August 5, 2026
Wednesday, August 5, 2026
spot_img

2027ರ ವಿಶ್ವಕಪ್ ಗೆಲ್ಲಲು ಈ 15 ಆಟಗಾರರೇ ಸಾಕು! ಗವಾಸ್ಕರ್ ಆಯ್ಕೆ ಮಾಡಿದ ಟೀಮ್ ಇಂಡಿಯಾ ಹೀಗಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

2027ರ ಐಸಿಸಿ ಏಕದಿನ ವಿಶ್ವಕಪ್‌ಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿರುವ ಟೀಮ್ ಇಂಡಿಯಾ, ಯುವ ಹಾಗೂ ಅನುಭವಿ ಆಟಗಾರರ ಸಮತೋಲನದತ್ತ ಗಮನ ಹರಿಸುತ್ತಿದೆ.

ಈ ನಡುವೆ ಭಾರತದ ಮಾಜಿ ನಾಯಕ ಹಾಗೂ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್, 2027ರ ವಿಶ್ವಕಪ್‌ಗೆ ಸೂಕ್ತವೆನಿಸಿದ ತಮ್ಮ ನೆಚ್ಚಿನ 15 ಸದಸ್ಯರ ಭಾರತೀಯ ತಂಡವನ್ನು ಆಯ್ಕೆ ಮಾಡಿದ್ದು, ಕೆಲವು ಅಚ್ಚರಿಯ ನಿರ್ಧಾರಗಳು ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿವೆ.

ಗಿಲ್‌ಗೆ ನಾಯಕತ್ವದ ಜವಾಬ್ದಾರಿ

ಗವಾಸ್ಕರ್ ಆಯ್ಕೆ ಮಾಡಿದ ತಂಡದಲ್ಲಿ ಶುಭಮನ್ ಗಿಲ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಅವರೊಂದಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೆ.ಎಲ್. ರಾಹುಲ್ ಪ್ರಮುಖ ಬ್ಯಾಟರ್‌ಗಳಾಗಿ ಸ್ಥಾನ ಪಡೆದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ಬಲವನ್ನು ಹೆಚ್ಚಿಸುವ ನಿರೀಕ್ಷೆಯಿದೆ.

ಯುವ ಬೌಲರ್‌ಗಳಿಗೆ ಅವಕಾಶ

ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ಅನುಭವಿ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಇದೇ ವೇಳೆ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾಗೆ ಅವಕಾಶ ನೀಡಿರುವುದು ಗಮನಾರ್ಹವಾಗಿದೆ. ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಯುವ ವೇಗಿಗಳ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವಂತೆ ಈ ಆಯ್ಕೆ ಕಾಣಿಸುತ್ತದೆ.

ಶಮಿ, ಪಂತ್‌ಗೆ ಸ್ಥಾನವಿಲ್ಲ

ಗವಾಸ್ಕರ್ ತಂಡದಲ್ಲಿ ಅನುಭವಿ ವೇಗಿ ಮೊಹಮ್ಮದ್ ಶಮಿ ಹಾಗೂ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ ಸ್ಥಾನ ನೀಡಿಲ್ಲ. ಇದೇ ರೀತಿ ಯಶಸ್ವಿ ಜೈಸ್ವಾಲ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಹಾರ್ದಿಕ್ ಪಾಂಡ್ಯಗೆ ಗಾಯದ ಸಮಸ್ಯೆ ಎದುರಾದರೆ ಪರ್ಯಾಯವಾಗಿ ನಿತೀಶ್ ಕುಮಾರ್ ರೆಡ್ಡಿ ಉಪಯೋಗವಾಗಬಹುದು ಎಂಬ ಲೆಕ್ಕಾಚಾರದಿಂದ ಅವರನ್ನು ತಂಡದಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ:

ಬ್ಯಾಕಪ್ ವಿಕೆಟ್‌ಕೀಪರ್ ಆಗಿ ಇಶಾನ್ ಕಿಶನ್

ಇಶಾನ್ ಕಿಶನ್ ಅವರನ್ನು ಬ್ಯಾಕಪ್ ವಿಕೆಟ್‌ಕೀಪರ್ ಹಾಗೂ ಆರಂಭಿಕ ಬ್ಯಾಟರ್ ಆಗಿ ಗವಾಸ್ಕರ್ ಆಯ್ಕೆ ಮಾಡಿದ್ದಾರೆ. ಅಲ್ಲದೆ ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಸ್ಪಿನ್ ಆಲ್‌ರೌಂಡರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಸುನಿಲ್ ಗವಾಸ್ಕರ್ ಆಯ್ಕೆ ಮಾಡಿದ 2027 ವಿಶ್ವಕಪ್ ಟೀಮ್ ಇಂಡಿಯಾ

ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ ಮತ್ತು ನಿತೀಶ್ ಕುಮಾರ್ ರೆಡ್ಡಿ.

ಈ ತಂಡದ ಆಯ್ಕೆ ಮೂಲಕ ಅನುಭವ ಮತ್ತು ಯುವ ಪ್ರತಿಭೆಯ ಸಮತೋಲನ ಸಾಧಿಸುವ ಪ್ರಯತ್ನ ಸ್ಪಷ್ಟವಾಗಿದ್ದು, 2027ರ ಏಕದಿನ ವಿಶ್ವಕಪ್‌ಗೆ ಭಾರತ ಯಾವ ರೀತಿಯ ಸಂಯೋಜನೆಯೊಂದಿಗೆ ಕಣಕ್ಕಿಳಿಯಬಹುದು ಎಂಬುದರ ಕುರಿತು ಹೊಸ ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !