ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕುರಿತು ಮುಂಬರುವ ಸಂಸತ್ ಅಧಿವೇಶನದಲ್ಲಿ ಎಲ್ಲರೂ ಒಟ್ಟಾಗಿ ಈ ಬಿಕ್ಕಟ್ಟನ್ನು ಶಾಶ್ವತವಾಗಿ ಹೇಗೆ ಕೊನೆಗೊಳಿಸಬಹುದು ಎಂಬುದರ ಕುರಿತು ಚರ್ಚಿಸುವಂತೆ ಸಂಸದರನ್ನು ಒತ್ತಾಯಿಸಿದರು.
ಇಲ್ಲಿನ ಇಂಡಿಯಾ ಗೇಟ್ನಲ್ಲಿ ಪರಿಸರವಾದಿ ವಿಮ್ಲೇಂದು ಝಾ ಅವರೊಂದಿಗೆ ವಾಯುಮಾಲಿನ್ಯ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿರುವ ವಿಡಿಯೋವನ್ನು ರಾಹುಲ್ ಗಾಂಧಿ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದೊಂದಿಗೆ ತಮ್ಮ ಪೋಸ್ಟ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್, ಉತ್ತರ ಭಾರತದಲ್ಲಿನ ವಾಯುಮಾಲಿನ್ಯವು ರಾಷ್ಟ್ರೀಯ ತುರ್ತುಸ್ಥಿತಿಯಾಗಿದೆ. ಇದು ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತಿರುವ, ವೃದ್ಧರನ್ನು ಉಸಿರುಗಟ್ಟಿಸುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು ಮತ್ತು ಅಸಂಖ್ಯಾತ ಜೀವಗಳನ್ನು ಹಾಳುಮಾಡುವ ಪರಿಸರ ಮತ್ತು ಆರ್ಥಿಕ ವಿಪತ್ತಾಗಿದೆ ಎಂದು ಬರೆದಿದ್ದಾರೆ.
ಈ ವಿಷಗಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಬಡವರು ಅತಿಹೆಚ್ಚು ಸಂಕಷ್ಟಕ್ಕೀಡಾಗಿದ್ದಾರೆ. ಕುಟುಂಬಗಳು ಶುದ್ಧ ಗಾಳಿಗಾಗಿ ಪರದಾಡುತ್ತಿವೆ, ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ ಮತ್ತು ಲಕ್ಷಾಂತರ ಜನ ಸಾಯುತ್ತಿದ್ದಾರೆ. ಪ್ರವಾಸೋದ್ಯಮ ಹಾಳಾಗುತ್ತಿದೆ ಮತ್ತು ನಮ್ಮ ಜಾಗತಿಕ ಖ್ಯಾತಿಯು ಕುಸಿಯುತ್ತಿದೆ ಎಂದು ರಾಹುಲ್ ಹೇಳಿದರು.
ನೂರಾರು ಕಿಲೋಮೀಟರ್ಗಳಷ್ಟು ದೂರದವರೆಗೆ ಮಾಲಿನ್ಯದ ಮೋಡ ಆವರಿಸಿದೆ. ಇದನ್ನು ಸ್ವಚ್ಛಗೊಳಿಸಲು ಸರ್ಕಾರಗಳು, ಕಂಪನಿಗಳು, ತಜ್ಞರು ಮತ್ತು ನಾಗರಿಕರಿಂದ ಪ್ರಮುಖ ಬದಲಾವಣೆಗಳು ಮತ್ತು ನಿರ್ಣಾಯಕ ಕ್ರಮದ ಅಗತ್ಯವಿದೆ. ನಮಗೆ ಸಾಮೂಹಿಕ ರಾಷ್ಟ್ರೀಯ ಪ್ರತಿಕ್ರಿಯೆ ಬೇಕು, ರಾಜಕೀಯ ಕೆಸರೆರಚಾಟ ಅಲ್ಲ ಎಂದು ಅವರು ಹೇಳಿದರು.