ದೇಶದಾದ್ಯಂತ 20 ಸಾವಿರ ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಿದೆ ಈ ಕಂಪನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಇಂಗಾಲ ಹೆಜ್ಜೆಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಎಲೆಕ್ಟ್ರಿಕ್‌ ಕಾರುಗಳ ಬಳಕೆಗೆ ಸರ್ಕಾರ ಉತ್ತೇಜನ ನೀಡುತ್ತಿದ್ದು ಕೆಲವೇ ದಶಕಗಳಲ್ಲಿ ದೇಶದ ಮಾಲಿನ್ಯ ಪ್ರಮಾಣವನ್ನು ಕುಗ್ಗಿಸುವ ಗುರಿಯೊಂದಿಗೆ ಹಲವಾರು ಕಾರ್ಯಗಳಾಗುತ್ತಿವೆ. ದೊಡ್ಡ ದೊಡ್ಡ ಕಾರು ಉತ್ಪಾದಕರೆಲ್ಲ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇದಕ್ಕೆ ಪೂರಕವಾಗಿ ದೇಶದಾದ್ಯಂತ 20 ಸಾವಿರ ಇವಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಕಂಪನಿಯೊಂದು ಮುಂದಾಗಿದೆ.

ದೇಶದ ಪ್ರಮುಖ ಇವಿ ಚಾರ್ಜಿಂಗ್‌ ಕ್ಷೇತ್ರದ ಕಂಪನಿಯಾದ ಸ್ಟಾಟಿಕ್‌ (Statiq) ಈಗಾಗಲೇ ದೇಶದಾದ್ಯಂತ 7,000 ಸಾರ್ವಜನಿಕ ಅರೆ-ಸಾರ್ವಜನಿಕ ಮತ್ತು ಕ್ಯಾಪ್ಟಿವ್ ಚಾರ್ಜಿಂಗ್‌ ಕೇಂದ್ರಗಳನ್ನು ನಿರ್ವಹಿಸುತ್ತಿರುವುದಾಗಿ ಹೇಳಿಕೊಂಡಿದ್ದು 2023ರ ಅಂತ್ಯದ ವೇಳೆಗೆ 20 ಸಾವಿರ ಕೇಂದ್ರಗಳನ್ನು ನಿರ್ವಹಿಸುವ ಗುರಿ ಹೊಂದಿದೆ.

ಸ್ಟಾಟಿಕ್ ಪ್ರಕಾರ, 1,000 ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳು ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದ್ದು ಮತ್ತು ಮಾಲ್‌ಗಳು, ಹೆದ್ದಾರಿಗಳು, ವಿಮಾನ ನಿಲ್ದಾಣಗಳು, ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳು, ಹೋಟೆಲ್‌ಗಳು ಮತ್ತು ಕಚೇರಿ ಸಂಕೀರ್ಣಗಳಂತಹ ಪ್ರಮುಖ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ.

“ನಾವು ಭಾರತದಾದ್ಯಂತ 60 ನಗರಗಳಲ್ಲಿ 7,000 ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಿದ್ದೇವೆ. ಭವಿಷ್ಯದಲ್ಲಿ ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸಿ ಗ್ರಾಹಕರಿಗೆ ಸಹಾಯ ಮಾಡುವಲ್ಲಿ ನಾವು ಬದ್ಧರಾಗಿದ್ದೇವೆ” ಎಂದು ಸ್ಟಾಟಿಕ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಅಕ್ಷಿತ್ ಬನ್ಸಾಲ್ ಹೇಳಿದ್ದಾರೆ.
ದೆಹಲಿ-ಎನ್‌ಸಿಆರ್‌ನಲ್ಲಿ, ಮುಂಬೈ, ಚಂಡೀಗಢ, ಅಮೃತಸರ, ಉದಯಪುರ ಮತ್ತು ಬೆಂಗಳೂರು ಮತ್ತು ಆಗ್ರಾದಲ್ಲಿ ಸ್ಟಾಟಿಕ್ ಇವಿ ಚಾರ್ಜಿಂಗ್ ನೆಟ್‌ವರ್ಕ್ ವ್ಯಾಪಿಸುತ್ತಿದೆ ಎಂದು ಕಂಪನಿ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!