ಹೊಸದಿಗಂತ ವರದಿ ಅಂಕೋಲಾ:
ದೇಶದಲ್ಲಿ ನಡೆಯುತ್ತಿರುವ ಹುಲಿಗಳ ಸಮೀಕ್ಷೆ ಆಲ್ ಇಂಡಿಯಾ ಟೈಗರ್ ಎಸ್ಟಿಮೇಟ್ ಕಾರ್ಯಕ್ರಮದ ಭಾಗವಾಗಿ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ ಎರಡು ಕ್ಯಾಮೆರಾಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಘಟನೆ ತಾಲೂಕಿನ ಹೊಸಕಂಬಿ ವಲಯ ಅರಣ್ಯ ವ್ಯಾಪ್ತಿಯ ಮಾಣಿಕಾರ, ತಿಂಗಳೇಬೈಲ್ ಅರಣ್ಯದಲ್ಲಿ ನಡೆದಿದ್ದು ಅರಣ್ಯ ಇಲಾಖೆಯಿಂದ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹುಲಿ ಚಲನವಲನ ಸೆರೆಹಿಡಿಯಲು ಕ್ಯಾಮೆರಾ ಅಳವಡಿಕೆ
ಕರ್ನಾಟಕ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರ ಲಿಖಿತ ಆದೇಶ ಮೇರೆಗೆ ಮೇ 1 ರಿಂದ ಮೇ 25 ರ ವರೆಗೆ ನಡೆಯುತ್ತಿರುವ ಹುಲಿ ಸಮೀಕ್ಷಾ ಕಾರ್ಯದ ಅನುಷ್ಠಾನದ ಉದ್ದೇಶದಿಂದ ಮಾಣಿಕಾರ ತಿಂಗಳೆಬೈಲ್ ಅರಣ್ಯ ಪ್ರದೇಶದಲ್ಲಿ ಕೆಡಿಬ್ಯಾಕ್ ಕಂಪನಿಯ ಎರಡು ಆಪ್ ಲೈನ್ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.
ಇದನ್ನೂ ಓದಿ:
ಪ್ರತಿ ಐದು ದಿನಗಳಿಗೊಮ್ಮೆ ಕ್ಯಾಮೆರಾದ ಮೆಮೊರಿ ಕಾರ್ಡ್ ಬದಲಾಯಿಸಿ ಅದರಲ್ಲಿರುವ ಚಿತ್ರೀಕರಣದ ಡೇಟಾ ವಲಯ ಅರಣ್ಯ ಅಧಿಕಾರಗಳ ಕಾರ್ಯಾಲಯದ ಕಂಪ್ಯೂಟರ್ ಗಳಲ್ಲಿ ಸಂಗ್ರಹಿಸುವ ಕೆಲಸ ನಡೆಯುತಿತ್ತು.
25 ಸಾವಿರ ಮೌಲ್ಯದ ಕ್ಯಾಮೆರಾ ನಾಪತ್ತೆ
ಮೇ 11 ರಂದು ಮೆಮೊರಿ ಕಾರ್ಡ್ ಬದಲಾಯಿಸಿ ಡೇಟಾ ಸಂಗ್ರಹಿಸಲಾಗಿದ್ದು ಮೇ 12 ರಂದು ಇಲಾಖೆಯ ದಿನಗೂಲಿ ನೌಕರರು ಕ್ಯಾಮೆರಾ ಸ್ಥಳದಲ್ಲಿ ಇರುವುದನ್ನು ಪರಿಶೀಲಿಸಿದ್ದಾರೆ, ಮೇ 13 ರಂದು ನೋಡಿದಾಗ ಕ್ಯಾಮೆರಾಗಳು ನಾಪತ್ತೆಯಾಗಿದ್ದು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದರೂ ಸಿಗದೇ ಇರುವ ಕಾರಣ ಸುಮಾರು 25 ಸಾವಿರ ರೂಪಾಯಿ ಮೌಲ್ಯದ ಎರಡು ಕ್ಯಾಮೆರಾಗಳ ಕಳ್ಳತನ ನಡೆದಿರುವ ಕುರಿತಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಪೊಲೀಸ್ ದೂರು ದಾಖಲಿಸಲಾಗಿದೆ.
ಅರಣ್ಯಾಧಿಕಾರಿ ರಾಘವೇಂದ್ರ ಜಿರಾಗಲೆ ದೂರು ದಾಖಲಿಸಿದ್ದು ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.



