ಉದ್ಯೋಗ ಇಲ್ಲದವರು ಇಲ್ಲಸಲ್ಲದ ಮಾತುಗಳನ್ನಾಡುತ್ತಾರೆ : ಸಚಿವ ಎನ್.ಮುನಿರತ್ನ

ಹೊಸದಿಗಂತ ವರದಿ,ಚಿತ್ರದುರ್ಗ:

ಸಚಿವ ಸಂಪುಟ ವಿಸ್ತರಣೆ ವಿಚಾರ ವರಿಷ್ಠರು, ಸಿಎಂ ಪರಮಾಧಿಕಾರಿ, ಜಿಲ್ಲಾ ಉಸ್ತುವಾರಿ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತೋಟಗಾರಿಕಾ ಮತ್ತು ಯೋಜನೆ ಸಾಂಖ್ಯಿಕ ಸಚಿವ ಎನ್.ಮುನಿರತ್ನ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರು ಕಾಂಗ್ರೆಸ್ ಮುಖಂಡರ ಜತೆ ಸಂಪರ್ಕದಲ್ಲಿದ್ದಾರೆಂಬ ಸಿದ್ದರಾಮಯ್ಯ, ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ಉದ್ಯೋಗವಿಲ್ಲದವರು ಇಲ್ಲಸಲ್ಲದ ಮಾತುಗಳನ್ನು ಆಡುತ್ತ್ತಿದ್ದಾರೆ. ಸರ್ಕಾರಕ್ಕೆ ಜನಪರ ಸಲಹೆ ನೀಡುವುದು ಬಿಟ್ಟು, ಬರೀ ರಾಜಕಾರಣ, ಅಧಿಕಾರ ದಾಹದಿಂದ ಕಾಂಗ್ರೆಸ್ ನಾಯಕರ ಕಾಲಹರಣ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಪಕ್ಷದಿಂದ ಯಾರೂ ಸಹ ಬೇರೆ ಪಕ್ಷ ಸೇರ್ಪಡೆ ಆಗುವ ಪ್ರಶ್ನೆಯೇ ಇಲ್ಲ. ನಾವೆಲ್ಲಾ ಒಟ್ಟಾಗಿ ಸಂತೋಷದಿಂದ ಕೆಲಸ ಮಾಡುತ್ತಿದ್ದೇವೆ. ಪಕ್ಷ ನಮ್ಮನ್ನು ಗೌರವಿಸಿದೆ. ನಾವೂ ಸಹ ಗೌರವದಿಂದ ನಡೆದುಕೊಳ್ಳುತಿದ್ದೇವೆ. ರಮೇಶ ಜಾರಕಿಹೊಳಿ ಕೈ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದಾರೆ. ಜಾರಕಿಹೊಳಿ ಹೇಳಿಕೆ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ. ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ, ಅವರನ್ನೇ ಕೇಳಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲೆಯ ಆರೂ ತಾಲೂಕಿನ ಸುಡುಗಾಡು ಸಿದ್ದ ಜನಾಂಗದವರನ್ನು ಗುರುತಿಸಿ ವಸತಿ ಮತ್ತು ಇತರೆ ಸೌಲಭ್ಯ ನೀಡಲು ಆದ್ಯತೆ ನೀಡಲಾಗುವುದು. ಬಯಲು ಸೀಮೆ ಅಭಿವೃಧ್ಧಿ ವ್ಯಾಪ್ತಿಯಲ್ಲಿ ೦೮ ಜಿಲ್ಲೆಯ ೫೮ ತಾಲೂಕುಗಳು ೭೦ ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಸದ್ಯ ವಾರ್ಷಿಕವಾಗಿ ಒಂದು ಕೋಟಿ ಮಾತ್ರ ಅನುದಾನ ನೀಡಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಲು ಕೋರಲಾಗುವುದು. ಬಯಲು ಸೀಮೆ ಪ್ರದೇಶವು ಮಳೆಯ ಕೊರತೆಯ ಪ್ರದೇಶವಾಗಿದು, ಅಂತರ್ಜಲ ಅಭಿವೃಧ್ಧಿ ಕೆಲಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!