Monday, January 30, 2023

Latest Posts

ಯುವ ಸಮೂಹಕ್ಕೆ ರೋಲ್ ಮಾಡೆಲ್ ಈ ಲೆಕ್ಚರರ್: ಅಂಧತ್ವವಿದ್ದರೇನಂತೆ ಅನ್ಯರ ಬಾಳಿನ ಬೆಳಕಿವರು!

-ಸುರೇಶ್ ಡಿ. ಪಳ್ಳಿ

ಮಂಗಳೂರು: ‘ಬದುಕಿನಲ್ಲಿ ಏನೇ ಸವಾಲುಗಳು ಬರಲಿ. ಅದನ್ನು ಧೈರ್ಯದಿಂದ ಎದುರಿಸಿ ಮುನ್ನು ಗ್ಗಬೇಕು. ಸಾಧನೆಗೆ ಯಾವುದೂ ಅಡ್ಡಿಯಾಗದು. ಪ್ರೋತ್ಸಾಹದ ಕೈಗಳು ಜೊತೆಗಿದ್ದರಷ್ಟೇ ಸಾಕು….’

ಇದು, ಅಂಧತ್ವವನ್ನು ಮೆಟ್ಟಿ ನಿಂತು ವಿಶೇಷ ಸಾಧನೆ ಮಾಡಿರುವ ಮಂಗಳೂರಿನ ಅನ್ವಿತ್ ಜಿ. ಕುಮಾರ್ ಅವರ ಪ್ರೇರಣೆಯ ನುಡಿ.
ಇವರಿಗೆ ಈ ಜಗತ್ತನ್ನು ಕಾಣುವ, ಸವಿಯುವ ಸೌಭಾಗ್ಯವಿಲ್ಲ. ಆದರೆ ಜಗತ್ತಿಗೆ ಪಾಠ ಮಾಡುತ್ತಾರೆ! ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಯುವ ಮನಸ್ಸುಗಳಿಗೆ ದಾರಿ ತೋರಿಸುತ್ತಾರೆ. ‘ಅಂಧನಾಗಿದ್ದೇನೆಂಬ ಕೊರಗು ನನಗಿಲ್ಲ. ಒಂದಷ್ಟು ಮಂದಿಗೆ ಬೆಳಕಾಗುವ ಪ್ರಯತ್ನ ಮಾಡುತ್ತೇನೆ’ ಎಂದು ಸ್ವಾಭಿಮಾನದ ಮಾತನ್ನಾಡುವ ಅನ್ವಿತ್‌ರಲ್ಲಿ ಹೈ ಜೋಶ್ ಇದೆ. ಅಂದಹಾಗೆ, ಇವರೀಗ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರು!

ರ್‍ಯಾಂಕ್ ಸ್ಟೂಡೆಂಟ್:
ಪ್ರಥಮ ರ್‍ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಮುಗಿಸಿರುವ ಅನ್ವಿತ್‌ರ ಕಲಿಕೆಯ ದಾಹ ಕಡಿಮೆಯಾಗಿಲ್ಲ. ಮತ್ತಷ್ಟು ಕಲಿಯುವ ಹಂಬಲವಿದೆ. ಇವರಿಗೆ ದೃಷ್ಟಿ ಇಲ್ಲದೇ ಇರಬಹುದು; ಆದರೆ ಜ್ಞಾನದ ಅರಿವು ಹೆಚ್ಚಾಗಿಯೇ ಇದೆ. ಯಾವುದೇ ವಿಷಯದ ಕುರಿತಂತೆ ನಿರರ್ಗಳವಾಗಿ ಮಾತನಾಡಬಲ್ಲರು. ಮನ ಮುಟ್ಟುವಂತೆ ವಿಷಯವನ್ನು ವಿವರಿಸಬಲ್ಲರು. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಷಯದಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿರುವ ಇವರು ಈಗ ಅದೇ ವಿವಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂದರೆ ಅವರ ಅವಿರತ ಶ್ರಮವೇ ಇದಕ್ಕೆ ಕಾರಣ.

