ಈಗಿನ ಚಲನಚಿತ್ರಗಳ ಸೋಲಿಗೆ ಇದೇ ಪ್ರಮುಖ ಕಾರಣ: ವಿ. ಮನೋಹರ್

ಹೊಸದಿಗಂತ ವರದಿ ಮಂಡ್ಯ :

ಇಂದಿನ ಬಹುತೇಕ ಚಲನಚಿತ್ರಗಳ ಕಥೆಯಲ್ಲಿ ಜೀವಾಳವಿಲ್ಲದಿರುವುದೇ ಸೋಲಿಗೆ ಪ್ರಮುಖ ಕಾರಣ ಎಂದು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಚಲನಚಿತ್ರ ನಿರ್ದೇಶಕ ವಿ.ಮನೋಹರ್ ವಿಷಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸಿನಿಮಾ ಜನರನ್ನು ಆಕರ್ಷಿಸಬೇಕಾದರೆ ಕಥೆ ಬಹಳ ಮುಖ್ಯವಾಗುತ್ತದೆ. ಕೇವಲ ಹೀರೋಯಿಸಂ, ಹೀರೋಗೆ ಬಿಲ್ಡಪ್ ಕೊಡುವ ಡೈಲಾಗ್‌ಗಳು, ಡಬಲ್ ಮೀನಿಂಗ್ ಡೈಲಾಗ್‌ಗಳಿಂದ ಕೂಡಿರುವ ಚಿತ್ರಗಳು ಜನರನ್ನು ತಲುಪುವುದಿಲ್ಲ. ಇಂತಹ ಎಷ್ಟೋ ಸಿನಿಮಾಗಳು ಒಂದೇ ದಿನಕ್ಕೆ ಮಾಯವಾಗಿರುವುದನ್ನು ನೋಡಿದ್ದೇವೆ ಎಂದರು.

ರಂಗಿತರಂಗ, ಒಂದು ಮೊಟ್ಟೆಯ ಕಥೆ, ಯು- ಟರ್ನ್, ಕೆಜಿಎಫ್, ಕಾಂತಾರದಂತಹ ಕೆಲವು ಚಿತ್ರಗಳು ಜನರ ಮನಸ್ಸನ್ನು ಗೆದ್ದವು. ಹೊಸಬರು ಮಾಡುವ ಹೊಸ ಪ್ರಯೋಗಗಳನ್ನು ಜನರು ಇಷ್ಟಪಟ್ಟಿದ್ದಾರೆ. ಅವುಗಳಲ್ಲಿ ಕಥೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದುದರಿಂದ ಜನರು ಆ ಚಿತ್ರಗಳತ್ತ ಆಕರ್ಷಿತರಾದರು. ಇಂತಹ ಏರಿಳಿತಗಳು ಕನ್ನಡ ಚಿತ್ರರಂಗದಲ್ಲಿ ಉಂಟಾಗುತ್ತಿರುತ್ತವೆ. ಯುವ ನಿರ್ದೇಶಕರು ಹಾಗೂ ನಿರ್ಮಾಪಕರು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸಲು ಒಲವು ತೋರಿದರೆ ಚಿತ್ರರಂಗ ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಹಣ ಮಾಡುವುದಕ್ಕೆ ಚಿತ್ರವನ್ನು ನಿರ್ಮಿಸುವುದಾದರೆ ಅವುಗಳಿಗೆ ಉಳಿಗಾಲವಿರುವುದಿಲ್ಲ ಎಂದು ಹೇಳಿದರು.

ಉತ್ತಮ ಚಿತ್ರಗಳಿಗೆ ಅತ್ಯುತ್ತಮ ಹಾಡುಗಳನ್ನು ಬರೆಯುವ ಪ್ರತಿಭಾವಂತ ಸಾಹಿತಿಗಳು ಈಗಲೂ ಇದ್ದಾರೆ. ಚಿತ್ರದ ಸನ್ನಿವೇಶಕ್ಕೆ ಪೂರಕವಾಗುವಂತಹ ಹಾಡುಗಳನ್ನು ರಚಿಸುವ ಅವಕಾಶಗಳು ಅವರಿಗೆ ಸಿಗುತ್ತಿಲ್ಲ. ಜಯಂತ್ ಕಾಯ್ಕಿಣಿ, ಕವಿರಾಜ್, ನಾಗೇಂದ್ರಪ್ರಸಾದ್ ಸೇರಿದಂತೆ ಅನೇಕ ಸಾಹಿತಿಗಳಿದ್ದಾರೆ. ಪ್ರಸ್ತುತ ಸಂಗೀತ ನಿರ್ದೇಶಕರು ನೀಡುವ ರೆಡಿಮೇಡ್ ಟ್ಯೂನ್‌ಗಳಿಗೆ ಸಾಹಿತ್ಯ ಬರೆಯುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಅಂತಹ ಸಾಮರ್ಥ್ಯ ಕೂಡ ಜಯಂತ್ ಕಾಯ್ಕಿಣಿ ಅವರಲ್ಲಿದೆ. ಆದರೆ ಕಥೆಗೆ ಹೊಂದಿಕೊಂಡಂತೆ ಮೂಡಿ ಬರುವ ಸಾಹಿತ್ಯ ಹೆಚ್ಚು ಸತ್ವಯುತವಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!