ಇದೆಂಥ ವ್ಯಂಗ್ಯ? ದೆಹಲಿಯಲ್ಲಿ ಶೋಭಾಯಾತ್ರೆ ಮಾಡಿದವರೇ ಕಾನೂನಿಗೆ ಗುರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಾದ್ಯಂತ ಜಹಂಗೀರ್‌ಪುರಿಯ ಗಲಭೆ ಸದ್ದು ಮಾಡುತ್ತಿದೆ. ವಿಪರ್ಯಾಸವೆಂಬಂತೆ ಪೋಲೀಸರು ಗಲಭೆಕೋರರ ಬದಲಾಗಿ ಶೋಭಾಯಾತ್ರೆ ಕೈಗೊಂಡವರ ಮೇಲೆಯೇ ಎಫ್‌ಐಆರ್ ದಾಖಲಿಸಿದ್ದಾರೆ.‌ ಶೋಭಾಯಾತ್ರೆಗೆ ಅಗತ್ಯ ಅನುಮತಿ ಪಡೆದಿರಲಿಲ್ಲ ಎಂಬುದೇ ಸಂಘಟಕರ ಬಂಧನಕ್ಕೆ ಕಾರಣವಾಗಿದೆ.

ಹನುಮ ಜಯಂತಿಯನ್ನು ಆಚರಿಸಲು ಶೋಭಾ ಯಾತ್ರೆಯನ್ನು ಆಯೋಜಿಸಿದ್ದಕ್ಕಾಗಿ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳದ ದೆಹಲಿ ಘಟಕದ ಇಬ್ಬರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು ಅಪ್ರಾಪ್ತರು ಸೇರಿದಂತೆ 20 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

“ಏಪ್ರಿಲ್ 15 ರಂದು, ವಿಎಚ್‌ಪಿಯ ಜಿಲ್ಲಾ ಸೇವಾ ಪ್ರಮುಖ್ ಪ್ರೇಮ್ ಶರ್ಮಾ ಮತ್ತು ಸಹ ಕಾರ್ಯದರ್ಶಿ ಬ್ರಹ್ಮ ಪ್ರಕಾಶ್ ಅವರು ಮೆರವಣಿಗೆ ನಡೆಸಲು ಜಹಾಂಗೀರ್‌ಪುರಿ ಪೊಲೀಸ್ ಠಾಣೆಯಲ್ಲಿ ಅರ್ಜಿಯನ್ನು ಸಲ್ಲಿಸಿದರು. ಅವರಿಗೆ ಡಿಸಿಪಿ ಅನುಮತಿಯನ್ನು ತೆಗೆದುಕೊಳ್ಳಬೇಕು ಎಂದು ಮಾಹಿತಿ ನೀಡಲಾಯಿತು, ಆದರೂ ಅವರು ಏಪ್ರಿಲ್ 16 ರಂದು, ಯಾವುದೇ ಅನುಮತಿಯಿಲ್ಲದೆ, ಜನರನ್ನು ಒಟ್ಟುಗೂಡಿಸಿದರು ಮತ್ತು ಸ್ವಇಚ್ಛೆಯಿಂದ ʼಕಾನೂನುಬಾಹಿರʼವಾಗಿ ಮೆರವಣಿಗೆ ನಡೆಸಿದರು” ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೇ ಶೋಭಾಯಾತ್ರೆಯನ್ನು ಸಂಘಟಿಸಲು ಪ್ರಮುಖ ಪಾತ್ರವಹಿಸಿದ್ದ ಒಂದೇ ಮನೆಯ ಐವರು ಸದಸ್ಯರನ್ನು ಬಂಧಿಸಲಾಗಿದೆ. ಈ ಕುರಿತು ಬಂಧಿತರ ಮನೆಯ ದುರ್ಗಾ ಸರ್ಕಾರ್‌ ಹೀಗೆನ್ನುತ್ತಾರೆ “ದೆಹಲಿ ಪೊಲೀಸರು ತಮ್ಮ ಪತಿ, ಸೋದರ ಮಾವ ಮತ್ತು ಮೂವರು ಗಂಡು ಮಕ್ಕಳನ್ನು ಯಾವುದೇ ವಿವರಗಳನ್ನು ನೀಡದೆ ಕರೆದೊಯ್ದಿದ್ದಾರೆ. ವ್ಯಾಪಕವಾಗಿ ಹುಡುಕಾಟ ನಡೆಸಿದರೂ ನನ್ನ ಕುಟುಂಬದ ಐದು ಜನರ ಬಗ್ಗೆ ಏನೂ ತಿಳಿದಿಲ್ಲ. ಪೋಲೀಸರೂ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಕುಟುಂಬ ಸದಸ್ಯರ ಬಗ್ಗೆ ಯಾವುದೇ ಮಾಹಿತಿ ನೀಡದೇ ಸುಮ್ಮನೆ ಅಲೆಯುವಂತೆ ಮಾಡಲಾಗುತ್ತಿದೆ”.

ಒಂದೇ ಮನೆಯ ಎಲ್ಲ ಐದುಜನ ಪುರುಷ ಸದಸ್ಯರನ್ನು ಬಂಧಿಸಿರುವುದರಿಂದ ಕುಟುಂಬವು ಆಧಾರವಿಲ್ಲದೇ ಪರದಾಡುವಂತಾಗಿದೆ. ಆರ್ಥಿಕ ಸಂಕಷ್ಟದಲ್ಲಿರುವ ದುರ್ಗಾ ಸರ್ಕಾರ್ ಕುಟುಂಬವು ಮೂಲ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹೆಣಗಾಡುವಂತಾಗಿದೆ.

ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಶಾಂತಿಯುತವಾಗಿ ಮೆರವಣಿಗೆ ನಡೆಸಿದವರನ್ನು ಬಂಧಿಸಿ ಪೋಲೀಸರು ಏನು ಸಾಬೀತು ಮಾಡಹೊರಟಿದ್ದಾರೆ ಎಂಬುದು ತಿಳಿಯದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!