ಪದವಿಯಲ್ಲಿ ಗೋಲ್ಡ್ ಮೆಡಲಿಸ್ಟ್…

ಮಂಗಳೂರು ತಾಲೂಕಿನ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿರುವ ಅನ್ವಿತ್ ಸೇವಾಭಾರತಿಯಡಿ ನಡೆಯುತ್ತಿರುವ ನಗರದ ರೋಮನ್ ಆಂಡ್ ಕ್ಯಾಥರಿನ್ ಲೋಬೊ ದೃಷ್ಟಿಮಾಂದ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿವರೆಗಿನ ಶಿಕ್ಷಣವನ್ನು ಪೂರೈಸಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ.87.05 ಅಂಕ ಗಳನ್ನು ಪಡೆದಿರುವ ಇವರು ಬಳಿಕ ಪಿಯುಸಿ ಶಿಕ್ಷಣವನ್ನು ಶೇ.88.01 ಅಂಕಗಳೊಂದಿಗೆ ಕೊದ್ರೋಳಿ ಗೋಕರ್ಣನಾಥೇಶ್ವರ ವಿದ್ಯಾ ಸಂಸ್ಥೆಯಲ್ಲಿ ಪೂರೈಸಿದ್ದಾರೆ. ಸಂತ ಅಲೋಶಿಯಸ್ ಕಾಲೇಜಿನಲ್ಲಿ ಶೇ.89,05 ಅಂಕಗಳೊಂದಿಗೆ ಬಿಎ ಪದವಿಯನ್ನು ಪೂರ್ಣಗೊಳಿಸಿದ್ದು, ಗೋಲ್ಡ್ ಮೆಡಲಿಸ್ಟ್ ಆಗಿ ಹೊರಹೊಮ್ಮಿ ದ್ದಾರೆ. ಬಳಿಕ ಮಂಗಳೂರು ವಿವಿಯಲ್ಲಿ ಶೇ.80.08 ಪಡೆದು ಪ್ರಥಮ ಸ್ಥಾನದೊಂದಿಗೆ ಸ್ನಾತಕೋತ್ತರ ಶಿಕ್ಷಣ ಪೂರ್ಣಗೊಳಿಸಿದ್ದಾರೆ.

ಸಾಧನೆಗೆ ತಾಯಿಯೇ ಮಾದರಿ:

ತನ್ನೆಲ್ಲಾ ಸಾಧನೆಗೆ ನನ್ನ ತಾಯಿಯೇ ಪ್ರೇರಕಶಕ್ತಿ. ಎಂಎ ವರೆಗಿನ ಪ್ರತಿ ಪಠ್ಯವನ್ನು ಅಮ್ಮನೇ ಓದಿ ನನಗೆ ಮನನ ಮಾಡಿದ್ದಾರೆ. ಹಾಗಾಗಿ ಅಮ್ಮನೂ ನನ್ನೊಂದಿಗೆ ಎಂಎ ಪೂರೈಸಿದಂತಾಗಿದೆ ಎಂದು ಹೆಮ್ಮೆಯಿಂದ ಹೇಳುವ ಅನ್ವಿತ್ ತನ್ನ ಮಾರ್ಗದರ್ಶಕರಾದ ಶಿಕ್ಷಕರನ್ನು ನೆನಪಿಸಲು ಮರೆಯುವುದಿಲ್ಲ.ಪ್ರತಿ ಹಂತದಲ್ಲಿ ತನ್ನನ್ನು ತಿದ್ದಿ ತೀಡಿದ ಗುರುಗಳನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ. ಶಿಕ್ಷಣದ ಎಲ್ಲಾ ಹಂತದಲ್ಲೂ ಗುರುಗಳ ಪ್ರೋತ್ಸಾಹ ನನಗೆ ದೊರೆತಿದೆ ಎನ್ನುತ್ತಾರವರು.

‘ಅಂಧತ್ವವಿದ್ದರೂ ಲಭ್ಯವಿರುವ ಟೆಕ್ನಾಲಜಿಯನ್ನು ಬಳಸಿ ಆತ ಉತ್ಸಾಹದಿಂದ ಕಲಿಯುತ್ತಾನೆ. ಅವನಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ತುಡಿತವಿದೆ. ಕಲಿಯುವ ವಿದ್ಯಾರ್ಥಿಗಳಲ್ಲಿ ಈ ಅಂಶ ಮುಖ್ಯವಾದುದು’ ಎನ್ನುತ್ತಾರೆ ಅನ್ವಿತ್‌ಗೆ ರಾಜ್ಯಶಾಸ್ತ್ರ ಉಪನ್ಯಾಸಕರಾಗಿದ್ದ ಮಂಗಳೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಜಯರಾಜ್ ಅಮೀನ್ ಅವರು.

