July 24, 2026
Friday, July 24, 2026
spot_img

ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ಮಮತಾ ಬ್ಯಾನರ್ಜಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಿಕ್ಕ ಬೆನ್ನಲ್ಲೇ ಸೋಲಿನ ರುಚಿ ಸವಿದು ಕಂಗೆಟ್ಟಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜಕೀಯ ಸಂಚಲನ ಮೂಡಿಸುವ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.

ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ, ಯಾರೂ ಕೂಡ ನನ್ನನ್ನು ಅಧಿಕಾರದಿಂದ ಕೆಳಗಿಳಿಸಲು ಆಗಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀದಿ, ಈ ಸೋಲು ವ್ಯವಸ್ಥಿತವಾಗಿ ಮಾಡಲಾದ ಸಂಚು. ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲು ರಾಜಭವನಕ್ಕೆ ತೆರಳುವುದಿಲ್ಲ. ನನ್ನ ರಾಜೀನಾಮೆ ಕೇಳುವ ಹಕ್ಕು ಯಾರಿಗೂ ಇಲ್ಲ ಎಂದು ಗುಡುಗಿದರು.

ಇಂದು ಇಲ್ಲಿ ನ್ಯಾಯಯುತವಾಗಿ ಚುನಾವಣೆ ನಡೆದಿದ್ದರೆ, ನಾನು ರಾಜೀನಾಮೆ ನೀಡಲು ತೆರಳುತ್ತಿದ್ದೆ. ಆದರೆ ಇಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ. ಇಲ್ಲಿ ಬಿಜೆಪಿ 100ಕ್ಕೂ ಹೆಚ್ಚು ಸ್ಥಾನಗಳನ್ನು ವಶಪಡೆದುಗೊಂಡಿದೆ. ನನ್ನ ಕ್ಷೇತ್ರದಲ್ಲೂ ನಾನು ಸೋತಿಲ್ಲ. ಅಲ್ಲಿ ಮೋಸ ನಡೆದಿದ್ದು, ಮರು ಮತ ಎಣಿಕೆ ನಡೆಯಬೇಕು. ಅಲ್ಲಿಯವರೆಗೂ ರಾಜೀನಾಮೆ ನೀಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜನರ ಹಕ್ಕುಗಳನ್ನು ಲೂಟಿ ಮಾಡಲು ಚುನಾವಣಾ ಆಯೋಗ ಸಂಚು ರೂಪಿಸಿದೆ. ವೋಟಿಂಗ್ ನಡೆದರೂ ಇವಿಎಂ ಯಂತ್ರಗಳಲ್ಲಿ ಶೇ. 80 ರಿಂದ 95ರಷ್ಟು ಬ್ಯಾಟರಿ ಚಾರ್ಜ್ ತೋರಿಸುತ್ತಿತ್ತು. ಇದೆಲ್ಲವೂ ಬಿಜೆಪಿ, ಚುನಾವಣಾ ಆಯೋಗದ ಸಂಚು. ಚುನಾವಣಾ ಅಕ್ರಮದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !