Wednesday, June 29, 2022

Latest Posts

ಉದ್ಯಮಿಯಾಗಲು ಹಣಕ್ಕಿಂತ ಛಲ ಮುಖ್ಯ : ಸಚಿವ ಮುರುಗೇಶ್ ನಿರಾಣಿ

ಹೊಸದಿಗಂತ ವರದಿ, ತುಮಕೂರು:

ಉದ್ಯಮಿಯಾಗಬೇಕು ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ನನ್ನ ದೇಶ, ನನ್ನ ರಾಜ್ಯಕ್ಕೆ ಕೊಡುಗೆ ನೀಡಬೇಕು, ದೇಶದ ಉತ್ಪಾದಕತೆಯಲ್ಲಿ(ಜಿಡಿಪಿ) ನನ್ನದು ಸಹ ಪಾಲು ಮತ್ತು ಪಾತ್ರ ಇರಬೇಕು” ಎಂಬ ಮಹತ್ತರ ಆಲೋಚನೆಗಳನ್ನು ನಮ್ಮ ಯುವ ಜನಾಂಗ ಬೆಳೆಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು, ಉದ್ಯಮಿಯಾಗಲು ಹಣಕ್ಕಿಂತ ಛಲ ಮುಖ್ಯ ಎಂಬುದನ್ನು ಯುವಜನತೆ ಅರಿಯಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ. ಮುರುಗೇಶ್ ಆರ್. ನಿರಾಣಿ ಅವರು ಕರೆ ನೀಡಿದರು.
ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವತಿಯಿಂದ ಶ್ರೀ ಸಿದ್ಧಾರ್ಥ ಮೆಡಿಕಲ್ ಕಾಲೇಜು ಬಳಿಯ ಹೆಚ್.ಎಮ್.ಗಂಗಾಧರಯ್ಯ ಮೆಮೋರಿಯಲ್ ಸಭಾಂಗಣದಲ್ಲಿಂದು ಆಯೋಜಿಸಲಾಗಿದ್ದ “ಉದ್ಯಮಿಯಾಗು-ಉದ್ಯೋಗ ನೀಡು” ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೆಗಳ ಹೂಡಿಕೆಗೆ ಕರ್ನಾಟಕ ರಾಜ್ಯ ದೇಶದಲ್ಲೇ ಅತ್ಯುತ್ತಮ ತಾಣವಾಗಿದ್ದು, ವಿದ್ಯುತ್ ನೀರು ಸೇರಿದಂತೆ ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದುವ ಮೂಲಕ ಸಂಪದ್ಬರಿತವಾಗಿದೆ. ಅದರಲ್ಲೂ ಬೆಂಗಳೂರು ಮತ್ತು ತುಮಕೂರು ನಗರಗಳು ಕೈಗಾರಿಕೆಗಳಿಗೆ ಸೂಕ್ತವಾಗಿವೆ, ೨೮೮ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳು, ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕೌಶಲ್ಯ ತರಬೇತಿ ಸಂಸ್ಥೆಗಳು ಬೆಂಗಳೂರು ಮತ್ತು ತುಮಕೂರಿನಲ್ಲಿ ಸ್ಥಾಪನೆಯಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
ಇನ್ಫೋಸಿಸ್‌ನ ಸುಧಾಮೂರ್ತಿ, ಕೈಗಾರಿಕೋಧ್ಯಮಿ ಗೌತಮ್ ಅದಾನಿ, ವಿ.ಆರ್.ಎಲ್ ಸಮೂಹ ಸಂಸ್ಥೆಯ ವಿಜಯ ಸಂಕೇಶ್ವರ ಮುಂತಾದವರು ಸಣ್ಣ ಉದ್ಯಮಗಳನ್ನು ಸ್ಥಾಪಿಸಿ, ಜೀವನದಲ್ಲಿ ಯಶಸ್ಸು ಕಂಡಿದರ‍್ದೆ, ಇವರು ಸ್ಥಾಪಿಸಿದಂತಹ ಸಂಸ್ಥೆಗಳಲ್ಲಿ ಲಕ್ಷಾಂತರ ಜನರು ಉದ್ಯೋಗ ಪಡೆದು ಜೀವನ ನಡೆಸುತ್ತಿದ್ದಾರೆ. ಇವರೆಲ್ಲರೂ ಇಂದಿನ ಯುವ ಜನಾಂಗಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ದಿಮೆದಾರರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ (ಕೆಐಎಡಿಬಿ) ಮೂಲಕ ಉದ್ಯಮ ಸ್ಥಾಪಿಸಲು ಕೈಗಾರಿಕಾ ನಿವೇಶನಕ್ಕೆ ಶೇ. 75ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಇದೇ ಸೌಲಭ್ಯ ಆರ್ಥಿಕವಾಗಿ ಹಿಂದುಳಿದವರಿಗೂ ಲಭ್ಯವಿದೆ. ಜವಳಿ ಉದ್ಯಮ ಸ್ಥಾಪಿಸಲು ಶೇ. 60ರಿಂದ 70ರಷ್ಟು ಬ್ಯಾಂಕ್‌ನಿOದ ಸಬ್ಸಿಡಿ ಹಾಗೂ ಸರ್ಕಾರದಿಂದ ಶೇ.40ರಷ್ಟು ಸಬ್ಸಿಡಿ ಕೊಡಲಾಗುತ್ತದೆ. 5 ವರ್ಷದವರೆಗೆ ಇಂಟರ್‌ಸಬ್ಸಿಡಿ ಸಹ ದೊರೆಯಲಿದೆ. ಇದಲ್ಲದೆ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಭಿಗಳಾಗಲು ಕಬ್ಬಿನ ರಸ, ಇದರಿಂದ ಉತ್ಪಾದನೆಯಾಗುವ ಮಲಾಸಿಸ್(ಕಾಕಂಬಿ), ಅಕ್ಕಿ, ಜೋಳ ಮುಂತಾದವುಗಳಿOದ ಉತ್ಪಾದಿಸಲ್ಪಡುವ ಎಥೆನಾಲ್ ಉದ್ಯಮಕ್ಕೆ ಕೇಂದ್ರ ಸರ್ಕಾರದ ಶೇ. 95ರಷ್ಟು ಸಾಲ ಸೌಲಭ್ಯ ದೊರೆಯಲಿದೆ. ಇಂತಹ ಯೋಜನೆಗಳ ಸದುಪಯೋಗವನ್ನು ಯುವಜನಾಂಗ ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು. ಉದ್ಯಮಿಯಾಗುವ ಮೂಲಕ ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಕರೆ ನೀಡಿದರು.
ಇಂದಿನ ಕಾರ್ಯಗಾರದಲ್ಲಿ ಭಾಗವಹಿಸಿರುವ ಯುವ ಜನತೆ ತಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ನೋಂದಣಿ ಮಾಡಿಕೊಂಡಲ್ಲಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಒಂದು ವಾರದಿಂದ ಒಂದು ತಿಂಗಳವರೆಗೆ ತರಬೇತಿ ನೀಡಿ ಉದ್ಯಮ ಸ್ಥಾಪಿಸಲು ಸಹಕಾರ ನೀಡಲಾಗುವುದು ಎಂದರು.
ಮುಂದಿನ 10 ವರ್ಷದಲ್ಲಿ ತುಮಕೂರು ಮತ್ತು ಶಿರಾ ಮಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಲಿದ್ದು, ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆಗಳಿವೆ. ರೈತರ ಸಹಮತ ಪಡೆದು 15 ಸಾವಿರ ಎಕರೆ ಭೂಮಿಯನ್ನು ಕೈಗಾರಿಕಾ ಸ್ಥಾಪನೆಗೆ ಒದಗಿಸಲಾಗಿದ್ದು, ಇದರಿಂದ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದಕ ವಲಯ ಸ್ಥಾಪನೆಗೆ ಅನುಕೂಲವಾಗಿದೆ ಎಂದರು.
ಮುಂಬರುವ ನವೆಂಬರ್ ತಿಂಗಳಿನ 2ರಿಂದ 4ರವೆರೆಗೆ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ ಬೃಹತ್ ಸಮ್ಮೇಳನ’ವನ್ನು ಏರ್ಪಡಿಸಲಿದ್ದು, ಈ ಮೇಳದಲ್ಲಿ ಜಗತ್ತಿನ 400ಕ್ಕೂ ಹೆಚ್ಚಿನ ಹೆಸರಾಂತ ಕಂಪನಿಗಳು ಭಾಗವಹಿಸಲಿದ್ದು, 5 ಲಕ್ಷ ಕೋಟಿ ರೂ.ಹಣ ರಾಜ್ಯಕ್ಕೆ ಹರಿದು ಬರಲಿದೆ ಎಂದರು.
ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಸಂಸದ ಜಿ.ಎಸ್.ಬಸವರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಓ ಡಾ.ಎನ್ ಶಿವಶಂಕರ್, ಇಲಾಖೆಯ ನಿರ್ದೇಶಕರಾದ ಶ್ರೀ ಸತ್ಯಭಾಮ, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಸಿಇಓ ಡಾ.ಕೆ. ವಿದ್ಯಾಕುಮಾರಿ, ಎಂಎಸ್‌ಎಇ ಮತ್ತು ಪಿಪಿ ಅಪರ ನಿರ್ದೇಶಕ ಹೆಚ್.ಎಂ. ಶ್ರೀನಿವಾಸ್ ಕರ್ನಾಟಕ ಉದ್ಯೋಗ ಮಿತ್ರ ಎಂ.ಡಿ. ದೊಡ್ಡ ಬಸವರಾಜು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗೇಶ್ ಮತ್ತು ಉದ್ಯಮಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss