ಸಿದ್ದರಾಮಯ್ಯ ಸ್ಪರ್ಧೆಗೆ ರಾಜ್ಯದಲ್ಲಿ ಯೋಗ್ಯ ಕೇತ್ರವೇ ಇಲ್ಲ: ಈಶ್ವರಪ್ಪ ಲೇವಡಿ

ಹೊಸದಿಗಂತ ವರದಿ, ಮಡಿಕೇರಿ:

ಬಿಜೆಪಿಯನ್ನು ನಿರಂತರವಾಗಿ ಟೀಕಿಸುತ್ತಾ ಬರುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಗ್ಯ ಕ್ಷೇತ್ರವೇ ಇಲ್ಲವೆಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ನಗರದ ಕ್ರಿಸ್ಟಲ್ ಹಾಲ್ ಸಭಾಂಗಣದಲ್ಲಿ ಆಯೋಜಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಹಂತದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವ ಕುಮಾರ್ ಅವರವರ ಜಾತಿ ಸಮೂಹದಿಂದ ಮುಖ್ಯಮಂತ್ರಿಯ ಬೇಡಿಕೆಯನ್ನು ಮುಂದಿರಿಸಿಕೊಂಡು ಬರುತ್ತಿದ್ದಾರೆ. ಬಿಜೆಪಿಯನ್ನು ಪುರೋಹಿತ ಶಾಹಿ, ಮನುವಾದಿ ಎಂದು ದೂರುವ ಇವರುಗಳೇ ಜಾತಿವಾದಿಗಳೆಂದು ಹೀಗಳೆದರು.
ಬಿಜೆಪಿಯನ್ನು ಹೀಗಳೆಯುತ್ತಲೇ ಜಾತಿ ರಾಜಕಾರಣ ಮಾಡುವ ಸಿದ್ದರಾಮಯ್ಯ ಅವರಂತಹ ‘ದುಷ್ಟ’ ರಾಜಕಾರಣಿಯನ್ನು ಈ ರಾಜ್ಯದ ಇತಿಹಾಸದಲ್ಲಿ ನೋಡಿಲ್ಲವೆಂದು ತೀಕ್ಷ್ಣವಾಗಿ ನುಡಿದ ಈಶ್ವರಪ್ಪ, ಮುಂಚೆ ಹಣೆಗೆ ಕುಂಕುಮ ಹಾಕಿಕೊಳ್ಳದಿದ್ದ ಸಿದ್ದರಾಮಯ್ಯ ಅವರ ಹಣೆಯ ಮೇಲೆ ಚುನಾವಣಾ ಹೊಸ್ತಿಲಲ್ಲಿ ಕುಂಕುಮ ಕಾಣಿಸಿಕೊಳ್ಳುತ್ತಿದೆಯೆಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿಯ ಗೋ ಸಂರಕ್ಷಣೆ, ಮತಾಂತರ ನಿಷೇಧಗಳ ವಿರುದ್ಧ ಮಾತನಾಡುವ ಕಾಂಗ್ರೆಸ್ ಮುಖಂಡರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ, ಮತಾಂತರ ಪರವಾಗಿ, ಗೋ ಹತ್ಯೆಯ ಪರವಾಗಿ ನಾವಿದ್ದೇವೆಂದು ತೋರಿಸಲಿ ಎಂದು ಸವಾಲೊಡ್ಡಿದರು.
ನಾಟಕೀಯ ಬುಡುಬುಡಿಕೆ: ಸಿದ್ದರಾಮಯ್ಯ ಅವರದ್ದು ಬಿಜೆಪಿ ವಿರುದ್ಧದ ಟೀಕೆಗಳು ‘ನಾಟಕೀಯ ಬುಡುಬುಡಿಕೆ’ಯೆಂದು ಕಟುವಾಗಿ ನುಡಿದ ಈಶ್ವರಪ್ಪ, ಹಿಂದುಳಿದ, ಅಲ್ಪಸಂಖ್ಯಾತರ ಪರವಾಗಿ ಕಾಂಗ್ರೆಸ್ ಇರುವುದಾಗಿ ಹೇಳುವ ಅವರು, ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ , ಹಿಂದುಳಿದ ವರ್ಗದಿಂದ ಬಂದ ತನಗೆ ಮುಖ್ಯಮಂತ್ರಿ ಸ್ಥಾನ ದೊರಕಿದೆಯೆಂದು ಹೇಳಿಕೊಂಡರೇ ಹೊರತು ಆ ಸಮೂಹಕ್ಕೆ ಏನನ್ನೂ ಮಾಡಿಲ್ಲವೆಂದು ಗೇಲಿ ಮಾಡಿದರು.ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ, ದಲಿತ ಸೇರಿದಂತೆ ಎಲ್ಲಾ ಸಮೂಹದ ಹಿತ ಕಾಯುವ ಕೆಲಸ ನಡೆದಿದೆಯೆಂದು ದೃಢವಾಗಿ ನುಡಿದರು.
150 ಕ್ಕೂ ಹೆಚ್ಚಿನ ಸ್ಥಾನದ ವಿಶ್ವಾಸ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 150 ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ, ಈ ಬಾರಿಯ ಚುನಾವಣೆಯನ್ನು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆ, ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮುಂದಿಟ್ಟು ಎದುರಿಸುವುದಾಗಿ ಸ್ಪಷ್ಟಪಡಿಸಿದರು.
ಈ ಬಾರಿ ಪ್ರಮುಖವಾಗಿ ನಾಲ್ಕು ಅಂಶಗಳನ್ನು ಮುಂದಿಟ್ಟುಕೊಂಡು ಜನರ ಮಧ್ಯೆ ಬಿಜೆಪಿ ತೆರಳಲಿದೆ. ಮೋದಿ, ಅಮಿತ್ ಶಾ ಅವರ ನೇತೃತ್ವ, ಕಾರ್ಯಕರ್ತರ ಸಂಘಟನಾ ಶಕ್ತಿ, ಅಭಿವೃದ್ಧಿ ಮತ್ತು ಭಾರತೀಯ ಸಂಸ್ಕೃತಿಯ ಸಂರಕ್ಷಣೆಯ ರಾಷ್ಟ್ರೀಯ ಚಿಂತನೆಗಳು ಪಕ್ಷದ ಚುನಾವಣೆಯ ಪ್ರಧಾನ ವಿಚಾರಗಳೆಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ, ಈಗಿನ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭ್ಯುದಯಕ್ಕೆ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಸದಾನಂದ ಗೌಡರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಶಾಲೆ, ವಸತಿ ನಿಲಯಗಳಿಗಾಗಿಯೇ 108 ಕೋಟಿ ಅನುದಾನವನ್ನು ಒದಗಿಸಿದ್ದನ್ನು ತಿಳಿಸಿದ ಈಶ್ವರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಅವರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 117 ಕೊಟಿ ನೆರವನ್ನು ಒದಗಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ 27 ಮಂದಿ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಮತ್ತು 10 ಮಂದಿ ದಲಿತರಿಗೆ ಸಚಿವ ಸ್ಥಾನವನ್ನು ಒದಗಿಸಲಾಗಿದೆ. ಸ್ವಾತಂತ್ರ್ಯಾ ನಂತರದ ಅವಧಿಯಲ್ಲಿ ಇಷ್ಟು ಸಂಖ್ಯೆಯಲ್ಲಿ ಹಿಂದುಳಿದ ಸಮೂಹಕ್ಕೆ ಅವಕಾಶವನ್ನು ಎಂದಿಗೂ ನೀಡಿದ ನಿದರ್ಶನವಿಲ್ಲವೆಂದು ಹೆಮ್ಮೆಯಿಂದ ನುಡಿದರು.
ಅಭಿವೃದ್ಧಿ ಪರಿಗಣಿಸಿ ಮತ ನೀಡಿ: ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಾತನಾಡಿ, ಅಧಿಕಾರ ದೊರೆತಾಗ ಅದನ್ನು ಹೇಗೆ ಸದ್ವಿನಿಯೋಗ ಪಡಿಸಬೇಕೆನ್ನುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಳೆದ ಎಂಟು ವರ್ಷಗಳ ಅವಧಿಯಲ್ಲಿ ತೋರಿಸಿಕೊಟ್ಟಿದ್ದಾರೆ. ಚುನಾವಣೆ ಎನ್ನುವುದು ಕೇವಲ ಆಶ್ವಾಸನೆ, ಭರವಸೆಗಳ ಮೇಲೆ ನಡೆಯಕೂಡದೆನ್ನುವುದು ಪಕ್ಷದ ನಿಲುವಾಗಿದ್ದು, ಬಿಜೆಪಿ ಅಧಿಕಾರದ ಅವಧಿಯಲ್ಲಿನ ಸುಶಾಸನ ಮತ್ತು ಅಭಿವೃದ್ಧಿಯನ್ನು ಪರಿಗಣಿಸಿ ಜನತೆ ಮತದಾನ ಮಾಡಿದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥ ಬರುತ್ತದೆಂದು ಸ್ಪಷ್ಟಪಡಿಸಿದರು.
ನಾಲ್ಕು ರಥಯಾತ್ರೆಗಳ ಮೂಲಕ ರಾಜ್ಯದ 224 ಕ್ಷೇತ್ರಗಳ ಜನತೆಯನ್ನು ಬಿಜೆಪಿ ಸಂಪರ್ಕಿಸುತ್ತಿದೆ. ಈ ಸಂದರ್ಭ ದೊರಕುತ್ತಿರುವ ಜನಬೆಂಬಲ ಅಭೂತಪೂರ್ವ, ಚುನಾವಣೆಯಲ್ಲಿ ಬಿಜೆಪಿಯನ್ನು ಜನತೆ ಆಶೀರ್ವದಿಸುವ ಪೂರ್ಣ ವಿಶ್ವಾಸವಿದೆಯೆಂದು ಹೇಳಿದರು.
ಕೊಡಗಿನಲ್ಲಿ ಎದುರಾಳಿಗಳೇ ಇಲ್ಲ: ಕೊಡಗಿನಲ್ಲಿ ವಿಜಯ ಸಂಕಲ್ಪ ಯಾತ್ರೆಗೆ ಜನತೆ ನೀಡುತ್ತಿರುವ ಭಾರೀ ಬೆಂಬಲವನ್ನು ಗಮನಿಸಿದಾಗ, ಇಲ್ಲಿ ಎದುರಾಳಿಗಳೇ ಇಲ್ಲವೆಂದು ಭಾಸವಾಗುತ್ತಿದೆ. ಅಧಿಕಾರದ ಅವಧಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದಲ್ಲಿ ಜನ ನಮ್ಮೊಂದಿಗೆ ನಿಲ್ಲುತ್ತಾರೆ ಎನ್ನುವುದು ಕಂಡು ಬಂದಿದೆಯೆಂದು ಹೇಳಿದರು.
ಗೋಷ್ಠಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಎಂಎಲ್‍ಸಿ ಸುಜಾ ಕುಶಾಲಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವೀರಾಜಪೇಟೆ ಕ್ಷೇತ್ರದ ಉಸ್ತುವಾರಿ ಪ್ರತಾಪ ಸಿಂಹ ನಾಯಕ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಎಂಎಲ್‍ಸಿ ಎಸ್.ಜಿ. ಮೇದಪ್ಪ, ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ರಾಜ್ಯ ಸಂಚಾಲಕ ಉದಯ ಕುಮಾರ್ ಶೆಟ್ಟಿ, ಪಕ್ಷದ ಪ್ರಮುಖರಾದ ರಾಜೇಂದ್ರ, ಮಹೇಶ್ ಜೈನಿ ಮೊದಲಾದವರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!