ಅರಸಿ ಬಂದ ಪ್ರಶಸ್ತಿ ಗೌರವಗಳು:

ಅನ್ವಿತ್‌ರವರ ಸಾಧನೆಗೆ ಹಲವು ಪ್ರಶಸ್ತಿ ಗೌರವಗಳು ಸಂದಿವೆ. ಪದವಿಯಲ್ಲಿ ಅತ್ಯಧಿಕ ಅಂಕಗಳೊಂದಿಗೆ ರ್‍ಯಾಂಕ್ ಗಳಿಸಿರುವುದಕ್ಕೆ ನ್ಯಾಷನಲ್ ಫೆಡರೇಷನ್ ಆಫ್ ಬ್ಲೈಂಡ್, ಕರ್ನಾಟಕ ಇದರ ವತಿಯಿಂದ ೨೦೨೦ರಲ್ಲಿ ‘ಎನ್‌ಎಫ್‌ಬಿ ಪ್ರತಿಭಾ ಪ್ರಶಸ್ತಿ’ ದೊರೆತಿದೆ. 2021ರಲ್ಲಿ ಆಲ್ ಇಂಡಿಯಾ ಕಾನ್ಫಿಡರೇಷನ್ ಆಫ್ ಬ್ಲೈಂಡ್ ವತಿಯಿಂದ ೧೪ ಸಾವಿರ ನಗದಿನೊಂದಿಗೆ ‘ಕೃಷ್ಣ ಕುಮಾರಿ ವರ್ಮ ಮೆಮೋರಿಯಲ್ ಅವಾರ್ಡ್’ ದೊರೆತಿದೆ.

ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲೂ ಭಾಗಿ:

ಜಿಲ್ಲಾ ಮಟ್ಟದ ಹಲವು ರಸಪ್ರಶ್ನಾ ಸ್ಪರ್ಧೆಯಲ್ಲಿ ಬಹುಮಾನ, ರಾಜ್ಯಮಟ್ಟದ ರೇಡಿಯೋ ಕ್ವಿಝ್ ಸ್ಪರ್ಧೆಯಲ್ಲಿ ಮಂಗಳೂರು ಆಕಾಶವಾಣಿಯನ್ನು ಪ್ರತಿನಿಧಿಸಿ ನಾಲ್ಕನೇ ಸ್ಥಾನ ಸೇರಿದಂತೆ ಹಲವು ಬಹುಮಾನ ಗಳನ್ನು ತಮ್ಮದಾಗಿಸಿಕೊಂಡಿರುವ ಅನ್ವಿತ್ ಅವರು ‘ಮಹಿಳೆ ಮತ್ತು ಸಾಹಿತ್ಯ’ ವಿಷಯದ ಕುರಿತು ಮಂಡಿಸಿರುವ ಉಪನ್ಯಾಸವನ್ನು ಮಂಗಳೂರು ಆಕಾಶವಾಣಿ ಪ್ರಸಾರ ಮಾಡಿದೆ. ಪದವಿ ಶಿಕ್ಷಣದ ಸಂದರ್ಭ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುವ ಇವರು ಉಪನ್ಯಾಸ ನೀಡಿ ಸೈ ಎನಿಸಿಕೊಂಡಿದ್ದಾರೆ.
ಸಾಧಿಸುವ ಛಲವೊಂದಿದ್ದರೆ ಸಾಧನೆಗೆ ಯಾವುದೇ ಅಡ್ಡಿಯಾಗದು ಎಂಬುದಕ್ಕೆ ಅನ್ವಿತ್ ಜಿ. ಕುಮಾರ್ ಜ್ವಲಂತ ಉದಾಹರಣೆಯಾಗಿ ನಿಲ್ಲುತ್ತಾರೆ…ಸಾಧನೆಯ ಹಾದಿಯಲ್ಲಿರುವವರಿಗೆ ಮಾದರಿಯಾಗಿ ಕಾಣಿಸಿಕೊಳ್ಳುತ್ತಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!