ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿ ಗೆದ್ದ ಇತಿಹಾಸವೇ ಇಲ್ಲ: ಶೆಟ್ಟರ್‌ಗೆ ಕಟೀಲ್‌ ಟಾಂಗ್!

ಹೊಸದಿಗಂತ ವರದಿ ಹುಬ್ಬಳ್ಳಿ:

ಬಿಜೆಪಿ ವಿರುದ್ಧ ಬಂಡಾಯ ಸ್ಪರ್ಧಿಸಿದವರು ಇಲ್ಲಿಯವರೆಗೆ ಯಾರು ಗೆದ್ದಿಲ್ಲ. ಮಾಜಿ ಸಿಎಂ ಜಗದೀಶ ಶೆಟ್ಟರ ಅವರ ಭವಿಷ್ಯ ಮೇ 13ರ ಬಳಿಕ ಗೊತ್ತಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಟಾಂಗ್‌ ಕೊಟ್ಟರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಅವರಿಗೆ ಹಲವು ಸ್ಥಾನಮಾನ ನೀಡಿದರೂ ಸಹ ಬಿಟ್ಟಿದ್ದಾರೆ. ಕೇಂದ್ರ ವರಿಷ್ಠರು ಉನ್ನತ ಸ್ಥಾನ ನೀಡುವ ಭರವಸೆ ನೀಡಿದರೂ ತಿರಸ್ಕರಿಸಿ ಹೊರ ಹೋಗಿದ್ದಾರೆ.

ಕೇಂದ್ರ ಸಂಸದೀಯ ಮಂಡಳಿ ಅವರಿಗೆ ಟಿಕೆಟ್ ನಿರಾಕರಿಸಿದೆ. ಅವರು ಹಿಂದೆ ಕಾರ್ಯಕಾರಣಿ ಸಮಿತಿಯಲ್ಲಿದ್ದರೂ ಎಲ್ಲರಿಗೂ ಟಿಕೆಟ್ ನೀಡಿದ್ದಾರೆಯೇ. ಹಾಗಾದರೆ ಕುಂದಗೋಳದ ಚಿಕ್ಕನಗೌಡರಿಗೆ ಯಾಕೆ ತಪ್ಪಿಸಿದರು ಎಂದು ಪ್ರಶ್ನಿಸಿದರು. ಇದೀಗ ಶೆಟ್ಟರ್ ಪಕ್ಷ ಬಿಟ್ಟು ಹೊರ ಹೋಗಿದ್ದಾರೆ ಬಿ.ಎಲ್. ಸಂತೋಷ್ ಸೇರಿದಂತೆ ಪ್ರಮುಖ ಸ್ಥಾನದಲ್ಲಿದ್ದವರ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ.

ರಾಜ್ಯದ 224 ಕ್ಷೇತ್ರಗಳು ಬಿಜೆಪಿಗೆ ಸವಾಲು. ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಹಲವು ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆ ವಿನಃ ಬಿಜೆಪಿ ದುರ್ಬಲವಿದೆ ಎಂದರ್ಥವಲ್ಲ. ಹುಬ್ಬಳ್ಳಿ ಈ ಭಾಗದ ಪ್ರಮುಖ ಕೇಂದ್ರ ಸ್ಥಾನವಾಗಿದೆ. ಹೀಗಾಗಿ ಹಲವು ನಾಯಕರು ಈ ಭಾಗಕ್ಕೆ ಬರುತ್ತಿದ್ದಾರೆ ವಿನಃ ಹು-ಧಾ ಕೇಂದ್ರ ಕ್ಷೇತ್ರದ ಬಗ್ಗೆ ಅಷ್ಟೊಂದು ಒತ್ತು ನೀಡಿಲ್ಲ. ಈ ಕ್ಷೇತ್ರಕ್ಕೆ ನೀಡಿದಷ್ಟು ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ನೀಡಿದ್ದೇವೆ. ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂದು ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದೆ. ಆ ಪಕ್ಷ ಒಂದು ಜಿಲ್ಲೆಗೆ ಸೀಮಿತವಾಗಲಿದೆ. ಕಾಂಗ್ರೆಸ್ 80 ಸೀಟುಗಳಲ್ಲಿ ಮಾತ್ರ ಗೆಲುವು ಸಾಸಲಿದೆ ಅಷ್ಟೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!