ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಹಾವಳಿ: ಹಸು ಬಲಿ

ಹೊಸದಿಗಂತ ವರದಿ,ಮಡಿಕೇರಿ:

ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ಆತಂಕ ಎದುರಾಗಿದ್ದು, ಹಸುಗಳ ಮೇಲೆ ದಾಳಿ ನಿರಂತರವಾಗಿದೆ.
ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದಲ್ಲಿ ಹಸುವನ್ನು ಬಲಿ ಪಡೆದಿರುವ ಹುಲಿ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಅಲ್ಲಿನ ನಿವಾಸಿ ಬಿ.ಜಿ.ಪೆಮ್ಮಯ್ಯ ಎಂಬವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿದ್ದು, ಕಳೆದರಡು ದಿನಗಳ ಹಿಂದೆಯಷ್ಟೇ ಬೆಳ್ಳೂರು ಗ್ರಾಮದ ರೈತರೊಬ್ಬರ ಹಸುವೂ ಬಲಿಯಾಗಿತ್ತು. ಕಳೆದ ವರ್ಷ ಅನೇಕ ಹಸುಗಳನ್ನು ಕೊಂದು ಹಾಕಿದ್ದ ಹುಲಿಯಿಂದ ಸುಮಾರು 3 ಮಾನವ ಜೀವ ಹಾನಿಯಾಗಿತ್ತು. ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿತ್ತಾದರೂ ಸ್ಥಳಾಂತರಗೊಂಡ ವನ್ಯಜೀವಿ ಇದೀಗ ಮತ್ತೆ ಮರಳಿರಬಹುದೆಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋಣಗೇರಿ ಗ್ರಾಮಸ್ಥರು ಹುಲಿಯನ್ನು ತಕ್ಷಣ ಸೆರೆ ಹಿಡಿಯಬೇಕು ಮತ್ತು ಹಸುವಿನ ಮಾಲಕರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಹುಲಿ ಸೆರೆಗೆ ಬೋನ್ ಇಡಲಾಗಿದೆ. ಹುದಿಕೇರಿ ಹಾಗೂ ಬಲ್ಯಮಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದಿಕೇರಿ, ಕೋಣಗೇರಿ, ಬೆಳ್ಳೂರು, ಬಲ್ಯಮಂಡೂರು, ಚಿಕ್ಕಮಂಡೂರು, ನಡಿಕೇರಿ, ತೂಚಮಕೇರಿ ಭಾಗದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿಗಳು ಮನವಿ ಮಾಡಿದ್ದಾರೆ.
ಸಾಕು ಪ್ರಾಣಿಗಳನ್ನು ಸುರಕ್ಷಿತವಾಗಿ ಕೊಟ್ಟಿಗೆಯಲ್ಲಿ ಕಟ್ಟಬೇಕು ಮತ್ತು ತೋಟದಲ್ಲಿ ಕೆಲಸ ಮಾಡುವಾಗ ಎಚ್ಚರ ವಹಿಸಬೇಕೆಂದು ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!