ಹೊಸದಿಗಂತ ಡಿಜಿಟಲ್ ಡೆಸ್ಕ್ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಅದು 1942ನೇ ಇಸವಿಯ ಸೆಪ್ಟೆಂಬರ್ 20ರ ದಿನ.. ಬ್ರಿಟೀಷರನ್ನು ದೇಶದಿಂದ ಹೊರಗಟ್ಟಲು ಆರಂಭಿಸಲಾದ ಕ್ವಿಟ್ ಇಂಡಿಯಾ ಚಳುವಳಿ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿತ್ತು.
ಪ್ರತಿಭಟನೆ, ಮೆರವಣಿಗೆ, ಚಳುವಳಿಗಳು, ಬ್ರಿಟೀಷ್ ಕಾನೂನುಗಳನ್ನು ಮುರಿಯುವ ಮೂಲಕ ಜನರು ಉಗ್ರವಾಗಿ ಹೋರಾಡುತ್ತಿದ್ದರು. ಅಸ್ಸಾಂನಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಭಾಗವಾಗಿ, ಸ್ವಾತಂತ್ರ್ಯ ಹೋರಾಟಗಾರರ ಗುಂಪುಗಳು ಮೆರವಣಿಗೆ ಮೂಲಕ ಪಟ್ಟಣದ ವಿವಿಧ ಪೊಲೀಸ್ ಠಾಣೆಗಳಿಗೆ ತೆರಳಿ ಮುತ್ತಿಗೆ ಹಾಕುತ್ತಿದ್ದವು. ಇಂತಹ ತಂಡಗಳನ್ನು ‘ಮೃತ್ಯು ವಾಹಿನಿ’ ಅಥವಾ ಡೆತ್ ಸ್ಕ್ವಾಡ್ ಎಂದು ಕರೆಯಲಾಗುತ್ತಿತ್ತು. ಈ ಮೃತ್ಯು ವಾಹಿನಿ ತಂಡಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳೇ ಇರುತ್ತಿದ್ದರು. ಆ ದಿನ ಮೃತ್ಯುವಾಹಿನಿ ತಂಡವೊಂದು ಧೆಕಿಯಾಜುಲಿಯಲ್ಲಿದ್ದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಹೊರಟಿತ್ತು. ಆ ಗುಂಪಿನಲ್ಲಿ ತಿಲೇಶ್ವರಿ ಬರುವಾ ಎಂಬ 12 ವರ್ಷ ಪ್ರಾಯದ ಅತ್ಯಂತ ಧೈರ್ಯಶಾಲಿ ಬಾಲಕಿಯೂ ಹೆಜ್ಜೆ ಹಾಕುತ್ತಿದ್ದಳು.
ದೇಕಿಯಾಜುಲಿ ನಗರದ ಹೊರವಲಯದಲ್ಲಿರುವ ನಿಜ್-ಬೋರ್ಗಾಂವ್ ಗ್ರಾಮದ ಬಾಬಾಕಾಂತ ಬರುವಾ ಅವರ ನಾಲ್ಕು ಮಕ್ಕಳಲ್ಲಿ ತಿಲೇಶ್ವರಿ ಹಿರಿಯಳು. ಸ್ವಾತಂತ್ರ್ಯ ಹೋರಾಟಗಾರರು ಪ್ರತಿನಿತ್ಯ ಹಾಡುತ್ತಿದ್ದ ದೇಶಭಕ್ತಿ ಗೀತೆಗಳಿಂದ ಪ್ರಭಾವಿತಳಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದವಳು. ಹೋರಾಟಗಾರರ ಗುಂಪು ಪೊಲೀಸ್ ಠಾಣೆಯತ್ತ ಸಮೀಪಿಸಿತು. ವಸಾಹತುಶಾಹಿ ಶಕ್ತಿಯ ಪ್ರತೀಕವಾಗಿದ್ದ ಪೊಲೀಸ್ ಠಾಣೆಯ ಮೇಲ್ಭಾಗದಲ್ಲಿ ಹಾರಾಡುತ್ತಿದ್ದ ತ್ರಿವರ್ಣ ಧ್ವಜವನ್ನು ಬಿಚ್ಚುವುದು ಹೋರಾಟಗಾರರ ಗುರಿಯಾಗಿತ್ತು. ಆದರೆ ಅವರು ಠಾಣೆಯತ್ತ ಬರುತ್ತಲೇ ಪೊಲೀಸರು ಅವರತ್ತ ಗುಂಡುಹಾರಿಸುವ ಬೆದರಿಕೆ ಒಡ್ಡಿದರು. ಆದರೆ ಹೋರಾಟಗಾರರು ಅದಕ್ಕೆ ಜಗ್ಗಲಿಲ್ಲ.. ಆದೇಶ ಧಿಕ್ಕರಿಸಿ ಠಾಣೆ ಮೇಲೇರಿದವರನ್ನು ಕೆಲವೇ ಸೆಕೆಂಡುಗಳಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಆದರೂ ಗುಪಿನಲ್ಲಿದ್ದವರು ಒಬ್ಬೊಬ್ಬರಾಗಿ ಅವರನ್ನೇ ಹಿಂಬಾಲಿಸಿದರು.
