-ರಾಚಪ್ಪಾ ಜಂಬಗಿ
ರೈತರು ಶಕ್ತಿ ಉತ್ಪಾದಕರೂ ಆಗಬೇಕು ಎಂಬುದು ಮೋದಿ ಸರ್ಕಾರದ ಕಲ್ಪನೆಗಳಲ್ಲಿ ಒಂದು. ಇದಕ್ಕಾಗಿ ಅದು ಹಲವು ಯೋಜನೆಗಳನ್ನು, ವಿಶೇಷವಾಗಿ ಸೌರಶಕ್ತಿಯ ಸುತ್ತ, ರೈತರಿಗಾಗಿ ಹಮ್ಮಿಕೊಂಡಿದೆ. ಆದರೆ, ಸೋಲಾರ್ ಸುತ್ತ ರೈತ ಬದುಕೊಂದನ್ನು ಹೇಗೆ ಕಟ್ಟಬಹುದು ಎಂಬುದಕ್ಕೆ ಮಾದರಿಯನ್ನೇನಾದರೂ ತೋರಿಸಬಹುದಾದರೆ ಕಲಬುರಗಿ ತಾಲೂಕಿನ ಹಾಲ್ ಸುಲ್ತಾನಪುರ ಗ್ರಾಮದ ಶರಣಬಸಪ್ಪ ಪಾಟೀಲ್ ಅವರನ್ನು ಸಂದರ್ಶಿಸಬೇಕು.
ಸೋಲಾರ್ ಎಂದ ಕೂಡಲೇ ನಿಮಗೆ ಸೌರಪಂಪ್ ಮೂಲಕ ನೀರಾವರಿ ಮಾಡುತ್ತಿರುವ ರೈತನಷ್ಟೇ ಕಣ್ಮುಂದೆ ಬರಬಹುದೇನೋ. ಆದರೆ ಶರಣಬಸಪ್ಪ ಅಂತಂದ್ರೆ ಅದಷ್ಟೇ ಅಲ್ಲ ಅನ್ನೋದಕ್ಕಾಗಿಯೇ ಅವರ ಸಾಧನೆ ವಿಶೇಷ. ಕೃಷಿ ಪಂಡಿತ ಶರಣಬಸಪ್ಪಾ ಪಾಟೀಲ ಅವರು ಸ್ಥಳೀಯವಾಗಿ ತಮ್ಮ ಮನೆಯಲ್ಲೇ ನಳ ನಿರಾವರಿ, ಕಡಿಮೆ ಖರ್ಚಿನ ಸೋಲಾರ್ ಬೆಲಿ, ತೊಗರಿ ಕುಡಿ ಚಿವುಟುವ ಯಂತ್ರ, ಹೊಸ ಮಾದರಿಯ ಗೋಬರ ಗ್ಯಾಸ್, ಸುಲಭವಾಗಿ ನವಣೆ ಅಕ್ಕಿ ಮಾಡುವ ವಿಧಾನ, ಬ್ಯಾಟರಿ ಸ್ಪ್ರೇಯರನ್ ಪರ್ಯಾಯ ಉಪಯೋಗ, ಮೋಟಾರ್ ಟೈಮರ್, ಹೊಸ ಮಾದರಿಯ ದಿಂಡು, ಹಕ್ಕಿ ಓಡಿಸುವ ಸೈರನ್, ನಿರಂತರ ಜ್ಯೋತಿ ಕಾಂಟೆಕ್ಟರ್, ಎಸ್.ಡಿ.ಪಿ ಪೈಪ್ ಜೋಡಣೆ, ಸೋಲಾರ್ ಹೌಸ್, ಸಿಂಗಲ್ ಫೇಸ್ ಕರೆಂಟ್,ನಿಂದ 3 ಫೇಸ್ ಮೊಟಾರ್ ಚಾಲನಾ ಬಾಕ್ಸ್, ಬೆಳೆ ಕಳೆ ಉಳಿಕೆ ಸಂಗ್ರಹ ದಿಂಡು, ಬಾವಿಯಿಂದ ಪಂಪಸೆಟ್ ನೀರು ಗ್ಯಾಪ್ ತೆಗೆದುಕೊಳ್ಳದೆ ನಿರಂತರವಾಗಿ ಬರುವ ವಿಧಾನ, ಸೋಲಾರ್ ಹೆಲ್ಮೆಟ್, ನಿಂಬೆಹಣ್ಣು ವರ್ಗೀಕರಣ ಸಾಧನ, ಸೋಲಾರ್ ಚಾಲಿತ ಜಲಕೃಷಿ, ಸೋಲಾರ್ ಲೈಟ್ ಟ್ರ್ಯಾಪ್, ಮಂಗ್ಯಾ(ಕೋತಿ) ಓಡಿಸುವ ಸಾಧನ ಯಂತ್ರಗಳನ್ನು ಆವಿಷ್ಕರಿಸಿದ್ದಾರೆ.
