ್ತ ಬೆಳೆಯುವುದೇ ವಿರಳ. ಬೆಳೆದರೂ ಇಲಾಖೆ ಒದಗಿಸುವ ಅಧಿಕ ಇಳುವರಿಯ ತಳಿಗಳಿಗೆ ಸೀಮಿತ ಆಗುತ್ತಾರೆ.

ಹೀಗೊಬ್ಬ ಆಪ್ತರಕ್ಷಕ!

ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಲು ಕಾರ್ಕಳ ಸಾಣೂರಿನ ಹೊಟೇಲು ಉದ್ಯೋಗಿ ಅಬೂಬಕ್ಕರ್ ಕಳೆದ ಏಳೆಂಟು ವರ್ಷ ಗಳಿಂದ ಪ್ರಯತ್ನದಲ್ಲಿ ಇದ್ದಾರೆ. ಅಬೂಬಕ್ಕರ್ 500 ಕ್ಕೂ ಅಧಿಕ ತಳಿಗಳ ಬೀಜಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ತಳಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಸುತ್ತಾರೆ. ಗೃಹ ಬಳಕೆಗೆ ಉಳಿಸಿಕೊಂಡು ಮಿಕ್ಕುಳಿದ ಅಕ್ಕಿಯನ್ನು ಸ್ನೇಹಿತರ ವಲಯದಲ್ಲಿ ಮಾರಾಟ ಮಾಡುತ್ತಾರೆ.

ಅಬೂಬಕ್ಕರ್ ಅವರಿಗೆ ಸಾಣೂರಿನಲ್ಲಿ ಮನೆ ಅಡಿ 21 ಸೆಂಟ್ಸು ಬಿಟ್ಟರೆ ಬೇರೆ ಜಮೀನು ಇಲ್ಲ. ಭತ್ತದ ಕೃಷಿಗಾಗಿ ಅವರು ಕೆಲವು ಕಡೆ ಲೀಸ್ ಮತ್ತು ಸ್ನೇಹದ ಆಧಾರದಲ್ಲಿ ಜಮೀನು ಹೊಂದಿಸಿ ಕೊಂಡಿದ್ದಾರೆ. ಬಾರಾಡಿಯಲ್ಲಿ ವೆಂಕಟೇಶ ಮಯ್ಯ ಎಂಬವರ ಐದು ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಮಿಯಾರ್‌ನಲ್ಲಿ 88 ಸೆಂಟ್ಸ್, ಬೋರ್ಕಟ್ಟೆಯಲ್ಲಿ 40 ಸೆಂಟ್ಸ್, ರೆಂಜಾಳದಲ್ಲಿ ಒಂದು ಎಕರೆ ಮತ್ತು ಕರೈಕಲ್ಲಿನಲ್ಲಿ ಐದು ಎಕರೆ ಜಮೀನು ಗುರುತಿಸಿ ಸಾವಯವ ಮಾದರಿಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಕರೈಕಲ್ಲಿನಲ್ಲಿ ಈ ವರ್ಷ ಎರಡು ಎಕರೆಯಲ್ಲಿ ಶುಂಠಿ ಮತ್ತು ಅರಶಿನ ಹಾಕಿದ್ದಾರೆ.

ಮೂರು ಬಗೆಯ ಕಪ್ಪು ಭತ್ತ, ಗಂಧಸಾಲೆ, ಕಲಾಬಾತಿ, ಕಲಾಬಾತ್ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಮನೆ ಬಳಕೆಗೆ ನಾಗ ಸಂಪಿಗೆ ತಳಿ ಯನ್ನು ಬೆಳೆಸುತ್ತಾರೆ. ‘ನಾಗ ಸಂಪಿಗೆ ಕುಚ್ಚಿಗೆಗೆ ಹೇಳಿ ಮಾಡಿಸಿದಂತಿದೆ. ಸ್ನೇಹಿತರೊಬ್ಬರು ಬೀಜ ಕೊಟ್ಟಿದ್ದಾರೆ. ಅದು ಮೂರು ಬೆಳೆಗೂ ಹೊಂದಿಕೊಳ್ಳುವ ತಳಿ. ಒಳ್ಳೆಯ ರುಚಿ ಇದೆ. ಮೊದಲ ಬೆಳೆ 140 ದಿನಗಳಲ್ಲಿ ಮತ್ತು ಎರಡನೇ ಬೆಳೆ 130 ದಿನಗಳಲ್ಲಿ ಕಟಾವಿಗೆ ಬರುತ್ತದೆ’ ಎಂದು ಅಬೂಬಕ್ಕರ್ ಹೇಳುತ್ತಾರೆ.

ಸಾವಯವ ಕೃಷಿಗೆ ಆದ್ಯತೆ

‘ನನ್ನದು ಏನಿದ್ದರೂ ಸಾವಯವ ಕೃಷಿ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಬಳಕೆ ಇಲ್ಲ. ಲಭ್ಯ ನೀರಿನ ಬಳಕೆ. ಹೆಚ್ಚೇನು ಖರ್ಚು ಬರುವುದಿಲ್ಲ. ಕೆಲಸದ ನಡುವೆ ಅಪರೂಪಕ್ಕೊಮ್ಮೆ ನೋಡಿ ಬಂದರಾಯಿತು. ಬೀಜಕ್ಕಾಗಿ ಆಹಾರ ಪಾರ್ಸೆಲ್ ಮಾಡುವ ಕಂಟೈನರ್‌ಗಳಲ್ಲಿ ಭತ್ತ ಬೆಳೆಸುತ್ತೇನೆ. ತಳಿ ಸಂರಕ್ಷಣೆ ಮಾಡಲು ಒಂದು ಬೀಜ ಸಿಕ್ಕಿದರೂ ಸಾಕು’ ಎನ್ನುತ್ತಾರೆ ಅಬೂಬಕ್ಕರ್.
ಅಬೂಬಕ್ಕರ್ ಮೂಡಬಿದ್ರೆಯವರು. 4 ವರ್ಷ ದೆಹಲಿಯಲ್ಲಿ ಹೊಟೇಲು ಉದ್ಯೋಗಿಯಾಗಿದ್ದರು. 26 ವರ್ಷಗಳಿಂದ ಕಾರ್ಕಳದಲ್ಲಿ ಅದೇ ವೃತ್ತಿಯಲ್ಲಿದ್ದಾರೆ. ಕಾರ್ಕಳ ಪೇಟೆಯಲ್ಲಿ ಫ್ಲಾಟ್‌ನಲ್ಲಿ ಇದ್ದವರು ಮಕ್ಕಳಿಗೆ ಆಟಕ್ಕೆ ಸ್ಥಳ ಬೇಕು ಎಂದು ಹಳ್ಳಿಯಲ್ಲಿ ಮನೆ ಮಾಡುವ ಮನಸ್ಸು ಮಾಡಿದರು. ಏಳು ವರ್ಷದ ಹಿಂದೆ ಸಾಣೂರಿನಲ್ಲಿ ಮನೆ ಕೊಂಡುಕೊಂಡರು. ಒಂದು ಸಲ ಅಬೂಬಕ್ಕರ್ ಅವರಿಗೆ ಸ್ನೇಹಿತರೊಬ್ಬರು ಮನೆಯಲ್ಲಿಯೇ ಬೆಳೆದ 50 ಕಿಲೋ ಅಕ್ಕಿ ಕೊಟ್ಟರು. ಅದನ್ನು ಬಳಸಿದ ನಂತರ ಅಂಗಡಿ ಅಕ್ಕಿ ರುಚಿಸಲಿಲ್ಲ. ಮುಂದೆ ತಾವೇ ಕುಚ್ಚಗೆ ಮತ್ತು ಬೆಳ್ತಿಗೆಗೆ ಬೇಕಾದ ತಳಿಗಳನ್ನು ಬೆಳೆಸಲು ಶುರು ಮಾಡಿದರು. ಮೊದಲ ವರ್ಷ ಜ್ಯೋತಿ ಬೆಳೆದರು. ಬಳಿಕ ನಾಗ ಸಂಪಿಗೆ, ಗಂಧಸಾಲೆ, ಬಾಸ್ಮತಿ ಹೀಗೆ. ನಾಗ ಸಂಪಿಗೆ ಬೀಜವನ್ನು ಹಲವರಿಗೆ ನೀಡಿದ್ದಾರೆ. ಭತ್ತದ ತಳಿ ಸಂರಕ್ಷಣೆಯ ಜೊತೆ ಜೊತೆಯಲ್ಲಿ ಕಾಡು ಮಾವು, ಹಲಸು ತಳಿಗಳನ್ನು ರಕ್ಷಿಸಲು ಅಬೂಬಕ್ಕರ್ ಮುಂದಾಗಿದ್ದಾರೆ. ಈ ವರ್ಷ ಒಂದು ಸಾವಿರ ಕಾಡು ಮಾವಿನ ಬೀಜಗಳನ್ನು ಸಂಗ್ರಹಿಸಿ ಗಿಡ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!