Monday, September 25, 2023

Latest Posts

ದೈನಂದಿನ ಸಮಸ್ಯೆಗಳಿಗೆ ಸರಳ ತಂತ್ರಜ್ಞಾನ ಪರಿಹಾರ ಒದಗಿಸಿದ್ದಾರೆ ಕಾಶ್ಮೀರದ ಈ ಅನ್ವೇಷಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೊಮ್ಮೆ ಚಿಕ್ಕಚಿಕ್ಕ ವಿಷಯಗಳು ಎಂದುಕೊಂಡಂತವೇ ದೊಡ್ಡಮಟ್ಟದಲ್ಲಿ ಸಮಸ್ಯೆಯಾಗಿ ಕಾಡುತ್ತವೆ. ಉದಾಹರಣೆಗೆ, ವಿದ್ಯುತ್ ವ್ಯತ್ಯಯವಾದಾಗ ಅದನ್ನು ಸರಿಪಡಿಸುವ ಕೌಶಲ ತಂತ್ರಜ್ಞನಿಗೆ ಗೊತ್ತಿರುತ್ತಾದರೂ, ಅದರ ಅನುಷ್ಠಾನಕ್ಕೆ ವಿದ್ಯುತ್ ಕಂಬ ಹತ್ತಬೇಕಾದ ಕೌಶಲವೂ ಲೈನ್ ನಿರ್ವಹಣೆಗಾರರಿಗೆ ಇರಬೇಕಾಗುತ್ತದೆ.
ವಾಲ್ನಟ್ ಎಂಬುದು ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಾಂಡ, ಸಿಕ್ಕಿಂಗಳಲ್ಲಿ ಹಲವರ ಜೀವನೋದ್ಧಾರದ ಬೆಳೆ. ಆದರೆ, ಇದರ ದಪ್ಪ ಸಿಪ್ಪೆ ತೆಗೆಯುವುದು ಬಹಳ ಸಮಯ ಬೇಡುವ ಕೆಲಸ.
ಇಂಥ ಸಮಸ್ಯೆಗಳಿಗೆ ತಮ್ಮ ಆವಿಷ್ಕಾರಗಳ ಮೂಲಕ ಪರಿಹಾರ ಒದಗಿಸಿ ಗಮನ ಸೆಳೆದಿದ್ದಾರೆ ಮುಷ್ತಾಕ್ ಅಹ್ಮದ್ ದರ್. ಇವರು ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯವರು.
ಇವರು ವಾಲ್ ನಟ್ ನ ಸಿಪ್ಪೆ ಸುಲಿಯಲು, ಬೀಜ ತೊಳೆಯಲು ಸುಲಭವಾಗುವಂತೆ ಹಾಗೂ ವಾಲ್‌ನಟ್ ಉತ್ಪಾದನೆಯನ್ನು ಸುಗಮಗೊಳಿಸಲು ‘ವಾಲ್ ನಟ್ ಕ್ರ್ಯಾಕಿಂಗ್ ಮಿಷನ್’ ಅನ್ನು ಸಿದ್ಧಗೊಳಿಸಿದ್ದಾರೆ.
ಈ ಕ್ರ್ಯಾಕಿಂಗ್ ಮಿಷನ್ ನಿಂದ ಯಾವುದೇ ಪ್ರಕಾರದ ವಾಲ್ನಟ್ ಸಿಪ್ಪೆ ಸುಲಿಯಬಹುದು. ಅದರ ಮೇಲ್ಪದರ ಕಾಗದದಂತೆ ತೆಳುವಾಗಿದ್ದರೂ, ಕವಚ ಹೊತ್ತಂತೆ ದಪ್ಪಗಿದ್ದರೂ, ಮಧ್ಯಮ ದಪ್ಪದ ಸಿಪ್ಪೆ ಇದ್ದರೂ ಈ ಒಂದೇ ಯಂತ್ರವೇ ಅವೆಲ್ಲವನ್ನೂ ಸಂಸ್ಕರಿಸುತ್ತದೆ.
ಇದರಿಂದ ಲಾಭವೇನೆಂದರೆ, ಹೊರಬಿದ್ದ ವಾಲ್ನಟ್ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ. ರಫ್ತು ಮಾರುಕಟ್ಟೆಗೆ ಬೇಕಾದ ಗುಣಮಟ್ಟವೂ ಸಿಗುತ್ತದೆ.