ನಾಥ್, ಕುಮೋಲಿ ದೇವಿ ಮತ್ತು ಮೊಹಿರಾಮ್ ಕೋಚ್ ನಂತರ ನಾಲ್ಕನೆಯವಳಾಗಿ 12 ರ ಬಾಲೆ ತಿಲೇಶ್ವರಿ ಬರುವಾ ಪೊಲೀಸರ ಗುಂಡೇಟು ತಿಂದು ನೆಲಕ್ಕುರುಳಿದಳು. ಆನಂತರವೂ ಬ್ರಿಟೀಷ್ ಅಧಿಕಾರಿಗಳ ರಕ್ತದಾಹ ತೀರಲಿಲ್ಲ. ಅಂದು ನಡೆದ ಭೀಕರ ಗುಂಡಿನ ದಾಳಿಯಲ್ಲಿ ಹದಿನೈದು ಹೋರಾಟಗಾರರು ಮಡಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪೊಲೀಸರ ದರ್ಪ ದೌರ್ಜನ್ಯ ಅಮಾನುಷತೆಗಳಿಗೆ ಈ ಘಟನೆ ಜೀವಂತ ಸಾಕ್ಷಿಯಾಗಿದೆ. ಅಂದು ಮಡಿದವರ ಸ್ಮರಣಾರ್ಥವಾಗಿ ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ಧೆಕಿಯಾಜುಲಿ ಪಟ್ಟಣದಲ್ಲಿ ಸೆ. 20 ಅನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲೇ ಬಲಿದಾನಗೈದ ಅತ್ಯಂತ ಕಿರಿಯ ವ್ಯಕ್ತಿ ತಿಲೇಶ್ವರಿ ಬರುವಾ. ಆದರೆ ನಮ್ಮ ಚರಿತ್ರೆಯ ಪುಸ್ತಕಗಳಲ್ಲಿ 12 ವರ್ಷದ ಬಾಲಕಿ ದೇಶಕ್ಕಾಗಿ ಮಾಡಿದ ಅತ್ಯುನ್ನತ ತ್ಯಾಗದ ಬಗ್ಗೆ ಸರಿಯಾದ ಉಲ್ಲೇಖಗಳೇ ಇಲ್ಲ. ತಿಲೇಶ್ವರಿ ಬರುವಾ ಬಗ್ಗೆ ತಿಳಿದುಕೊಂಡವರು ಬಹಳವೇ ಕಡಿಮೆ ಮಂದಿ. ಅಸ್ಸಾಂ ಆಡಳಿತಗಾರರು, ಇತಿಹಾಸಕಾರರು ಮತ್ತು ಬುದ್ಧಿಜೀವಿಗಳು ಆಕೆಯ ಧೈರ್ಯ, ತ್ಯಾಗಕ್ಕೆ ನೀಡಬೇಕಾದ ಮನ್ನಣೆಯನ್ನು ನೀಡಲಿಲ್ಲ. ಅಸ್ಸಾಂನಲ್ಲಿ ಎರಡು ವೈದ್ಯಕೀಯ ಕಾಲೇಜುಗಳ ಶಂಕು ಸ್ಥಾಪನೆಗೆ ತೆರಳಿದ್ದ ಪ್ರಧಾನಿ ಮೋದಿ ಈ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ಮಾತನಾಡಿದ್ದರು. ಆ ಬಳಿಕ ಹೋರಾಟಗಾರಿಗೆ ಕೊಂಚವಾದರೂ ಮನ್ನಣೆ ಸಿಕ್ಕಿದೆ. ಸೆಪ್ಟೆಂಬರ್ 20ನ್ನು ಹುತಾತ್ಮರ ದಿನವನ್ನಾಗಿ ಆಚರಿಸಲಾಗುತ್ತಿದೆ.