ಹೊಸದಿಗಂತ ಡಿಜಿಟಲ್ ಡೆಸ್ಕ್:
“ನನ್ನ ಪ್ರೀತಿಯ ಆರ್‌ಸಿಬಿಗೆ, ಆರ್‌ಸಿಬಿ ಜೊತೆಗಿನ 7 ವರ್ಷಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ದಿನಗಳು. ಆರ್‌ಸಿಬಿ ಶರ್ಟ್‌ನಲ್ಲಿ ನನ್ನ ಸಮಯವನ್ನು ಹಿಂತಿರುಗಿ ನೋಡಿದಾಗ ನನ್ನ ಹೃದಯವು ಕೃತಜ್ಞತೆ, ಪ್ರೀತಿ ಮತ್ತು ಭಾವುಕತೆಯಿಂದ ತುಂಬಿದೆ….”
ಸಿರಾಜ್ ಭಾವನಾತ್ಮಕ ಪತ್ರದ ಮೊದಲ ಸಾಲುಗಳಿವು. ಹೌದು, ಏಳು ವರ್ಷದಿಂದ ಆರ್‌ಸಿಬಿ ಜೊತೆಗಿದ್ದ ಮೊಹಮ್ಮದ್ ಸಿರಾಜ್ ಇದೀಗ ಗುಜರಾತ್ ಟೈಟಾನ್ಸ್ ತಂಡದ ಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಏಳು ವರ್ಷದ ಆರ್‌ಸಿಬಿ ಪಯಣವನ್ನು ನೆನೆದು ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ನಾನು ಮೊದಲು ಆರ್‌ಸಿಬಿ ಜರ್ಸಿಯನ್ನು ಧರಿಸಿದಾಗ, ಇಂತಹದೊಂದು ಬಂಧ ರೂಪುಗೊಳ್ಳಲಿದೆ ಎಂದು ಭಾವಿಸಿರಲಿಲ್ಲ. ಅಲ್ಲದೆ ನಾನು ಆರ್‌ಸಿಬಿ ಪರ ಕಣಕ್ಕಿಳಿದು ಎಸೆದ ಮೊದಲ ಎಸೆತ, ತೆಗೆದುಕೊಂಡ ಪ್ರತಿ ವಿಕೆಟ್, ಆಡಿದ ಪ್ರತಿ ಪಂದ್ಯ, ನಿಮ್ಮೊಂದಿಗೆ ಹಂಚಿಕೊಂಡ ಪ್ರತಿ ಕ್ಷಣ ಎಲ್ಲವೂ ಅತ್ಯದ್ಭುತ.
ಇದರ ನಡುವೆ ಕೆಲ ಏರಿಳಿತಗಳಿವೆ. ಆದರೆ ಎಲ್ಲದರಲ್ಲೂ ಒಂದು ವಿಷಯ ಸ್ಥಿರವಾಗಿತ್ತು. ಅದುವೇ ನಿಮ್ಮ ಅಚಲ ಬೆಂಬಲ. ಆರ್‌ಸಿಬಿ ನನ್ನ ಪಾಲಿಗೆ ಕೇವಲ ಫ್ರಾಂಚೈಸಿ ಆಗಿರಲಿಲ್ಲ, ಅದಕ್ಕಿಂತ ಹೆಚ್ಚು. ಅದೊಂದು ಭಾವನೆ, ಹೃದಯ ಬಡಿತ, ಮನೆಯಂತೆ ಭಾಸವಾಗುವ ಕುಟುಂಬ.
ಪಂದ್ಯಗಳಲ್ಲಿ ಸೋತಾಗ ಪದಗಳಲ್ಲಿ ವಿವರಿಸಲಾಗದಷ್ಟು ನೋವಿನಲ್ಲಿ ರಾತ್ರಿಗಳನ್ನು ಕಳೆದಿದ್ದೇನೆ. ಆದರೆ ಸ್ಟ್ಯಾಂಡ್‌ಗಳಲ್ಲಿ ನಿಮ್ಮ ಧ್ವನಿಗಳು, ಸಾಮಾಜಿಕ ಮಾಧ್ಯಮದಲ್ಲಿನ ನಿಮ್ಮ ಸಂದೇಶಗಳು, ನಿಮ್ಮ ನಿರಂತರ ನಂಬಿಕೆ ನನ್ನನ್ನು ಹೊಸ ಉತ್ಸಾಹದಿಂದ ಆಡುವಂತೆ ಮಾಡುತ್ತಿತ್ತು.
