ಬ್ಯಾಂಕ್ ದಿವಾಳಿ ಸಾಧ್ಯತೆಗಳಿಂದ ಬಿಸಿನೆಸ್ ಕಾಪಾಡಿಕೊಳ್ಳೋಕೆ ಜೆರೋಧ ಮುಖ್ಯಸ್ಥ ನೀಡ್ತಿರೋ ಸಲಹೆ ಇದು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಪ್ರಸ್ತುತ ಅಮೆರಿಕದ ಸಿಲಿಕಾನ್‌ ವ್ಯಾಲಿ ಬ್ಯಾಂಕ್‌ ದಿವಾಳಿಯಾಗಿರೋ ವಿದ್ಯಮಾನವು ಜಾಗತಿಕವಾಗಿ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಈ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದ ಅದೆಷ್ಟೋ ಜನರು ಈಗ ಆತಂಕಕ್ಕೆ ಒಳಗಾಗಿದ್ದಾರೆ, ಜನಸಾಮಾನ್ಯರೊಂದೇ ಅಲ್ಲದೇ ಅನೇಕ ನವೋದ್ದಿಮೆಗಳು ಇತರ ವ್ಯಾಪಾರೋದ್ದಿಮೆಗಳೂ ಸಹ ಈ ಬ್ಯಾಂಕಿನಲ್ಲಿ ತಮ್ಮ ಹಣವನ್ನು ಠೇವಣಿಯಿಟ್ಟಿದ್ದರು. ಆದರೆ ಈಗ ಬ್ಯಾಂಕ್‌ ದಿವಾಳಿಯಾಗಿರೋದು ಹಲವು ಕಂಪನಿಗಳಿಗೆ, ವ್ಯವಹಾರಸ್ಥರಿಗೆ ಸಂಕಷ್ಟವನ್ನು ತಂದೊಡ್ಡಿದೆ. ಹೀಗಾಗಿ ಇಂತಹ ಸಾಧ್ಯತೆಗಳಿಂದ ತಮ್ಮ ವ್ಯಾಪಾರ-ವಹಿವಾಟನ್ನು ಕಾಪಾಡಿಕೊಳ್ಳೋಕೆ ಉದ್ಯಮಿಗಳಿಗೆ ಭಾರತದ ಯಶಸ್ವಿ ಉದ್ದಿಮೆ ಜೆರೋಧ ಮುಖ್ಯಸ್ಥ ನಿತಿನ್‌ ಕಾಮತ್‌ ಸಲಹೆ ಯೊಂದನ್ನು ನೀಡಿದ್ದು ತಮ್ಮ ಬಂಡವಾಳವನ್ನು ಒಂದೇ ಬ್ಯಾಂಕಿನಲ್ಲಿಡದೇ ಬೇರೆ ಬೇರೆ ಬ್ಯಾಂಕುಗಳಲ್ಲಿ ಹಂಚಿಕೆ ಮಾಡಿದರೆ ವ್ಯಾಪಾರಕ್ಕೆ ಒದಗಬಹುದಾದ ಅಪಾಯ ಸಾಧ್ಯತೆ ಕಡಿಮೆಯಿರುತ್ತೆ ಎಂದಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರೋ ಅವರು ಹೇಳಿದ್ದೇನೆಂದರೆ “ವ್ಯಾಪಾರ ಎಂದ ಮೇಲೆ ಯಾವಾಗ ಬೇಕಾದರೂ ವಿಷಯಗಳು ಬದಲಾಗಬಹುದು, ಬೆಳಿಗ್ಗೆ ಎದ್ದ ತಕ್ಷಣ ಮಾರುಕಟ್ಟೆಯಲ್ಲಿ ಕ್ಷಿಪ್ರ ಬದಲಾವಣೆಗಳಾಗಬಹುದು, ಅಥವಾ SVB (ಸಿಲಿಕಾನ್‌ ವ್ಯಾಲೀ ಬ್ಯಾಂಕ್‌) ಥರ ಹಣವೇ ಸಿಗದಂತಾಗಿ ಬಿಡಬಹುದು. ಹಾಗಾಗಿ ಎಲ್ಲವನ್ನೂ ಅಪಾಯವೆಂದು ಪರಿಗಣಿಸಿ ಅದನ್ನು ತಗ್ಗಿಸಲು ಏನು ಬೇಕೋ ಮಾಡಿ.ಪ್ರತಿ ವ್ಯವಹಾರವೂ ಒಂದಲ್ಲ ಒಂದು ದಿನ ಇಂಥಹ ಕರಾಳತೆಗೆ ಒಳಗಾಗಬಹುದು, ಅದನ್ನು ದಾಟಿ ಮುಂದೆ ಸಾಗಲೇಬೇಕು. ಪ್ರಸ್ತುತ SVB ಬ್ಯಾಂಕ್‌ ಅಥವಾ ಯೆಸ್‌ ಬ್ಯಾಂಕಿನ ಉದಾಹರಣೆಗಳನ್ನು ಗಮನಿಸಿದರೆ ವರ್ಕಿಂಗ್‌ ಕ್ಯಾಪಿಟಲ್‌ (ಕಾರ್ಯನಿರ್ವಹಿಸುವ ಬಂಡವಾಳ) ಅನ್ನು ಬೇರೆ ಬೇರೆ ಬ್ಯಾಂಕುಗಳಲ್ಲಿ ಹಂಚಿಕೆ ಮಾಡಿ ಇಡುವುದು ಒಳಿತು” ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!