ಇನ್ನೂ ವಿಶೇಷವಾಗಿ, ರೇಷ್ಮೆ ಬೆಳೆಗಳಿಗೆ ಔಷಧಿ ಸಿಂಪಡಿಸಲು ಸೋಲಾರನಿಂದ ಸಣ್ಣ ಮೋಟಾರ ಇಟ್ಟುಕೊಂಡು, ಅದಕ್ಕೆ ಬೇಕಾಗುವ ಒಂದು ಕಂಟ್ರೋಲರ್ ಇಟ್ಟುಕೊಂಡು ಕೈಯಿಂದ ಎರಚುವ ಬದಲು ಯಂತ್ರದ ಮೂಲಕ ಎರೆಚುವ ಹೊಸ ಯಂತ್ರವನ್ನು ಇತ್ತೀಚೆಗೆ ಪಾಟೀಲ ಕಂಡು ಹಿಡಿದಿದ್ದಾರೆ. ಜೊತೆಗೆ ಹಬ್ಬ ರೆಡಿ ಮಾಡುವ ಸಲಕರಣೆಯನ್ನು ಸಹ ಹೊಸದಾಗಿ ಕಂಡುಕೊಂಡಿದ್ದಾರೆ. ಹೊಸ ಯಂತ್ರ ಮಾಡಿದ ಬಳಿಕ ರೈತರು ಸಹ ಅದನ್ನು ಕೇಳುತ್ತಿದ್ದು, ಅದರ ಬಗ್ಗೆ ಮಾಹಿತಿ ಮತ್ತು ಆ ಯಂತ್ರವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದೇನೆ ಎಂದು ಹೊಸದಿಗಂತಕ್ಕೆ ಮಾಹಿತಿ ನೀಡಿದ್ದಾರೆ.
ಇವರು ಓದಿದ್ದು ಕೇವಲ ಪಿಯುಸಿ ಮಾತ್ರ. ಆದರೆ, ಇವರ ಸಾಧನೆಗಳು ಅಪಾರ. ತಂದೆ ನಿವೃತ್ತ ಶಿಕ್ಷಕರು. 27 ಎಕರೆ ನೀರಾವರಿ ಜಮೀನು ಹೊಂದಿರುವ ಇವರು, ಸೋಲಾರ್ ಚಾಲಿತ ಯಂತ್ರ ಹಾಗೂ ಸಲಕರಣೆ ಕಂಡು ಹಿಡಿದು, ಉಳಿದ ರೈತರಿಗೂ ಅದರ ಉಪಯೋಗ ಪಡೆಯುವಂತೆ ಪ್ರೇರೇಪಿಸುತ್ತಿದ್ದಾರೆ.
ಹಲವು ಪ್ರಶಸ್ತಿಗಳು
ಶರಣಬಸಪ್ಪಾ ಪಾಟೀಲ ಅವರು ಕೃಷಿಯಲ್ಲಿ ಮಾಡಿದ ಸಾಧನೆಗಳಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅದರಲ್ಲಿ ಪ್ರಮುಖವಾಗಿ ಜಗಜೀವನ ರಾಮ ಇನ್ನೋವೇಟಿವ್ ಫಾರ್ಮರ್ ರಾಷ್ಟ್ರೀಯ ಪ್ರಶಸ್ತಿ-2020, ಕೃಷಿ ಪಂಡಿತ ಪ್ರಶಸ್ತಿ, ದೂರದರ್ಶನ ಚಂದನ ಪ್ರಶಸ್ತಿ,ರೈತ ವಿಜ್ಞಾನಿ ಪ್ರಶಸ್ತಿ, ರೈತ ರತ್ನ ಪ್ರಶಸ್ತಿ, ರಾಜ್ಯ ಮಟ್ಟದ ಅನುಶೋಧಕ ರೈತರ ಸಮ್ಮೇಳನದಲ್ಲಿ ಪ್ರಥಮ ಬಹುಮಾನ, ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸನ್ಮಾನ ಅವರ ಸಾಧನೆಗೆ ಸಂದ ಗೌರವವಾಗಿದೆ.
ತಮ್ಮ ಸಂಪೂರ್ಣ ಮನೆ ಹಾಗೂ ಕೃಷಿ ಭೂಮಿಯ ಚಟುವಟಿಕೆಗೆ ತಾವೇ ಸೋಲಾರ್ ವಿದ್ಯುತ್ ಉತ್ಪಾದಿಸುತ್ತಿದ್ದು, ಉಳಿಯುವ ವಿದ್ಯುತ್ ನ್ನು ಕೆಇಬಿಗೆ ನೀಡಲು ಮುಂದಾಗಿದ್ದಾರೆ. ಇವರ ಕಾರ್ಯ-ಸಾಧನೆಗಳು ಕೇವಲ ರೈತ ಸಮುದಾಯಕ್ಕಷ್ಟೇ ಅಲ್ಲದೇ ಕೃಷಿ ವಿದ್ಯಾರ್ಥಿಗಳು, ವಿಜ್ಞಾನಿಗಳಿಗೂ ಪ್ರೇರಣಾದಾಯಕವಾಗಿದೆ.