ಆರ್‌ಸಿಬಿ ಅಭಿಮಾನಿಗಳಾದ ನೀವು ಈ ತಂಡದ ಆತ್ಮ. ನೀವು ತರುವ ಶಕ್ತಿ, ನೀವು ನೀಡುವ ಪ್ರೀತಿ, ನೀವು ತೋರಿಸುವ ನಂಬಿಕೆ, ಇದಕ್ಕೆ ಸಾಟಿಯಿಲ್ಲ. ಪ್ರತಿ ಬಾರಿ ನಾನು ಮೈದಾನಕ್ಕೆ ಕಾಲಿಟ್ಟಾಗ, ನಿಮ್ಮ ಕನಸುಗಳು ಮತ್ತು ಭರವಸೆಗಳ ಭಾರವನ್ನು ನಾನು ಅನುಭವಿಸಿದ್ದೇನೆ. ಅಲ್ಲದೆ ನನ್ನಿಂದಾಗುವ ಎಲ್ಲವನ್ನೂ ನೀಡಿದ್ದೇನೆ. ಏಕೆಂದರೆ ನೀವು ನನ್ನ ಹಿಂದೆಯೇ ಇದ್ದೀರಿ ಎಂದು ನನಗೆ ತಿಳಿದಿತ್ತು. ನೀವು ನೀಡಿದ ಬೆಂಬಲ ಮತ್ತು ಪ್ರೀತಿಯಿಂದಲೇ ನಾನು ಮತ್ತಷ್ಟು ಉತ್ತಮ ಪ್ರದರ್ಶನ ನೀಡುವಂತೆ ತಳ್ಳುತ್ತಿತ್ತು.
ನಾವು ಸೋತಾಗ, ನೀವು ಕಣ್ಣೀರು ಹಾಕುವುದನ್ನು ನಾನು ನೋಡಿದ್ದೇನೆ. ನಿಜವಾಗಿಯೂ ಹೇಳುತ್ತಿದ್ದೇನೆ, ಆರ್‌ಸಿಬಿ ಅಭಿಮಾನಿಗಳೇ ನಿಮ್ಮಂತಹ ಫ್ಯಾನ್ಸ್ ಈ ಜಗತ್ತಿನಲ್ಲಿ ಯಾರೂ ಇಲ್ಲ. ನಿಮ್ಮ ಪ್ರೀತಿ, ನಿಮ್ಮ ಸಮರ್ಪಣೆ, ನಿಮ್ಮ ನಿಷ್ಠೆ-ಇದು ನನ್ನ ಜೀವನದುದ್ದಕ್ಕೂ ನಾನು ಪಾಲಿಸುತ್ತೇನೆ. ನಾನು ಈಗ ನನ್ನ ವೃತ್ತಿಜೀವನದ ಹೊಸ ಅಧ್ಯಾಯಕ್ಕೆ ಕಾಲಿಟ್ಟರೂ, ಆರ್‌ಸಿಬಿ ಯಾವಾಗಲೂ ನನ್ನ ಹೃದಯದ ಭಾಗದಲ್ಲಿರುತ್ತದೆ. ಇದು ವಿದಾಯ ಅಲ್ಲ – ಇದು ನನ್ನ ಧನ್ಯವಾದಗಳು. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ, ನನ್ನನ್ನು ಅಪ್ಪಿಕೊಂಡಿದ್ದಕ್ಕಾಗಿ ಮತ್ತು ಕ್ರಿಕೆಟ್‌ಗಿಂತಲೂ ದೊಡ್ಡದೊಂದು ಭಾಗವಾಗಿ ನನ್ನನ್ನು ಭಾವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ.