Friday, February 3, 2023

Latest Posts

ಸುರತ್ಕಲ್ ನ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ

ಹೊಸದಿಗಂತ ವರದಿ ಮಂಗಳೂರು:

ಸುರತ್ಕಲ್ ನ ಜಲೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೃಷ್ಣಾಪುರ ನೈತಂಗಡಿ ನಿವಾಸಿ ಶೈಲೇಶ್ ಅಲಿಯಾಸ್ ಶೈಲೇಶ್ ಪೂಜಾರಿ(21), ಉಡುಪಿಯ ಹೆಜಮಾಡಿ ನಿವಾಸಿ ಸವಿನ್ ಕಾಂಚನ್ ಅಲಿಯಾಸ್ ಮುನ್ನ (24) , ಕೃಷ್ಣಾಪುರ 3ನೇ ಬ್ಲಾಕ್ ನಿವಾಸಿ ಪವನ್ ಅಲಿಯಾಸ್ ಪಚ್ಚು (23) ಬಂಧಿತ ಆರೋಪಿಗಳು.

ಬಂಧಿತರಲ್ಲಿ ಇಬ್ಬರು ಜಲೀಲ್ ರನ್ನು ಫ್ಯಾನ್ಸಿ ಅಂಗಡಿಗೆ ನುಗ್ಗಿ ಚೂರಿಯಿಂದ ಇರಿದು ಕೊಲೆಗೈದವರು. ಮತ್ತೋರ್ವನು ಕೊಲೆ ಆರೋಪಿಗಳನ್ನು ಬೈಕ್ ನಲ್ಲಿ ಎಸ್ಕೇಪ್ ಮಾಡಿಸಲು ಸಹಕರಿಸಿದವನು. ಪೊಲೀಸ್ ತನಿಖಾ ತಂಡ ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಿದೆ. ಆರೋಪಿಗಳನ್ನು ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಆ ಬಳಿಕ ಮುಂದಿನ ತನಿಖೆಗೆ 14 ದಿನಗಳ ಕಾಲ ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್. ತಿಳಿಸಿದ್ದಾರೆ.

ಈ ಮೂವರು ಆರೋಪಿಗಳನ್ನು ನಿನ್ನೆ ರಾತ್ರಿ ವಶಕ್ಕೆ ತೆಗೆದುಕೊಳ್ಳಲಾಗಿದೆ‌. ಈ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾಗಿರುವ ಇನ್ನೂ ಕೆಲವರು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುತ್ತದೆ. ಆರೋಪಿಗಳಲ್ಲಿ ಇಬ್ಬರು ಈ ಹಿಂದೆ ವಿವಿಧ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದವರು.‌ ಆರೋಪಿಗಳಲ್ಲಿ ಓರ್ವನು 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿಯೂ ಭಾಗಿಯಾಗಿದ್ದನು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!