ಈ ವಿಧಾನದಿಂದ ರಫ್ತು ಮಾಡುವವರು ತಮ್ಮ ವಾಲ್ ನಟ್ ನ ಸಿಪ್ಪೆ ತೆಗೆದು ಸ್ವಚ್ಛವಾದ ಫೈನಲ್ ಉತ್ಪಾದನೆಯನ್ನು ಹೆಚ್ಚು ಆಕರ್ಷಕವಾಗಿ ಮಾರುಕಟ್ಟೆಗೆ ತರಬಹುದಾಗಿದೆ. 2017ರಲ್ಲಿ ಭಾರತ-ಅಫ್ಘಾನಿಸ್ತಾನದ ವ್ಯಾಪಾರ ಮತ್ತು ಹೂಡಿಕೆ ಪ್ರದರ್ಶನದ ಸಂದರ್ಭದಲ್ಲಿ ಈ ತಂತ್ರಜ್ಞಾನ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಆಕರ್ಷಿಸಿದೆ.
ಸದ್ಯ ಇದು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಸ್ಥಾಪಿತ ಉದ್ಯೋಗವಾಗಿದೆ. ಲಡಾಖ್ ಮತ್ತು ಹಿಮಾಚಲ ಪ್ರದೇಶ, ಉತ್ತರಾಖಂಡ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ಭಾಗಗಳಲ್ಲಿಯೂ ಬಳಸಲಾಗುತ್ತದೆ.
ಇದೊಂದೆ ಅಲ್ಲ, ಮುಷ್ತಾಕ್ ಅವರ ಮತ್ತೊಂದು ವಿಭಿನ್ನ ಸಾಧನ ಎಲ್ಲರ ಗಮನಸೆಳೆದಿದೆ.
ವಿದ್ಯುತ್ ಕಾಮಗಾರಿ ಮಾಡುವ ಟೆಲಿಕಾಂ ಸಂಸ್ಥೆಗಳ ಕಾರ್ಮಿಕರಿಗೆ ಸಹಾಯವಾಗುವಂತೆ ಪೋಲ್ ಕ್ಲೈಂಬರ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ದಿನನಿತ್ಯ ರಿಪೇರಿ ಕೆಲಸಗಳಿಗೆ ವಿದ್ಯುತ್ ಕಂಬ ಹತ್ತುವ ಕಾರ್ಮಿಕರಿಗೆ ಏಣಿಗಳ ಬದಲಿಗೆ ಬಳಸಬಹುದಾದ ಯಂತ್ರವಾಗಿದೆ.
ಈ ಆವಿಷ್ಕಾರಕ್ಕೆ ಪೋಲ್ ಪ್ರೋ ಎನ್ನಲಾಗುತ್ತದೆ. ಈ ತಂತ್ರಜ್ಞಾನವು Anventa Gadgetix Pvt Ltd ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಈ ವಿಶೇಷ ಯಂತ್ರ ಭಾರತ ಸರ್ಕಾರದಿಂದ ಗುರುತಿಸಲ್ಪಟ್ಟಿದ್ದು, ಮುಷ್ತಾಕ್ ಅವರ ಈ ಆವಿಷ್ಕಾರಗಳು ಇತರ ಸಂಸ್ಥೆಗಳೊಂದಿಗೆ ಸೇರಿ ಎರಡು ಹೊಸ ಸ್ಟಾರ್ಟ್ ಅಪ್ ಸ್ಥಾಪನೆಯಾಗಲು ಕಾರಣವಾಗಿದೆ.
ಮುಷ್ತಾಕ್ ಅವರ ಸರಣಿ ಆವಿಷ್ಕಾರಗಳನ್ನು ಗುರುತಿಸಿದ ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇವರ ಆವಿಷ್ಕಾರ ಜನರ ಧ್ವನಿ ಎಂದು ಉಲ್ಲೇಖಿಸಿ, ಶ್ಲಾಘಿಸಿದ್ದಾರೆ.
ಇವರ ಎಲ್ಲ ಆವಿಷ್ಕಾರಗಳಿಗೆ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಇನ್ನೋವೇಷನ್ ಫೌಂಡೇಶನ್ (ಎನ್ ಎಫ್ ಐ) ಅಗತ್ಯ ಸಹಕಾರಗಳನ್ನು ನೀಡಿದೆ. ಮುಷ್ತಾಕ್ ಅವರ ಐಡಿಯಾಗಳ ಅನುಷ್ಠಾನದಲ್ಲಿ ಅಗತ್ಯವಾದ ಹಕ್ಕುಸ್ವಾಮ್ಯ ರಕ್ಷಣೆ, ಉತ್ಪನ್ನದ ಅಭಿವೃದ್ಧಿ, ನವೋದ್ದಿಮೆ ನೋಂದಣಿಯಲ್ಲಿ ಸಹಾಯ ಇತ್ಯಾದಿ ಸಹಕಾರಗಳನ್ನು ಎನ್ ಎಫ್ ಐ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!